ನನ್ನ ಕನಸು ನನ್ನ ಬದುಕು....
ನಿನ್ನ ಪ್ರೀತಿಯ ಸಾಮ್ರಾಜ್ಯದಲ್ಲಿ ನೆಲೆ ಕಂಡುಕೊಂಡ ಖುಷಿ ನನಗೆ.

ಕಾಲ ಬುಡಕ್ಕೆ ತಾಕುತ್ತಿದ್ದ ತರಗೆಲೆಗಳು ಮೆಲ್ಲನೆ ತಾವರೆಯಾಗಿ ಅರಳಿ ನಿಂತು ಕಚಗುಳಿ ಇಟ್ಟು ಮೃದು ಸ್ಪರ್ಶವಾದಂತಹ ಅನುಭವ! ಅರೆಗಳಿಗೆ ಕಣ್ಣು ಮುಚ್ಚಿದರೆ ನಿದ್ರೆಗೆ ಜಾರುತ್ತಿದ್ದ ಕಣ್ಣ ರೆಪ್ಪೆಗಳಿಗೆ ಈಗ ನಿನ್ನ ನೆನಪುಗಳ ಭಾರ. ಚಂಚಲವಾಗಿ ಊರು ತುಂಬಾ ಚಲಿಸುತ್ತಿದ್ದ ಎಳೆ ಮನಸ್ಸಿನ ಭಾವಗಳ ಕೋಶಗಳ ತುಂಬಾ ಈಗ ನಿನ್ನದೇ ಚಿತ್ರಪಟ. ನಿನ್ನಿಂದಾಗಿ ಬದುಕಿನ ಚೆಲುವುಗಳೆಲ್ಲಾ ನನ್ನ ಮಡಿಲಲ್ಲೇ ಬಂದು ನಲಿದಾಡುತ್ತಿವೆ ಎನ್ನುವ ಸಂಭ್ರಮ ಬೇರೆ.
ಒರಟು ಒಗಟು ನೀನು ಅಂದುಕೊಂಡಿದ್ದ ಮನಸ್ಸು ನಿನ್ನೊಂದು ಕನಸಲ್ಲೇ ಜಾರಿ ಹೋಗಿಬಿಡುತ್ತದೆ. ಸರಿದು ಹೋದ ಇಷ್ಟೂ ದಿನಗಳಲ್ಲಿ ನಿನ್ನ ಪ್ರೀತಿಯ ತೂಕದಲ್ಲಿ ಒಂಚೂರೂ ಇಳಿಕೆಯಿಲ್ಲ. ಎಳೆದು ಕೂರಿಸಿ ಕಣ್ಣರೆಪ್ಪೆ ಅಲುಗಾಡದಂತೆ ನಿನ್ನ ಮೊಗವನ್ನೇ ನೋಡುತ್ತಿರಬೇಕು, ಅಲೆಗೂದಲಲ್ಲಿ ಕೈಯಾಡಿಸಿ ಜಗ್ಗಿ ಜಗಮೊಂಡ ಎನ್ನಬೇಕು...ಓಹ್, ನಿನ್ನ ಹತ್ತಿರ ಬರಲು ಹಾತೊರೆಯುವ ಆಸೆಗಳೋ ಸಾವಿರ. ಎಲ್ಲವೂ ನನ್ನ ಕಲ್ಪನೆಗಳ ಪ್ರಪಂಚದಲ್ಲಷ್ಟೇ ಬೆಚ್ಚಗೆ ಭದ್ರವಾಗಿವೆ.
ಬದುಕು ಎತ್ತಲೋ ಸಾಗುತ್ತಿತ್ತು. ಮುಖವಾಡದ ಮುಖಗಳೊಳಗೆ ಚೆಂದದ ನಗುವೊಂದನ್ನು ಅರಸಿ ಸೋತು ತಲೆ ಬಗ್ಗಿಸಿ ನಡೆಯುತ್ತಿದ್ದೆ. ಆಗ ಎದುರಿಗೆ ಸಿಕ್ಕಿದ್ದು ನೀನು. ಅರೆ ಗಳಿಗೆಯಲ್ಲ, ಸಾವಿರ ಬಾರಿ ಯೋಚಿಸಿದ್ದೆ. ಆಮೇಲೆ ಒಲವಿಗೆ ಒಪ್ಪಿಗೆಯ ಮುದ್ರೆಯನ್ನು ನೀಡಿದ್ದೆ. ಮನಸ್ಸು ಕೊರಗುತ್ತಿದೆ, ನಿನ್ನ ಒಳ್ಳೆಯ ಮನಸ್ಸನ್ನು ಅಳೆದು ತೂಗಿ ನನ್ನ ಸಂಕುಚಿತ ಭಾವವನ್ನು ಹೊರಗೆಡಹಿದೆನಲ್ಲಾ ಎಂದು.
ಒಂದು ಚೆಂದದ ಬದುಕು, ಬದುಕು ಪೂರ್ತಿ ಬರಿದಾಗದ ಪ್ರೀತಿ, ನೋವು ನಲಿವಿನ ನೌಕೆಯೊಳಗೆ ಜತೆಯಾಗಿ ಸಾಗಲು ಜತೆಗಾರ ಬೇಕೆಂದು ಮನಸ್ಸು ಪಿಸುಗುಡುತ್ತಿತ್ತು ಅಷ್ಟೆ. ಅಷ್ಟರಲ್ಲಾಗಲೇ ನನ್ನ ಬದುಕಿನೊಳಗೆ ನಿನ್ನ ಪ್ರವೇಶ.
ನಿನ್ನ ಪ್ರೀತಿಯ ಸಾಮ್ರಾಜ್ಯದಲ್ಲಿ ನೆಲೆ ಕಂಡುಕೊಂಡ ಖುಷಿ ನನಗೆ. ಆದರೂ ಒಂದೊಂದು ಬಾರಿ ಮೂಕಳಾಗಿ ಕುಳಿತು ಬಿಡುತ್ತೇನೆ. ಸಂಭ್ರಮದ ನಮ್ಮ ಬದುಕಿಗೆ ಅದೆಲ್ಲಿಂದಾದರೂ ಕೆಟ್ಟ ಗಳಿಗೆಗಳು ನುಸುಳಿಕೊಂಡು ಬಿಟ್ಟರೆ ಎಂಬ ಯೋಚನೆ. ಈ ಮನಸ್ಸಿಗೆ ಕೆಟ್ಟ ಯೋಚನೆಗಳನ್ನು ಮಾಡುವುದರಲ್ಲೇ ಖುಷಿ ಇರಬೇಕು. ತಲೆ ಕೊಡವಿ ತಟ್ಟನೆ ನಿನ್ನತ್ತ ಮುಖ ಮಾಡಿ ನಿನ್ನ ಮಲ್ಲಿಗೆಯ ನಗುವನ್ನೊಮ್ಮೆ ನೆನೆದುಕೊಳ್ಳುತ್ತೇನೆ.
ಸಣ್ಣ ಮುನಿಸುಗಳು, ಜಗಳಗಳನ್ನೆಲ್ಲಾ ನಗುವಲ್ಲೇ ಕೊನೆಗೊಳಿಸಿ ಮತ್ತೆ ನನ್ನೆದುರು ಮಗುವಂತೆ ಬಂದು ನಿಲ್ಲುವ ನಿನ್ನ ಪರಿಗೆ ಸೋತು ಹೋಗಿದ್ದೇನೆ. ನೀನೇನಾದರೂ ಮುನಿಸಿಕೊಂಡು ದೂರ ಸರಿದುಬಿಟ್ಟರೆ ಬದುಕಿನ ಚೈತನ್ಯವನ್ನೆಲ್ಲಾ ಕಳೆದುಕೊಂಡು ಕಂಗಾಲಾಗುತ್ತೇನೆ ಎಂದು ಅದೆಷ್ಟು ಬಾರಿ ಹೇಳಿದ್ದೆ? ನೀನು ಮುದ್ದು ಮುದ್ದಾಗಿ ನಕ್ಕು ಕಣ್ಣಂಚಲ್ಲೇ ಭರವಸೆಯ ಭಾವಗಳನ್ನು ತೋರಿಸುತ್ತೀಯಲ್ಲ ಆಗ ಮನಸ್ಸಿಗೆ ಇನ್ನಿಲ್ಲದ ನೆಮ್ಮದಿ.
ಇಲ್ಲಿ, ಈಗ ದಿಢೀರನೆ ಮಳೆ ಸುರಿಯಲು ಆರಂಭವಾಗಿದೆ. ಸೋತು ಹೋಗುವಷ್ಟು ಮಳೆಯೊಳಗೆ ನಿನ್ನ ಕೈ ಹಿಡಿದು ಕುಣಿಯಬೇಕೆಂಬ ಹಂಬಲ ಮನಕ್ಕೆ. ನೀನು ಅಲ್ಲಿದ್ದೀಯ. ಹೇಳಿದರೆ ನಕ್ಕು ಸುಮ್ಮನಾಗುತ್ತೀಯ. ನೀನು ಬರುವುದರೊಳಗೆ ಮಳೆಯೂ ನಿಂತಿರಬಹುದು. ಆದರೆ ಆ ಮಣ್ಣಿನ ವಾಸನೆ, ಹಸಿ, ಹಸಿರಿನ ಚೆಲುವು ಹಾಗೆಯೇ ಇರಬಹುದು. ನಮ್ಮ ಪ್ರೀತಿಯ ಚೆಲುವು ಕೂಡ ಎಂದಿಗೂ ಹಾಗೆಯೇ ಹಸಿ ಹಸಿಯಾಗಿರಲಿ. ಬಾಡಿ ಹೋಗಲು ಬಿಡದೆ ಭಾವಗಳನ್ನು ಜೀವಂತವಾಗಿರಿ ಸುವ. ಸದಾ ಜತೆಯಾಗಿ... ಹಿತವಾಗಿ...ಸೇರಿ ನಡೆವುದರಲ್ಲಿರುವ ಸುಖ ಬಿಟ್ಟರೆ ಬದುಕಲ್ಲಿ ಅದಕ್ಕಿಂತ ಹೆಚ್ಚಿನ ಸಂಭ್ರಮವೇನು ಬೇಕು ನಮಗೆ? ನೀನೇ ಹೇಳು.
-ಅನುದೀಪ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


