ಮತದಾನವೆಂಬ ಪರೀಕ್ಷೆಗೆ ಸಿದ್ಧತೆ ಹೇಗೆ?
ನಾವೀಗ ಇನ್ನೊಂದು ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ನಾಳೆ (ಮೇ 12) ಕರ್ನಾಟಕ ವಿಧಾನಸಭೆಗಾಗಿ ಚುನಾವಣೆ ನಡೆಯಲಿದೆ..

Published On :
ನಾವೀಗ ಇನ್ನೊಂದು ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ಮೇ 12ರಂದು ಕರ್ನಾಟಕ ವಿಧಾನಸಭೆಗಾಗಿ ಚುನಾವಣಾ ಮತದಾನ ನಡೆಯಲಿದೆ. ಪ್ರತೀ ವರ್ಷ ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷಾ ಸಮಯವಾಗಿರುತ್ತದೆ. ಹಾಗೆಯೇ ಈ ವರ್ಷ ವಿದ್ಯಾರ್ಥಿಗಳ ಜತೆಗೆ ಕರ್ನಾಟಕ ಮತದಾರರಿಗೆ ಸಹ ಪರೀಕ್ಷೆ ಇದೆ ಎನ್ನಬಹುದು. ಈ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಬೇಕು, ಯಾರು ಅನುತ್ತೀರ್ಣಗೊಳ್ಳಬೇಕೆನ್ನುವುದನ್ನು ರಾಜ್ಯದ ಏಳು ಕೋಟಿ ಪ್ರಜೆಗಳು ನಿರ್ಧರಿಸಬೇಕಿದೆ.
ಒಬ್ಬ ಹತ್ತನೇ ತರಗತಿ ವಿದ್ಯಾರ್ಥಿ ಪಬ್ಲಿಕ್ ಪರೀಕ್ಷೆಗೆ ಕುಳಿತುಕೊಳ್ಳುವ ಮುನ್ನ ಎಷ್ಟು ತಯಾರಿ ನಡೆಸುತ್ತಾನೆ, ಇನ್ನು ಸಾರ್ವಜನಿಕ ಸೇವೆಗಳಿಗಾಗಿ ನಡೆಯುವ ಐ.ಎ.ಎಸ್., ಕೆ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುವವರಂತೂ ವರ್ಷಪೂರ್ತಿ ಎಷ್ಟು ಶಿಸ್ತಿನಿಂದ ಅಭ್ಯಾಸ ಮಾಡಿರುತ್ತಾರೆ ಎನ್ನುವುದು ನಮಗೆ ಗೊತ್ತು. ಆದರೆ ನಮ್ಮನ್ನಾಳುವ ನಾಯಕರನ್ನು ಆಯ್ಕೆ ಮಾಡುವ ಮುನ್ನ ನಾವು, ಅಂದರೆ, ಪ್ರಜೆಗಳು ಎಷ್ಟು ತಯಾರಿ ನಡೆಸುತ್ತೇವೆ? ಎಷ್ಟು ಮುತುವರ್ಜಿ ವಹಿಸಿ ಅಭ್ಯರ್ಥಿಗಳನ್ನು ಆರಿಸಿ ಕಳಿಸುತ್ತೇವೆ? ಚುನಾವಣೆಗಳೆಲ್ಲಾ ಮುಗಿದು ಯಾರೋ ಅಭ್ಯರ್ಥಿಗಳನ್ನು ಆರಿಸಿ ಕಳಿಸಿ ಅವನೇನೋ ಭ್ರಷ್ಟಾಚಾರ, ಹಗರಣಗಳಲ್ಲಿ ಸಿಕ್ಕಿಬಿದ್ದಾಗ ಬೈಯ್ಯುವ, ಅವರ ವಿರುದ್ಧ ಸುಮ್ಮನೆ ಬಾಯಿ ಮಾತಿನಲ್ಲಿ ಆವೇಶದಿಂದ ಅರಚುವುದರಿಂದ ಏನೂ ಪ್ರಯೋಜನವಿಲ್ಲವಷ್ಟೆ! ಅದಕ್ಕಾಗಿಯೇ ಚುನಾವಣಾ ಸಮಯವಾದ ಈಗಲೇ ನಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿಕೊಂಡು ಯೋಗ್ಯ ಹಾಗೂ ಪ್ರಾಮಾಣಿಕರಾದವರನ್ನೇ ಆರಿಸಿ ಸ್ವಸ್ಥ, ಆರೋಗ್ಯಪೂರ್ಣ ಪ್ರಜಾತಂತ್ರಕ್ಕೆ ನಾಂದಿ ಹಾಡೋಣ..
ಐದು ವರ್ಷಗಳಿಗೊಮ್ಮೆ ಎದುರಾಗುವ ಈ ಪ್ರಕ್ರಿಯೆ ಪ್ರಜಾತಂತ್ರದ ಅಳಿವು ಉಳಿವಿನ ಮಾನದಂಡ. ಹೀಗಾಗಿಯೇ ಪ್ರತಿಯೊಬ್ಬ ಪ್ರಜೆಯೂ ತಾವು ಯಾರನ್ನು, ಯಾವ ಕಾರಣಕ್ಕಾಗಿ ಬೆಂಬಲಿಸುತ್ತಿದ್ದೇವೆ ಎನ್ನುವುದನ್ನು ಸರಿಯಾಗಿ ಅರಿತುಕೊಂಡು ಮತ ಚಲಾಯಿಸಬೇಕಾಗುತ್ತದೆ. ಹಾಗಾಗದೇ ಹೋದಾಗ ಮುಂದೊದಗುವ ಎಲ್ಲಾ ಬಗೆಯ ಅನಾಹುತಗಳಿಗೂ ಅವನೇ ಬಾಧ್ಯಸ್ಥನಾಗುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮಿಂದ ಚುನಾಯಿತವಾದ ಪಕ್ಷಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಮತ್ತು ಸರ್ಕಾರಗಳ ಸಾಧನೆಗಳನ್ನು ಪರಾಮರ್ಶಿಸಿ ಸಂವಿಧಾನಿಕ ಹಕ್ಕಿನ ಮೂಲಕ ತೀರ್ಪು ನೀಡುವ ಸಾರ್ವತ್ರಿಕ ಮತದಾನ, ಪ್ರಜಾತಾಂತ್ರಿಕ ವ್ಯವಸ್ಥೆಯ ಪ್ರಮುಖ ಅಂಗ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಅಭ್ಯರ್ಥಿಗಳನ್ನು ಆರಿಸುವ ಸಮಯದಲ್ಲಿ ಯಾವುದೇ ಆಸೆ ಆಮಿಷಗಳಿಗೆ ಸಿಲುಕದೆ, ಯಾವುದೇ ಬಗೆಯ ಒತ್ತಡಕ್ಕೆ ಒಳಗಾಗದೆ ಮತ ಹಾಕುವುದು ಬಹು ಮುಖ್ಯ ಕರ್ತವ್ಯವಾಗುತ್ತದೆ.
ಇನ್ನು ಕಳೆದೆಲ್ಲಾ ಚುನಾವಣೆಗಳಿಗಿಂತಲೂ ಈ ಬಾರಿಯ ಚುನಾವಣೆಯು ಸಾಮಾನ್ಯ ಜನರ ಪಾಲಿಗೆ ಅತ್ಯಂತ ಮಹತ್ವದ್ದು ಎನ್ನಬೇಕು. ರಾಜಕೀಯ ಪಕ್ಷಗಳ ನೈತಿಕತೆಯ ಬಗ್ಗೆಯೇ ಸಂಶಯ ಮೂಡುವಂತೆ, ಸಂಸತ್ತು ಎಂದರೆ ಗೂಂಡಾ ವರ್ತನೆ ತೋರುವವರ ಅಖಾಡವೆಂಬಂತೆಲ್ಲಾ ನಡೆದುಕೊಂಡ ಆ ಮೂಲಕ ವಿಧಾನಸಭೆಯ ಘನತೆಗೆ ಕುಂದು ಬರುವಂತೆ ವರ್ತಿಸುವವರನ್ನೇ ಆರಿಸುವುದರಲ್ಲಿ ಅರ್ಥವಿಲ್ಲ. ರಾಜ್ಯದಲ್ಲಿನ ಸಮಸ್ಯೆಗಳಿಗೆಲ್ಲಾ ಪರಿಹಾರ ಮಾರ್ಗಗಳೇ ಇಲ್ಲ. ಅವೆಲ್ಲವೂ ಸ್ವಾಭಾವಿಕ ಮತ್ತು ಅನಂತ. ಹೀಗಾಗಿ ಕೊಂಚ ಸಹಿಸಿಕೊಳ್ಳಿ ಎನ್ನುವಂತಹವರಿಂದ ಯಾರಾದರೂ ಏನನ್ನು ಸಹ ನಿರೀಕ್ಷಿಸಲು ಬರುವುದಿಲ್ಲ. ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳು ಅದರ ಮುಂದುವರಿದ ಭಾಗವಾಗಿ ರೈತರ ಆತ್ಮಹತ್ಯೆ, ಸಮುದಾಯಗಳಲ್ಲಿ ಒಡಕು ಮೂಡಿಸುವ ಕಾರ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಇನ್ನೂ ಅನೇಕ ಸಮಸ್ಯೆಗಳ ಸರಮಾಲೆ ಇದೆ., ಅದರಿಂದ ಈ ಎಲ್ಲಾ ಸಮಸ್ಯೆಗಳೂ ಪ್ರತಿಯೊಬ್ಬ ಕನ್ನಡಿಗನನ್ನು ಕಾಡುತ್ತಿವೆ.
ಇಷ್ಟೆಲ್ಲದರ ನಡುವೆ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳ ನಾಯಕರುಗಳು ಪ್ರಜೆಗಳ ಮೂಗಿಗೆ ತುಪ್ಪ ಸವರುವಂತಹ ಪ್ರಣಾಳಿಕೆಗಳೆಂಬ ಸಾಧನವನ್ನಿಟ್ಟಿಕೊಂಡು ಮನೆ ಮನೆಗೆ ಧಾವಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದದ್ದಾದರೆ ಉಚಿತ ಅಕ್ಕಿ ನೀಡುತ್ತೇವೆ,, ಮನೆ ಮನೆಗೆ ಬಣ್ಣದ ಟಿವಿ ದೊರಕಿಸುತ್ತೇವೆ ಎಂದು ಮೊದಲಾಗಿ ಸಾಮಾನ್ಯ ನಾಗರಿಕರಿಗೆ ತಾವು ಅಂಗೈನಲ್ಲಿ ಆಕಾಶವನ್ನು ತೋರಿಸುವ ಇಂತಹ ಪ್ರತಿ ನಿಧಿಗಳಿಗೆ ಈ ಸಮಯದಲ್ಲಿ ಪ್ರಜ್ಞಾವಂತ ನಾಗರಿಕನಾದವನು ತಾನು ಜನಪ್ರತಿನಿಧಿಗಳಿಂದ ಭಿಕ್ಷೆ ಬೇಡುತ್ತಿಲ್ಲ ಎನ್ನುವುದನ್ನು ಅವರಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕಿದೆ.
ಪ್ರಜಾಪ್ರತಿನಿಧಿಯಾದವರು, ಅವರು ಯಾವ ರಾಜಕೀಯ ಪಕ್ಷದವರಾಗಲೀ ಜನರಿಗೆ ಇಂತಹ ಕ್ಷುಲ್ಲಕ ಆಮಿಷಗಳನ್ನು ಒಡ್ಡುವುದರ ಬದಲಿಗೆ ರಾಜುಅದಲ್ಲಿನ ಗಂಭೀರ ಸಮಸ್ಯೆಗಳ ಪರಿಹಾರದ ಕುರಿತ ಭರವಸೆಯನ್ನು ನೀಡಬೇಕಿದೆ. ರಾಜಕೀಯದಲ್ಲಿರುವವರು ತಮ್ಮ ತಮ್ಮ ನಡುವೆ ಪರಸ್ಪರ ದೋಷಾರೋಪಣೆಯಲ್ಲಿ ತೊಡಗದೆ ಜನರ ನಡುವಿನ ಜ್ವಲಂತ ಸಮಸ್ಯೆಗಳ ಕುರಿತು ಗಮನ ಹರಿಸಿ ಅದರ ಪರಿಹಾರ ಮಾರ್ಗೋಪಾಯಗಳನ್ನು ಕಂಡುಹುಡುಕ ಬೇಕಿದೆ. ಅಂತೆಯೇ ಈ ರಾಜ್ಯದ ಸತ್ಪ್ರಜೆಗಳು ತಾವು ಮುಂದೆ ಯಾವ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಎನ್ನುವುದನ್ನು ಚಿಂತಿಸುವುದಕ್ಕಿಂತ ಮುಂಬರುವ ಸರ್ಕಾರದ ನೀತಿಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎನ್ನುವುದರ ಕುರಿತು ಆಲೋಚಿಸಿ ಮತ ಹಾಕಬೇಕು.
ಚುನಾವಣೆ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಯ ಬತ್ತಳಿಕೆಯಲ್ಲಿರುವ ಒಂದು ಮಹಾನ್ ಅಸ್ತ್ರ. ಹಣದ ಪ್ರಭಾವದಿಂದ ಸದಾ ಕಾಲವೂ ಜನತೆಯ ಬಳಿಯಿರುವ ಆ ಅಸ್ತ್ರವನ್ನು ನಿಷ್ಫಲಗೊಳಿಸಲು ಬರುವುದಿಲ್ಲ. ದುಡಿಯುವ ಜನಸಮುದಾಯದ, ಶೋಷಿತ ವರ್ಗಗಳ ಸಹನೆಯ ಮಿತಿ ಮೀರಿದಾಗ ಆಕ್ರೋಶ ಹೊರಹೊಮ್ಮಲೇಬೇಕು. ಆ ಸತ್ಯವನ್ನು ನಮ್ಮನ್ನು ಪ್ರತಿನಿಧಿಸುವ ನಾಯಕರುಗಳು ಇನ್ನಾದರೂ ಕಂಡುಕೊಳ್ಳಬೇಕಿದೆ. ಹಾಗಾದಲ್ಲಿ ಮಾತ್ರವೇ ಪ್ರಜಾತಂತ್ರ ವ್ಯವಸ್ಥೆಯು ಗಟ್ಟಿಯಾಗುತ್ತದೆ . ಮುಂದಿನ ಚುನಾವಣೆಯಲ್ಲಿ ಮತ ಹಾಕುವ ಪ್ರತಿಯೊಬ್ಬರೂ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕಿದೆ, ಆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದೆ. ಪ್ರಸಕ್ತ ಚುನಾವಣೆಯು ಈ ಒಂದು ಬದಲಾವಣೆಗೆ ನಾಂದಿಯಾಗುವುದೆನ್ನುವ ಆಶಯದೊಡನೆ ಮತದಾನವೆಂಬ ಪ್ರಜಾಪ್ರಭುತ್ವದ ದಿವ್ಯ ಪರೀಕ್ಷೆಯನ್ನು ಬರೆಯೋಣ.
- ರಾಘವೇಂದ್ರ ಅಡಿಗ ಎಚ್ಚೆನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


