ಮಕರಂದ/ದೋಣಿ

ನವ ವಸಂತದ ಗಾಳಿ

'ವಸಂತ ಬರೆದನು ಒಲವಿನ ಓಲೆ, ಚಿಗುರಿದ ಎಲೆ ಎಲೆ ಮೇಲೆ' ಎಂದು ಗೀತೆ ರಚಿಸಿದ ರಚನಾಕಾರನಿಗೆ ಪ್ರೇರಣೆಯಾದದ್ದು...

Published On :

'ವಸಂತ ಬರೆದನು ಒಲವಿನ ಓಲೆ, ಚಿಗುರಿದ ಎಲೆ ಎಲೆ ಮೇಲೆ' ಎಂದು ಗೀತೆ ರಚಿಸಿದ ರಚನಾಕಾರನಿಗೆ ಪ್ರೇರಣೆಯಾದದ್ದು ಏನಿರಬಹುದು? ಎಂಬ ಪ್ರಶ್ನೆಗೆ ಉತ್ತರ ದೊರಕಿದ್ದು, ನಮ್ಮ ತೆರೆದ ಹೃದಯದಿಂದ ಪ್ರಕೃತಿ ಸಿರಿಯನ್ನು ಕಣ್ದುಂಬಿಕೊಂಡಾಗಲೇ. ಕವಿಮನಕ್ಕೆ ಲಗ್ಗೆಯಿಟ್ಟು ಮನಸ್ಸನ್ನು ಕದಿಯುವ 'ಚೈತ್ರಕಾಲ' ಎಲ್ಲರಿಗೂ ಆಪ್ಯಾಯಮಾನ.
'ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ?' ಎಂದು ವಚನಕಾರರು ನುಡಿದಂತೆ ಮಾಮರದಲ್ಲಿನ ಚಿಗುರು ಕಂಡ ಕೋಗಿಲೆ ಇಂಪಾಗಿ ಹಾಡುವ ನಿನಾದ ಮೈಮರೆಸುವಂಥದ್ದು. ಬಿರುಬೇಸಿಗೆಯಲ್ಲಿ ತತ್ತರಿಸಿ ಬೋಳಾದ ಮರ, ಗಿಡಗಳಲ್ಲಿ ಧುತ್ತನೆ ಪಲ್ಲವಿಸುವ ಪಲ್ಲವಗಳು ಕಣ್ಣನ ತಣಿಸುವ ಪರಿ ಸೋಜಿಗವೇ ಸರಿ. ಬೇಸಿಗೆಯ ಬಿಸಿಲ ಝಳದಲ್ಲೂ ತಂಪಾದ ನೆರಳು ನೀಡಿ, ಘಮ್ಮೆನ್ನುವ ಸುಮ ನೀಡುವ 'ಹೊಂಗೆ'ಯ ಶೃಂಗಾರ ಪ್ರಕೃತಿಯ ವಿಸ್ಮಯ. ಚೈತ್ರದ ಬರುವಿಗೆ, ವಸಂತನ ಆಗಮನವು ವಸುಮತಿಗೆ ಬಣ್ಣದ ಓಕುಳಿಯನ್ನೇ ಚೆಲ್ಲಿಬಿಡುತ್ತದೆ. ಹಳದಿ- ಕೆಂಪು ಹೂಗಳರಳಿ ಭೂರಮೆಗೆ ಆರತಿ ಎತ್ತಿ ಸ್ವಾಗತ ಬಯಸುವ ಪರಿ ಆಶ್ಚರ್ಯ ಮೂಡುವಂತೆ ಮನದ ಚಿತ್ತವನ್ನು ತನ್ನತ್ತ ಸೆಳೆದು ಬಿಡುತ್ತದೆ. ಬೀಸುವ ಮಂದಾನಿಲಯ ನವ ನವೋಲ್ಲಾಸ ತುಂಬಿಬಿಡುತ್ತದೆ. ಪ್ರಕೃತಿ ಸದಾ ನವ ನವೋನ್ಮೇಷ ಶಾಲಿನಿ. ಯುಗದ ಆವಿಗೆ ಮುನ್ನುಡಿ ಬರೆಯುವ ಚೈತ್ರಮಾಸ ಶೃಂಗಾರ ಮಾಸವೇ ಸರಿ. ಈ ವಸುಂಧರೆ ಜೀವರಾಶಿಗಳಿಗೆಲ್ಲ ಚೈತನ್ಯ ನೀಡುವ ಅದ್ಭುತ ಶಕ್ತಿ. ಪ್ರಕೃತಿಯಿಂದ ಒಂದಲ್ಲ ಒಂದು ಪಾಠ ಕಲಿಯುವ ಮನಸ್ಸು ನಮ್ಮದಾಗಬೇಕು. ಭೂರಮೆಯ ಶೃಂಗಾರವನ್ನು ಕಣ್ತುಂಬಿಕೊಳ್ಳೋಣ. ಆ ಹಿಮ ಮುಕುಟಮಣಿಗೆ ವಂದಿಸೋಣ. ವಸುಂಧರೆಯನ್ನು ಸಂರಕ್ಷಿಸೋಣ.

- ಶಶಿಕಲಾ ಕೆ.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.