ವಿಶೇಷ

ಭೂಗತ ಕಲ್ಲಿದ್ದಲು ಗಣಿಯಲ್ಲಿ ಕಾರ್ಯನಿರ್ವಹಿಸುವ ದೇಶದ ಮೊದಲ ಮಹಿಳೆ ಆಕಾಂಕ್ಷ ಕುಮಾರಿ!

ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಬಾರ್ಕಗಾಂವ್‌ನ ಆಕಾಂಕ್ಷ ಕುಮಾರಿ ಕೋಲ್ ಇಂಡಿಯಾ ಲಿಮಿಟೆಡ್ (CIL) ಗೆ ನೇಮಕವಾದ ದೇಶದ ಮೊದಲ ಮಹಿಳಾ ಗಣಿ ಎಂಜಿನಿಯರ್ ಆಗಿದ್ದಾರೆ.

ಭೂಗತ ಕಲ್ಲಿದ್ದಲು ಗಣಿಯಲ್ಲಿ ಕಾರ್ಯನಿರ್ವಹಿಸುವ ದೇಶದ ಮೊದಲ ಮಹಿಳೆ ಆಕಾಂಕ್ಷ ಕುಮಾರಿ!
ಆಕಾಂಕ್ಷ ಕುಮಾರಿ
Published On :

ರಾಂಚಿ: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಬಾರ್ಕಗಾಂವ್‌ನ ಆಕಾಂಕ್ಷ ಕುಮಾರಿ ಕೋಲ್ ಇಂಡಿಯಾ ಲಿಮಿಟೆಡ್ (CIL) ಗೆ ನೇಮಕವಾದ ದೇಶದ ಮೊದಲ ಮಹಿಳಾ ಗಣಿ ಎಂಜಿನಿಯರ್ ಆಗಿದ್ದಾರೆ. ಆಕಾಂಕ್ಷ ಕುಮಾರಿ ಉತ್ತರ ಕರಣಪುರದ ಛುರಿ ಭೂಗತ ಗಣಿಯಲ್ಲಿ ಕಾರ್ಯನಿರ್ವಹಿಸುವ ಮೊದಲ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗಿಂತ ತಾವೇನೂ ಕಮ್ಮಿಯಿಲ್ಲ ಎಂಬಂತೆ ಶ್ರಮಿಸುತ್ತಿದ್ದಾರೆ. ವೈದ್ಯರಾಗಿ, ಅಧಿಕಾರಿಯಾಗಿ, ಸೆಕ್ಯುರಿಟಿ ಗಾರ್ಡ್‌ ಆಗಿ ಅಷ್ಟೇ ಅಲ್ಲ, ಭಾರದ ಕೆಲಸಗಳೆಂದೇ ಪರಿಗಣಿಸಲಾಗಿರುವ ಡಂಪರ್‌ ಹಾಗೂ ಶೊವೆಲ್‌ನಂಥ ಯಂತ್ರಗಳ ಚಾಲನೆಯಲ್ಲಿಯೂ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಪ್ರತಿ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿಯೂ ಸಮರ್ಥರಾಗಿ ಶ್ರಮಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಗಣಿಗಾರಿಕೆಯ ಚಟುವಟಿಕೆಗಳಲ್ಲಿಯೇ ಅತಿ ಬೃಹತ್‌ ಕಂಪನಿಯಾಗಿರುವ ಸಿಸಿಎಲ್‌ ಜಾಗತಿಕವಾಗಿಯೂ ಒಂದು ಮೈಲಿಗಲ್ಲನ್ನು ಸೃಷ್ಟಿಸಿರುವುದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಣಿಗಾರಿಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿರುವ ಎರಡನೆಯ ಎಂಜಿನಿಯರ್‌ ಆಕಾಂಕ್ಷಾ ಆಗಿದ್ದಾರೆ. ಮಹಾರತ್ನ ಕೋಲ್ ಇಂಡಿಯಾ ಸಮೂಹ ಸಂಸ್ಥೆಯಲ್ಲಿ ಒಬ್ಬರು ಮಹಿಳಾ ಗಣಿಗಾರಿಕೆಯ ಕ್ಷೇತ್ರದಲ್ಲಿ ಎಂಜಿನಿಯರ್‌ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಾರ್ಖಂಡ್‌ ರಾಜ್ಯದ ಹಜಾರಿಬಾಗ್‌ ಜಿಲ್ಲೆಯ ಬರ್ಕಾಗಾಂವ್‌ ಮೂಲದ ಆಕಾಂಕ್ಷಾ ಕುಮಾರಿ, ನವೋದಯ ವಿದ್ಯಾಲಯದ ವಿದ್ಯಾರ್ಥಿನಿ. ಗಣಿಗಾರಿಕೆಯ ಪ್ರದೇಶದಿಂದಲೇ ಬಂದಿರುವ ಆಕಾಂಕ್ಷಾ, ಬಾಲ್ಯದಿಂದಲೇ ಈ ಕ್ಷೇತ್ರದಲ್ಲಿ ಶ್ರಮಿಸುವ ಕನಸು ಕಂಡವರು. ಈ ಕನಸು ಧನಬಾದ್‌ನ ಸಿಂದ್ರಿ ಸಂಸ್ಥೆಯಲ್ಲಿ ಬಿಐಟಿ ಮೈನಿಂಗ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆಯಲು ಪ್ರೇರಣೆ ನೀಡಿತು. 

ಸಿಸಿಎಲ್‌ನಲ್ಲಿ ಸೇವೆಗೆ ಸೇರುವ ಮುನ್ನ ಅವರು ರಾಜಸ್ಥಾನದ ಬಲಾರಿಯಾ ಗಣಿಪ್ರದೇಶದಲ್ಲಿ ಹಿಂದುಸ್ತಾನ್‌ ಜಿಂಕ್‌ ಲಿಮಿಟೆಡ್‌ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿರುವ ಅನುಭವ ಇದೆ. ತಮ್ಮ ಕನಸುಗಳ ಬೆನ್ನಟ್ಟಲು ಕುಟುಂಬ ನೀಡಿರುವ ಅದಮ್ಯ ಬೆಂಬಲವೇ ಈ ಸಾಧನೆಗೆ ಮೂಲ ಕಾರಣವೆಂದು ಆಕಾಂಕ್ಷಾ ಕುಮಾರಿ ಹೇಳಿಕೊಳ್ಳುತ್ತಾರೆ. ಕೋಲ್‌ ಇಂಡಿಯಾ ಲಿಮಿಟೆಡ್‌ಗೆ ಸೇವೆ ಸಲ್ಲಿಸಲು ಸೇರುವುದು ತಮ್ಮ ಬಾಲ್ಯದ ಕನಸಾಗಿತ್ತು. ಸಾಮರ್ಥ್ಯಮೀರಿ ಶ್ರಮಿಸಿ, ತಮ್ಮಿಂದ ಉತ್ತಮವಾದುದನ್ನೇ ನೀಡುವುದಾಗಿ ಅವರು ಹೇಳುತ್ತಾರೆ.

ಗಣಿಗಾರಿಕೆ ಸಚಿವ ಪ್ರಲ್ಹಾದ್ ಜೋಶಿ, ಸಿಎಂಡಿ ಪಿ.ಎಂ. ಪ್ರಸಾದ್ ಸೇರಿದಂತೆ ಇಡೀ ಸಿಸಿಎಲ್ ಕುಟುಂಬ ಆಕಾಂಶ ಅವರನ್ನು ಅಭಿನಂದಿಸಿದ್ದು, ಭವಿಷ್ಯದಲ್ಲಿ ಕಂಪನಿಗೆ ಆಕೆ ಕೊಡುಗೆ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.