ನನ್ನ ಗೆಳೆಯ...
ಎಲ್ಲರಂತೇ ನಂಗೂ ಒಬ್ಬ ಗೆಳೆಯ ಬೇಕು ಅಂತ ಅನಿಸಿದಾಗ ಸಿಕ್ಕಿದವನೇ 'ಅವನು'. ದಿನಗಳೆದಂತೆ ಅವನನ್ನು ಬಿಟ್ಟಿರಲಾರದಷ್ಟು ಹಚ್ಚಿಕೊಂಡುಬಿಟ್ಟೆ. ಅವನೂ ಅಷ್ಟೆ. ಅವನು ನಂಗೆ ಸರಿಯಾಗಿ ಪರಿಚಯವಾಗಿದ್ದು ಹಾಸ್ಟೆಲ್ನಲ್ಲಿದ್ದಾಗ. ಅಪ್ಪ-ಅಮ್ಮನಿಂದ ದೂರವಾಗಿ ಹೊಸ ಫ್ರೆಂಡ್ಸ್ಗಳನ್ನು ಮಾಡಿಕೊಳ್ಳಲು ಹೆಣಗುತ್ತಿದ್ದಾಗ ಸಿಕ್ಕಿದವನೇ ಅವನು. ಆ ದಿನಗಳಲ್ಲಿ ಅವನಷ್ಟು ಚೆನ್ನಾಗಿ ನನ್ನನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ ಅಂತ ಅನ್ನಿಸುತ್ತಿತ್ತು. ನಾನು ರೀಡಿಂಗ್ ಟೈಮ್ನಲ್ಲಿ ಪುಸ್ತಕ ಬಿಡಿಸುವಷ್ಟರಲ್ಲಿ ಅವನು ನನ್ನ ಮುಂದೆ ಹಾಜರಾಗುತ್ತಿದ್ದ. ಅಲ್ಲ, ವಾರ್ಡನ್ ಕಣ್ಣು ತಪ್ಪಿಸಿ ಅವನು ಹೇಗೆ ನನ್ನ ರೂಮ್ ಒಳಕ್ಕೆ ಬರುತ್ತಿದ್ದ ಅನ್ನೋದೇ ನನಗೆ ಆಶ್ಚರ್ಯ. ಅಷ್ಟೇ ಅಲ್ಲ, ವಾರ್ಡನ್ ರೂಮ್ ಚೆಕ್ ಮಾಡಲು ಬರುವಾಗ ಅವನು ಅಲ್ಲಿಂದ ಮಾಯವಾಗಿಬಿಡುತ್ತಿದ್ದ. ಅವನಿಗೆ ಕಾದೂ ನಾನು ಸೋಮಾರಿಯಾದೆ. ಪರಿಣಾಮ ಮಾರ್ಕ್ಸ್ ಕಾರ್ಡಿನಲ್ಲಿ ಕಡಿಮೆ ಅಂಕ. ತಕ್ಷಣ ಅಪ್ಪ ನನ್ನನ್ನು ಹಾಸ್ಟೆಲ್ ಬಿಡಿಸಿ ಮನೆಯಿಂದಲೇ ಕಾಲೇಜಿಗೆ ಹೋಗುವ ವ್ಯವಸ್ಥೆ ಮಾಡಿದ ಮೇಲೆ ನನ್ನ ಅವನ ಭೇಟಿಗೆ ಬ್ರೇಕ್ ಬಿತ್ತು. ಮನೆಯಲ್ಲಿ ಭೇಟಿಗೆ ಅವಕಾಶವಿಲ್ಲ ಎಂದಾಕ್ಷಣ ಅವನು ಆರಿಸಿಕೊಂಡಿದ್ದು ಬಸ್.
ಬಸ್ಸಲ್ಲಿ ಅವನ ಆಟ ಹೇಳತೀರದು. ಬಸ್ಸಲ್ಲಿ ನಿಂತರೂ ಕೂಂತರೂ ನನಗೆ ಅವನದೇ ಧ್ಯಾನ. ಎಷ್ಟೋ ಬಾರಿ ಅವನು ಜೊತೆಯಲ್ಲಿದ್ದ ಕಾರಣ ನಾನು ನನ್ನ ಸ್ಟಾಪ್ನಲ್ಲಿ ಇಳಿಯದೇ ಮುಂದಿನ ಸ್ಟಾಪ್ನಲ್ಲಿ ಇಳಿದಿದ್ದೆ ಹಾಗೂ ಕಂಡಕ್ಟರ್ ಕೈಯಿಂದ ಬಯ್ಸಿಕೊಂಡಿದ್ದೆ. ಮನೆಗೆ ಬಂದು ರೂಮಲ್ಲಿ ಕುಳಿತುಕೊಂಡ ತಕ್ಷಣ ಅವನು ಅಲ್ಲಿಗೂ ಹಾಜರಾಗಿಬಿಡುತ್ತಿದ್ದ. ಅಲ್ಲಿಯೂ ಅವನ ತೆಕ್ಕೆಗೆ ನಾನು ಬೀಳುತ್ತಿದ್ದೆ. ಅವನ ತೆಕ್ಕೆಯಲ್ಲಿ ನಾನು ಹೊಸ ಹೊಸ ಕನಸುಗಳನ್ನು ಕಾಣುತ್ತಿದ್ದೆ. ಅಷ್ಟಕ್ಕೂ ಅವನು ಬಂದ ಮೇಲೆ ತಾನೇ ನಾನು ಕನಸುಗಳನ್ನು ಕಾಣಲು ಪ್ರಾರಂಭಿಸಿದ್ದು?
ಕ್ಲಾಸಿನಲ್ಲಿ ಮೇಡಂ ಪಾಠ ಮಾಡುತ್ತಿದ್ದಾಗಲೇ ಅವನು ಬಳಿ ಬರುತ್ತಿದ್ದ. ಮೇಡಂ ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸುತ್ತಿದ್ದಾಗ ಇಡೀ ಕ್ಲಾಸ್ ಗೊಳ್ಳೆಂದು ನಕ್ಕಿತು. ಮೇಡಂ ಹೇಳಿದರು; ಇನ್ನಾದರೂ ದೂರವಿಡು ಅವನನ್ನು. ಆದ್ರೆ ಹೇಗೆ ಅವನಿಂದ ದೂರವಾಗಲಿ ನಾನು?
ನೋಟಿಸ್ ಬೋರ್ಡಿನಲ್ಲಿ ಎಕ್ಸಾಮ್ ಟೈಮ್ ಟೇಬಲ್ ಹಾಕಿದ್ದಾರೆ. ಆ ಕಾರಣಕ್ಕಾದ್ರೂ ಸೀರಿಯಸ್ಸಾಗಿ ಓದ್ಬೇಕು ಅಂತ ಪುಸ್ತಕ ತೆಗೆಯುವಷ್ಟರಲ್ಲಿ ಬರುತ್ತಿದ್ದ ಅವನ ತೋಳುಗಳಲ್ಲಿ ನಾನು ಬಂಧಿಯಾಗಿಬಿಡುತ್ತಿದ್ದೆ. ಅವನ ಜೊತೆ ಕಳೆಯುವ ಗಂಟೆಗಳೂ ಸಹ ಕ್ಷಣಗಳಂತೆ ಕಳೆದು ಹೋಗಿ ಬಿಡುತ್ತಿದ್ದವು.
ಅಪ್ಪ ಬಯ್ಯುತ್ತಾ ಹೇಳಿದ್ರು: ಪರೀಕ್ಷೆ ಹತ್ತಿರವಾಯಿತು. ಇನ್ನಾದ್ರೂ ಅವನನ್ನು ಬಿಟ್ಟು ಪರೀಕ್ಷೆಗೆ ಚೆನ್ನಾಗಿ ಪ್ರಿಪೇರ್ ಆಗು. ಆದ್ರೆ ಹೇಗೆ ನಾನು ಅವನಿಂದ ದೂರವಾಗ್ಲಿ? ನೀವೇ ಹೇಳಿ ಫ್ರೆಂಡ್ಸ್, ಅವನನ್ನು ಬಿಟ್ಟು ನಾನು ಹೇಗೆ ಬಾಳಲಿ? ನಂಗೆ ಗೊತ್ತಿಲ್ಲ. ನಾನು ಹೇಗೆ ಅವನ ಬಲೆಗೆ ಬಿದ್ದೆ ಅಂತ. ಹ್ಞಾ... ಅಷ್ಟೆಲ್ಲ ಹೇಳಿ ಅವನ ಹೆಸರು ಹೇಳೋದನ್ನೇ ಮರೆತಿದ್ದೆ. ಸಾರಿ ಫ್ರೆಂಡ್ಸ್ ಅವನೇ ನನ್ನ ಪ್ರೀತಿಯ ಗೆಳೆಯ, ನಿದ್ದೆ'.
-ಪಲ್ಲವಿ ಎಂ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

