ಮಕರಂದ/ದೋಣಿ

ವ್ಯೋಮಾಯಾನ

ಕವಿ ಚನ್ನಣ್ಣ ವಾಲಿಕಾರ ಅವರು ಕನ್ನಡ ಕಾವ್ಯಲೋಕಕ್ಕೆ ಹೊಸ ಪ್ರಕಾರ ಪರಿಚಯಿಸಿದ್ದಾರೆ. ಅದು ಗಪದ್ಯ.

ವ್ಯೋಮಾಯಾನ
Published On :

ಕವಿ ಚನ್ನಣ್ಣ ವಾಲಿಕಾರ ಅವರು ಕನ್ನಡ ಕಾವ್ಯಲೋಕಕ್ಕೆ ಹೊಸ ಪ್ರಕಾರ ಪರಿಚಯಿಸಿದ್ದಾರೆ. ಅದು ಗಪದ್ಯ. ಚನ್ನಣ್ಣ ತುಂಬಾ ಹಿಂದೆ ಬರೆದ 'ಬೆಳ್ಯ' ಎಂಬ ಕಿರುಕಾದಂಬರಿ ಕೂಡ ಪ್ರಯೋಗಾರ್ಥದಲ್ಲೇ ಪರಿಚಯಿಸಿದರು. ಈಗ ಅಲ್ಪವಿರಾಮ, ಪೂರ್ಣವಿರಾಮ, ಪ್ಯಾರಾ...ಯಾವುದೂ ಇಲ್ಲದ 'ಗಪದ್ಯ'ವನ್ನು ಕೊಟ್ಟಿದ್ದಾರೆ. ಆ ಗಪದ್ಯ ಹೇಗಿರುತ್ತದೆ, ಆ ಕೃತಿಯೊಳಗೆ ಏನಿದೆ ಎಂಬುದರ ಹುಡುಕಾಟ ಈ ಲೇಖನದಲ್ಲಿದೆ...

ಸ್ಥಾಪಿತ ಓದಿನಾಚೆ ಬರುವ ಸೃಜನಶೀಲ ಬರವಣಿಗೆ ಒಂದಿಷ್ಟು ಹೊಸ ಚಿಂತನೆಗಳಿಗೆ ಹಚ್ಚುತ್ತದೆ. ಈ ಮಾತಿಗೆ ಮಾದರಿಯಾಗಿದ್ದು ಹಿರಿಯ ಕವಿ ಚನ್ನಣ್ಣ ವಾಲಿಕಾರರ 'ವ್ಯೋಮಾವ್ಯೋಮ' ಮಹಾಕಾವ್ಯ. ನವರಸಸಹಿತ ಹಲವು ಕಾವ್ಯ ಸಿದ್ಧಾಂತದ ಕಟ್ಟಳೆಗಳಲ್ಲಿ ಬರೆದ ಮಹಾಕಾವ್ಯಗಳಿಗಿಂತ ತೀರಾ ವಿರುದ್ಧ ದಿಕ್ಕಿನಲ್ಲಿ ನಿಲ್ಲುವ ಮಹಾಕಾವ್ಯ.
ಕವಿ ಚನ್ನಣ್ಣ ವಾಲಿಕಾರ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿದಾಗಿನಿಂದ ಇಂಥ ಹಲವು ಭಾಷಾ ಕಟ್ಟಳೆಗಳನ್ನು ಉಲ್ಲಂಘಿಸುತ್ತಲೇ ಬಂದವರು. ಅದು ಅನುಭವದ ದ್ರವ್ಯ, ಭಾಷಾ ಬಳಕೆ, ಅಥವಾ ಗದ್ಯಕಸಿಕಾವ್ಯ ಬರೆಯುವ ಮೂಲಕವಿರಬಹುದು. ಹೀಗೆಂದೆ 'ವ್ಯೋಮಾ ವ್ಯೋಮ'ವನ್ನು ಮಹಾಛಂದಸ್ಸಿನ, ಸಂಕೀರ್ಣ, ಗಪದ್ಯ ಹಾಡುಗಬ್ಬ ಎಂದು ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸಿಕೊಂಡಿದ್ದಾರೆ. ಹಾಡುಗಬ್ಬ, ಗಪದ್ಯ ಹಾಗೂ ಮಹಾಛಂದಸ್ಸುಗಳನ್ನು ಹುಡುಕುತ್ತ ಹೊರಟರೆ ನಕಾಶೆ ಇಲ್ಲದ ನಾಡಿನಂತೆ ಕಾಡುತ್ತದೆ.
'ವ್ಯೋಮಾ ವ್ಯೋಮ' ಓದುತ್ತಿದ್ದಂತೆ ನಿಲ್ದಾಣಗಳಿಲ್ಲದ ದೀರ್ಘಯಾನದ ಅನುಭವ ಉಂಟಾಗದೇ ಇರಲಾರದು. ನಾಲ್ಕನೂರಾ ಐವತ್ತು ಪುಟಗಳನ್ನು ಪ್ರಾಮಾಣಿಕವಾಗಿ ಅಕ್ಷರಕ್ಷರ ಓದಿದ ನಂತರ ಲಾಂಗ್ಜಂಪಿನ ರೀತಿಯಲ್ಲಿ ಬಾಕಿ ಐದನೂರಾ ಎಂಬತ್ತು ಪುಟಗಳನ್ನು ಓದಿದೆ. ಒಂದು ನಿರಂತರ ಪ್ರಜ್ಞಾಪ್ರವಾಹದಲ್ಲಿ, ಸಾವಿರಾರು ಅನುಭವಗಳು ಹರಿದುಹೋಗುವ ಮಹಾನದಿ ಈ ಕೃತಿ ಎಂದೆನಿಸಿತು.
ಓದುತ್ತಾ ಹೋದಂತೆ ಸುಲಭವೆನಿಸುತ್ತ, ಆನಂತರದಲ್ಲಿ ಓದಿದೆಲ್ಲ ಅನುಭವಗಳು ಸಂಪೂರ್ಣವಾಗಿ ಆಳಕ್ಕಿಳಿಯದೇ ಹೋದದ್ದೇ ಹೆಚ್ಚು. ಗದ್ಯ ನೇಯ್ಗೆಯಲ್ಲಿರುವ ಒಂದು ಮೂಲ ಕಾವ್ಯದ ದನಿ- ಲಯಗಳ ನೂಲನ್ನು ಇಡಿಯಾಗಿ ಕಾವ್ಯ ತೆಕ್ಕೆಯಲ್ಲಿ ಹಿಡಿದಿಟ್ಟ ಈ ಕೃತಿಗೆ ಚನ್ನಣ್ಣ 'ಗಪದ್ಯ' ಎಂದಿದ್ದಾರೆ. ಸುಲಭವಾಗಿ ಕಟ್ಟಿದ ಅನುಭವಗಳ ರಾಶಿಯನ್ನು ಹಿಗ್ಗಿದ ಏಕಸಾಲಿನ ಮಹಾಛಂದಸ್ಸಿನ ರೂಪದಲ್ಲಿ ಹಿಡಿಯಲೆತ್ನಿಸಿದ್ದಾರೆ. ಒಬ್ಬ ಅತ್ಯಂತ ಪ್ರಜ್ಞಾವಂತ ಮನುಷ್ಯ ತನ್ನ ಜೀವಿತಾವಧಿಯ ನೆನಪಿನ ಚಿಪ್ಪನ್ನು ಕಾವ್ಯದ ಕಂಪ್ಯೂಟರಿನಲ್ಲಿ ಬಿಚ್ಚಿದ ರೀತಿಯಾಗಿ ಈ ಮಹಾಕಾವ್ಯ ಗೋಚರಿಸುತ್ತದೆ.  
'ವ್ಯೋಮಾ ವ್ಯೋಮ' ಎಂಬುದೇ ಒಂದು ಕ್ಲುಪ್ತಾನುಭವದ ನುಡಿಗಟ್ಟು. ಇದನ್ನು ಆಕಾಶಗಳೋ ಆಕಾಶಗಳು ಎಂತಲೂ, ಅನಂತೋ ಅಗಣಿತ ಎಂದೋ, ನಿರಾಕಾರ ಅರ್ಥಗಳ ರೂಪದಲ್ಲಿ ಅರ್ಥೈಸಬಹುದು. ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಹೊರಟ ಈ ಮಹಾಕಾವ್ಯ ಒಮ್ಮೊಮ್ಮೆ ಅಲ್ಲಮನ 'ಆಕಾಶದತ್ತತ್ತ' ಎಂಬ ಹಾದಿಯಂತೆ ಒಂದು ಜೀವಪರ ಚಲನೆ ಇಲ್ಲಿದೆ. ಕಾಲಾಜ್ಞಾನದ ಕಿಟಕಿಗಳಂತೆ, ಹೆಳವನೊಬ್ಬನ ನೆನಪು ಹಳವಂಡಗಳಂತೆ ಕಾಣುತ್ತದೆ. ಇದೊಂದು ರೀತಿಯಲ್ಲಿ ದೈತನೊಬ್ಬನಿಗಿದ್ದ ಮಹಾಕನಸಿನ ಕಾವ್ಯ.
ಒಂದು ಸಾವಿರದಾ ಮೂವತ್ತು ಪುಟಗಳಲ್ಲಿ ಸಾವಿರಾರು ಘಟನಾವಳಿಗಳನ್ನು ಯಾವುದೇ ಖಚಿತ ತಾರ್ಕಿಕ ಜೋಡಣೆಗಳಿಲ್ಲದೇ ಹರಿಬಿಟ್ಟ 'ವ್ಯೋಮಾ ವ್ಯೋಮ' ಮಹಾಕಾವ್ಯ ಬಹಳ ಮುಖ್ಯವಾಗಿ ವಾಸ್ತವಕ್ಕೆ ಒತ್ತುಕೊಟ್ಟಿದೆ. ಅಧಿಕಾರಶಾಹಿ, ಪ್ರೇಮ ಸಾಫಲ್ಯ, ವೈಫಲ್ಯ, ರಾಜಕೀಯ ವಿಪ್ಲವ, ಜಾಗತಿಕ ಅಲ್ಲೋಲ ಕಲ್ಲೋಲ, ಅತ್ಯಂತ  ಕ್ಷುಲ್ಲಕ ಅನ್ನಬಹುದಾದ ಸಂಗತಿಗಳೂ ಈ ಕಾವ್ಯದ ಸುನಾಮಿಯಲ್ಲಿ ಕೊಚ್ಚಿಕೊಂಡು ಬಂದಿವೆ. ನಿಂತಲ್ಲಿ ನಿಲ್ಲದೆ, ವಿವರಿಸುತ್ತ ವರ್ಣಿಸುತ್ತ ಸುಳಿಯೊಡೆದು ನುಗ್ಗುವ ಕಾವ್ಯವಿದು.
ಜನಭಾಷೆ ಬೇಕೆಂದರೆ ಜನಭಾಷೆ ಸಹಜ ಗ್ರಾಂಥಿಕ ಬೇಕೆಂದರೆ ಅಂಥದ್ದೇ ಸಹಜ ಗ್ರಾಂಥಿಕ ಭಾಷೆಯ ಓಟ ಇಲ್ಲಿದೆ...
ಜನನಕ್ಕೆ ಜನನ ನುಂಗಿದಾವಿಂದು
ಮರಣಕ್ಕೆ ಮರಣ ನುಂಗಿದಾವಿಂದು
ಕಾರಣಿಕ ಶೈಲಿಯಲ್ಲಿ ಸಾಗುವ ಇಂಥ ಸಾಲುಗಳು ನಾನಾ ಅರ್ಥ ವಿವರಗಳನ್ನು ಬಿಡಿಸುತ್ತವೆ. ಹೊಸ ಅರ್ಥಶೋಧಕ್ಕೆ ಹಾದಿ ಮಾಡಿಕೊಡುತ್ತದೆ.
ಬೆಳಕು ಗಾಳಿಯನ್ನು ನಿಲ್ಲಿಸಬಹುದು, ಮನಸ್ಸನ್ನು ನಿಲ್ಲಿಸಬಹುದೇ ಎಂದು ಪ್ರಶ್ನಿಸುತ್ತ ಕಾವ್ಯದೊಳಗೂ ಜೀವ ಚಲನೆಯನ್ನು ಕವಿ ಕಾಣುತ್ತಾರೆ.
ಅನೇಕ ಘಟನೆಗಳೂ 'ವ್ಯೋಮಾ ವ್ಯೋಮ'ದ ಒಡಲು ತುಂಬಿವೆ. ಅಂಕೋಲಾಕ್ಕೆ ಗಾಂಧೀಜಿ ಭೇಟಿ ನೀಡಿದಾಗ ನಡೆದ ಘಟನೆ, ಹುಬ್ಬಳ್ಳಿಯ ಬಸ್ಸ್ಟ್ಯಾಂಡಿನಲ್ಲಿ ಜೋಗತಿಯೊಬ್ಬಳ ಕಥೆ ಇಲ್ಲಿ ಚಿತ್ರಿತವಾಗಿವೆ. ಬೆಳಕು ನೀಡಿದ ಗುರುಗಳೂ ಇಲ್ಲಿ ಬರುತ್ತಾರೆ. ಗುದ್ಯಾ ಶಂಕರಪ್ಪ, ಕೊಳ್ಳಿದೆವ್ವ ಗೊಮ್ಮಟ ಹೀಗೆ ವೈವಿಧ್ಯದ ಸಂಕೇತಗಳು ಸಾಂಗತ್ಯ ಪಡೆಯುತ್ತವೆ.
'ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕದಡಗಿ ಗ್ರಾಮದ ಕೆಂಪು ಸಾಬಣ್ಣನ ಮೊಮ್ಮಗ, ಫಕ್ಕೀರಪ್ಪನ ಮಗ, ವಾಲಿಕಾರ ದೂಳಪ್ಪನ ಜಾಪುರ ಸಬಮ್ಮನ ಕಿರಿಯ ಮಗನಾಗಿ ಒಂಬೈನೂರಾ ನಲವತ್ಮೂರು ಎಪ್ರಿಲ್ ಆರರಂದು ಮಂಗಳವಾರ...'  
ಪ್ರಾಚೀನ ಕಾಲದಲ್ಲಿ ಕವಿಗಳು ತಮ್ಮ ವಂಶಾವಳಿಗಳನ್ನು ಹೇಳುವ ರೀತಿಯಲ್ಲಿ ತನ್ನ ಹುಟ್ಟನ್ನು ಕವಿ ಚನ್ನಣ್ಣ ವಾಲಿಕಾರ ಆರಂಭದಲ್ಲಿ ದಾಖಲಿಸುತ್ತಾರೆ.
ಆಡದೇ ಹೇಳದ ಕೇಳದೆ ಬಂದ ಮೇಲೆ
ಏನು ಕಂಡೆ, ನಾನು ನೀನಾಗಲ, ನೀನು ನಾನಾಗಲು
ನನ್ನ ನಿನ್ನ ಒಳಗೆ ಇರುವ ಚಿನ್ನ ಯಾವುದಂತ ಹೇಳಲಿ
ಭೂಮಿ, ವ್ಯೂಮ, ಸ್ವಯಂ ನೆಲ ಮುಗಿಲು
ಬಯಲು ಮಗು, ಮನುಷ್ಯ, ತಂದೆ ಮರಸ್ವರ
ಹೀಗೊಂದು ಅಖಂಡತ್ವವನ್ನು ಕಟ್ಟುತ್ತ ಕವಿ ತನ್ನ ಬಾಕಿ ಇತಿಹಾಸದೊಂದಿಗೆ ವಿಶ್ವಸ್ವರೂಪ ಅನುಭವವನ್ನು ಕಟ್ಟಿಕೊಡುತ್ತಾರೆ.
ಅತ್ಯಂತ ಕ್ಲಾಸಿಕ್ ಅನ್ನಬಹುದಾದ ಭಾಷೆಯಿಂದ ಹಿಡಿದು, ಅತಿ ಸರಳ ಸಹಜ ಕೇಳದ ಆಡದ ಭಾಷಾ ಪ್ರಯೋಗ ಕೂಡ ಈ ಕಾವ್ಯದಲ್ಲಿದೆ. 'ಪಿಂಯ್ಯ ಮುಂದಕ್ಕೆ ಪಿಂಯ್ಯ', 'ಎತ್ತ್ಯೋತಟಿ- ಕತ್ತ್ಯೋತಟಿ', 'ಲಿಂಗ ಶರೀರ', 'ಕಲ್ಲೋಳು ಬೆಂಕಿ'- ಇಂಥ ಪದ ಪ್ರಯೋಗಗಳು ಓದಿಗೆ ಬೆಚ್ಚನೆ ಶಾಕ್ ನೀಡುತ್ತವೆ. ಉರ್ದು, ಪರ್ಶಿಯನ್ ಮೂಲದ ಅನೇಕ ನುಡಿಗಟ್ಟುಗಳು ಇಲ್ಲಿ ದಾಖಲಾಗಿವೆ. 'ನನ್ನನ್ನು ಮೊಹೊಬತ್ ಮಾಡ್ತೀ ಆಸಮಾನಿನಷ್ಟು ಜಮೀನಿನಷ್ಟು' ಎನ್ನುವ ಒಂದು ಸಾಲನ್ನು ಉದಾಹರಣೆಯಾಗಿ ನೋಡಬಹುದು. ಗುಲ್ಬರ್ಗ ಗಡಿ ಭಾಗದ ಕನ್ನಡ- ಉರ್ದು ಕಸಿಯ ಈ ಸಾಲುಗಳು ಚಕಿತಾನುಭವ ನೀಡುತ್ತವೆ.
ಇದೊಂದು ಮಹಾಕಾವ್ಯವೆಂದು ಒಪ್ಪುವ ಮತ್ತು ಒಪ್ಪದೇ ಇರುವ ದೊಡ್ಡ ಪಡೆಗಳೇ ಕನ್ನಡದಲ್ಲಿ ಇರಬಹುದು. ಅದರಂತೆ ಪೂರ್ಣವಾಗಿ 'ವ್ಯೋಮಾ ವ್ಯೋಮ' ಓದದೇ ಇರುವ ವಾಚಕ ವೃಂದವಿರಬಹುದು. ಕವಿ ಚನ್ನಣ್ಣ ವಾಲಿಕಾರರೇ ಹೇಳುವಂತೆ 'ಮಹಾ ಛಂದಸ್ಸಿನ, ಸಂಕೀರ್ಣ, ಗಪದ್ಯದ ಹಾಡುಗಬ್ಬ' ಇದಾಗಿದೆ. ಇದಕ್ಕೊಂದು ಅರ್ಥ ಅಖಂಡತ್ವ ಬರಬೇಕಾದರೆ ನೂರಾರು ವಿಮರ್ಶಾ ಕಾಮಗಾರಿಗಳು ನಡೆಯುವಂತಾಗಬೇಕು. ಹಾಗಾದಾಗ ಕನ್ನಡದ ಅಪರೂಪದ ಕವಿಯೊಬ್ಬನಿಗೆ ನಾಡಿನ ವಾಚಕವೃಂದ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ.

- ಸತೀಶ ಕುಲಕರ್ಣಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.