ಲತಾ ಲಿಖಿತ

ಇಂದು 'ಮಹಾಕಾವ್ಯ'ದ ಬೆನ್ನೇರುವವರು ತುಂಬಾ ಅಪರೂಪ. ಆ ಅಪರೂಪಗಳಲ್ಲಿ ಅಪರೂಪದ ಪ್ರತಿಭೆ, ಮೈಸೂರಿನ ಡಾ. ಲತಾ ರಾಜಶೇಖರ್. ಒಟ್ಟು 30 ಕೃತಿಗಳಲ್ಲಿ 4 ಮಹಾಕಾವ್ಯ ಗ್ರಂಥಗಳನ್ನೇ ಬರೆದವರು. ಇದೀಗ 800 ಪುಟಗಳ ನಾಲ್ಕನೇ ಮಹಾಕಾವ್ಯ, 'ಮಹಾವೀರ ದರ್ಶನ' ಏ.23ರ ಮಹಾವೀರ ಜಯಂತಿಯಂದು ಲೋಕಾರ್ಪಣೆಯಾಗಿದೆ. ಈ ಹಿನ್ನೆಲೆಯಲ್ಲಿ 'ದೋಣಿ'ಯೊಂದಿಗೆ ಅವರ ಮಾತುಕತೆ...
ಈವರೆಗೆ ನೀವು ರಚಿರುವ ಮಹಾಕಾವ್ಯಗಳು ಯಾವುವು?
'ಬುದ್ಧ ಮಹಾದರ್ಶನ' (800 ಪುಟ), 'ಏಸು ಮಹಾದರ್ಶನ' (1000 ಪುಟ), 'ಬಸವ ಮಹಾದರ್ಶನ' (1500 ಪುಟ) ಮಹಾಕಾವ್ಯಗಳನ್ನು ರಚಿಸಿದ್ದೇನೆ. ಇದೀಗ 800 ಪುಟಗಳ 'ಮಹಾವೀರ ದರ್ಶನ'ವನ್ನೂ ನಿಮ್ಮ ಮುಂದಿಟ್ಟಿದ್ದೇನೆ.
ಮುಂದಿನ ಮಹಾಕಾವ್ಯ ಯಾವುದು?
'ಶ್ರೀರಾಮ ಮಹಾದರ್ಶನ'. ಅದರ ತಯಾರಿಯಲ್ಲಿದ್ದೇನೆ.
ಕ್ಷೇತ್ರ ಅಧ್ಯಯನ ಮಾಡಿಯೇ ನಿಮ್ಮೆಲ್ಲಾ ಮಹಾಕಾವ್ಯಗಳು ರಚನೆಯಾಗಿವೆಯೇ?
ನಾನು ಯಾವುದೇ ಮಹಾಕಾವ್ಯವನ್ನು ರಚಿಸಬೇಕಾದರೂ ಮೊದಲು ಕ್ಷೇತ್ರಗಳ ದರ್ಶನ ಹಾಗೂ ಅಲ್ಲಿನ ಅಧ್ಯಯನಕ್ಕೆ ಮುಂದಾಗುತ್ತೇನೆ. ಅಂತೆಯೇ 'ಬುದ್ಧ ಮಹಾದರ್ಶನ' ಕೃತಿಗಾಗಿ ನೇಪಾಳ, ರಾಜಗೃಹ, ಲುಂಬಿನಿ, ಬುದ್ಧಗಯಾ, ವೈಶಾಲಿ, 'ಏಸು ಮಹಾದರ್ಶನ' ಕೃತಿಗಾಗಿ ಇಟಲಿ, ಪಾಲೆಸ್ತೀನ್, ಈಜಿಪ್ಟ್, 'ಬಸವ ಮಹಾದರ್ಶನ'ಕ್ಕಾಗಿ ಕೂಡಲ ಸಂಗಮ, ಬಸವ ಕಲ್ಯಾಣ, ಸೊಲ್ಲಾಪುರ ಮತ್ತು ಇಂಗಳೇಶ್ವರ, 'ಮಹಾವೀರ ಮಹಾದರ್ಶನ' ರಚನೆಗಾಗಿ ಬಿಹಾರದ ಪಾವಾನಗರ, ಕುಂಡಲಪುರ, ಕುಶಿನಾ ಹಾಗೂ ತೀರ್ಥಂಕರರ ಪವಿತ್ರ ಕ್ಷೇತ್ರ ಅಯೋಧ್ಯಾ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ, ಕ್ಷೇತ್ರ ಕಾರ್ಯ ನಡೆಸಿದ್ದೆ.
ಮಹಾಕಾವ್ಯ ರಚನೆಗೆ ಎಷ್ಟು ವರ್ಷಗಳು ಬೇಕಾಗುತ್ತದೆ?
ಬರವಣಿಗೆಗೆ ಒಂದರಿಂದ ಎರಡು ವರ್ಷ. ಕರಡು ತಿದ್ದುಪಡಿ, ಪರಿಷ್ಕರಣೆ, ಮುದ್ರಣ ಸೇರಿದಂತೆ ಎಲ್ಲಾ ಮುಗಿದು ಕೃತಿ ಹೊರಬರಲು 3 ವರ್ಷ ಬೇಕೇ ಬೇಕು.
ಬೃಹತ್ ಗಾತ್ರದ ಮಹಾಕಾವ್ಯಗಳಿಗೆ ಇಂದು ಓದುಗರಿದ್ದಾರಾ?
ಖಂಡಿತಾ ಇದ್ದಾರೆ. ಏಕೆಂದರೆ 'ಬುದ್ಧ ಮಹಾದರ್ಶನ', 'ಏಸು ಮಹಾದರ್ಶನ' 3ನೇ ಮುದ್ರಣವನ್ನೂ, 'ಬಸವ ಮಹಾದರ್ಶನ' 2ನೇ ಮುದ್ರಣವನ್ನು ಕಾಣುತ್ತಿರುವುದು ಓದುಗರ ಆಸಕ್ತಿಗೆ ನಿದರ್ಶನ. ಕೆಲವರ ಮನೆಯಲ್ಲಿ ಈ ಗ್ರಂಥಗಳನ್ನು ಪೂಜಿಸುತ್ತಿರುವುದೂ ನನ್ನ ಗಮನಕ್ಕೆ ಬಂದಿದೆ.
ಮಹಾಕಾವ್ಯ ರಚನೆಗೆ ನಿಮ್ಮ ವಯೋವಾನದ ಅಡ್ಡಿ ಎದುರಾಗಿದೆಯೇ?
ಕಾರ್ಯಕ್ರಮಗಳಿಗೆ ಹೋದಾಗ ಮಹಾಕಾವ್ಯ ರಚಿಸಿರುವ ಲೇಖಕಿ ಎಂದರೆ ವಯೋವೃದ್ಧೆ ಇರಬೇಕೆಂದು ಭಾವಿಸಿದ್ದುಂಟು. ಆದರೆ ನನ್ನನ್ನು ನೋಡಿ ಸ್ವಲ್ಪ ಆಶ್ಚರ್ಯ ಪಟ್ಟಿದ್ದೂ ಉಂಟು.
ನಿಮ್ಮ ಕಾವ್ಯ ರಚನೆಗೆ ಪ್ರೇರಣೆ ಯಾರು?
ಮಹಾಕಾವ್ಯ ರಚನೆಗೆ ಕುವೆಂಪು ಪ್ರೇರಣೆ. ಕವಿತೆ ರಚನೆಗೆ ಕೆ.ಎಸ್. ನರಸಿಂಹಸ್ವಾಮಿ ಸ್ಫೂರ್ತಿ.
- ಸಂದರ್ಶನ: ಮಾ. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


