ಈ ಹೃದಯ ಹಾಡಿದೆ.....

ಇದು ನನ್ನ 'ಪ್ರೀತಿ ನಿವೇದನೆ'ಯ ಕೊನೆಯ ಪತ್ರ!
ಇಂಥದೊಂದು ಪೀಠಿಕೆ ಹಾಕುವ ಜರೂರು ನೀನಗೇಕೆ ಬಂತು ಎಂದು ಕೇಳಬೇಡ. ಐದು ವರ್ಷಗಳಿಂದ ನಿನ್ನ ಪ್ರೀತಿಗಾಗಿ ಹಂಬಲಿಸಿದ ಮನ ಈಗ ಎರಡರಲ್ಲಿ ಒಂದು ತೀರ್ಮಾನ ಆಗಿಯೇ ಬಿಡಲಿ ಎಂದು ಹಠ ಹಿಡಿದು ಕುಳಿತಿದೆ. ಅದನ್ನು ತಣಿಸುವ ತಾಕತ್ತು ನನ್ನಲ್ಲಿಲ್ಲ. ನಿನ್ನವಳಿಗೆ ಒಣಜಂಭ, ಮನದಲ್ಲಿ ಬೆಟ್ಟದಷ್ಟು ಪ್ರೀತಿ ತುಂಬಿದ್ದರೂ ಬಾಯಿ ಬಿಟ್ಟು ಹೇಳುವ ಧೈರ್ಯ ಇಲ್ಲ ಎಂದು ನನ್ನನ್ನು ಕೆಣಕುತ್ತಿದೆ. ಹೀಗಾಗಿ ಅದರ ಬಾಯಿಯನ್ನು ಮುಚ್ಚಿಸಲು ನೀನು ಬಾಯಿ ತೆರೆಯಲೇ ಬೇಕಿದೆ. ಈಮನಸ್ಸಿನ ಅಳುಕನ್ನು ನೀಗಿಸಲು ನಿನ್ನಿಂದ ಅಧಿಕೃತ ಮುದ್ರೆಯೊಂದು ಬೇಕೇಬೇಕಿದೆ.
ನೀನು ಮಲೆನಾಡ ಸೆರಗಿನ ಮೃದು ಮನಸ್ಸಿನ ಹುಡುಗಿ, ಅಪ್ಪಟ ಗೊಂಬೆಯಂಥ ಸೌಂದರ್ಯವತಿ. ನನ್ನ ಪಾಲಿಗೆ ನೀನೇ ಸ್ವರ್ಗ. ನಿನ್ನ ಸೀರೆ ಸೆರಗಿನ ಬೆಚ್ಚನೆ ಪ್ರೀತಿಯಲ್ಲಿ ತೋಯ್ದು ತೊಪ್ಪೆಯಾಗಿ ಮೈಮರೆಯಬೇಕೆಂಬ ಹುಚ್ಚು ಕನಸು ನನ್ನದು. ನನ್ನ ನಿನ್ನ 'ಪರಿಚಯ'ಕ್ಕೆ ಈಗ ಐದು ವರ್ಷಗಳ ಸಂತಸ. ಇದುವರೆಗೂ ನಿನ್ನ ಮುಖವನ್ನೇ ನಾನು ನೋಡಿಲ್ಲ. ನೀನೂ ಕೂಡ! ಆದರೂ ನಮ್ಮಿಬ್ಬರ ಮಧ್ಯೆ ಪ್ರೀತಿ ಹರಿದಾಡಿದ್ದು, ಹರಿದಾಡುತ್ತಲೇ ಇರುವುದು, ಮುಂದೂ ಹರಿಯುವುದು ಸುಳ್ಳಲ್ಲ ತಾನೇ? ಇಲ್ಲವೆನ್ನಬೇಡ...
ಇದುವರೆಗೆ ಪರಸ್ಪರ ಮುಖ ನೋಡದಿದ್ದರೂ ನೀನೇಕೆ ನನಗೆ ಇಷ್ಟೊಂದು ಇಷ್ಟವಾದೆ ಎಂದು ಮುಸ್ಸಂಜೆ ಹೊತ್ತಿನ ತಂಗಾಳಿಯಲ್ಲಿ ಕುಳಿತು ಯೋಚಿಸತೊಡಗಿದರೆ ಸೂರ್ಯ ಗೂಡು ಸೇರಿದ್ದೇ ಗೊತ್ತಾಗುವುದಿಲ್ಲ. ಉತ್ತರ ಏನಾದರೂ ಸಿಕ್ಕೀತಾ ಎಂದು ತಡಕಾಡಿದರೆ ಖಾಲಿ ಹಾಳೆಯ ಪುಟದಂತೆ ಎಲ್ಲವೂ ಶೂನ್ಯ. ಆದರೆ, ನಿನ್ನ ಮನಸ್ಸು ಮಾತ್ರ ಹಾಳೆಯಷ್ಟೇ ಶುಭ್ರ ಎಂದು ಮನಸ್ಸು ಪಿಸುಗುಡುತ್ತದೆ. ಅದೇ ಖುಷಿಯಲ್ಲೇ ದಿನದೂಡುತ್ತೇನೆ. ಧ್ವನಿಯಲ್ಲೇ ಮೋಡಿ ಮಾಡಿದ ಬೆಡಗಿ ಹೇಳಬೇಕಾದುದನ್ನು ಹೇಳಲು ಹೀಗೇಕೆ ಹಠ ಮಾಡುತ್ತಿದ್ದಾಳೆ ಎಂದು ಮತ್ತೆ ಮತ್ತೆ ಪ್ರಶ್ನೆಗಳೇಳುತ್ತವೆ.
ಐದು ವರ್ಷಗಳಿಂದ ಒಂದೇ ಒಂದು ದಿನ ನೀನು ಪ್ರೀತಿಯಿಂದ ಕೂಡಾ ಒರಟಾಗಿ ನಡೆದುಕೊಂಡಿಲ್ಲ. ಹದ್ದು ಮೀರಿ ವರ್ತಿಸಲಿಲ್ಲ. ಏಕವಚನದಲ್ಲಿ ಸಂಬೋಧಿಸಲಿಲ್ಲ. ನಿನ್ನ ಬಿಟ್ಟು ನಾನಿರಲ್ಲ ಎಂದು ಎಂದೂ ಹಠ ಮಾಡಲಿಲ್ಲ. ಆರಂಭದಿಂದಲೂ ಒಂದು ಅಂತರ ಕಾಪಾಡಿಕೊಂಡೇ ಬಂದೆ. ಆದರೂ ನೀನಿಷ್ಟ ಮತ್ತು ಅದಕ್ಕೇ ನೀನಿಷ್ಟ.
ಬಹುತ್ ಪ್ಯಾರ್ ಕರತೇ ಹೈ ತುಮ್‌ಕೋ ಸನಮ್
ಕಸಮ್ ಚಾಹಿಲೇಲೋ ಕುದಾಕಿ ಕಸಮ್...!
ಇಷ್ಟೆಲ್ಲ ಹೇಳಿದ ಮೇಲೆ ಈ ಬಾರಿ ನಿನ್ನಿಂದ ಸ್ಪಷ್ಟ ಉತ್ತರ ಬಯಸುತ್ತಿದ್ದೇನೆಂಬುದು ಸ್ಪಷ್ಟವಾಗಿದೆ ಅಂದುಕೊಳ್ಳುತ್ತೇನೆ. ಇನ್ನೊಮ್ಮೆ ಕೇಳಿಕೊಳ್ಳುತ್ತೇನೆ. ಪ್ರೀತಿ ಹೇಳದೇ ಮತ್ತೆ ಮತ್ತೆ ಕೊಲ್ಲಬೇಡವೇ. ಪ್ರೀತಿಸುತ್ತೇನೆಂದು ಒಂದೇ ಒಂದು ಬಾರಿ ಹೇಳಿಬಿಡು. ನಾ ಮತ್ತೆ ನನಗಾಗಿ ಉಸಿರಾಡುವುದೇ ಇಲ್ಲ. ನಿನ್ನವನು...
-ಚಿನ್ನು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


