ವಿಶೇಷ

ಆಸಿಸ್ 'ವಿಶ್ವ'ವಿಜೇತ: ಏಳು ರನ್‌ನಿಂದ 7 ವಿಕೆಟ್‌ವರೆಗೆ

ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಸೃಷ್ಟಿಸಿದ ದಾಖಲೆ ಗಳು ಅಷ್ಟಿಷ್ಟಲ್ಲ. ಇಲ್ಲಿಯವರೆಗೆ ನಡೆದ 11 ವಿಶ್ವಕಪ್ ಪಂದ್ಯಗಳಲ್ಲಿ 5 ಬಾರಿ ವಿಶ್ವಕಪ್....

ಆಸಿಸ್ 'ವಿಶ್ವ'ವಿಜೇತ: ಏಳು ರನ್‌ನಿಂದ 7 ವಿಕೆಟ್‌ವರೆಗೆ
ವಿಶ್ವಕಪ್ ಗೆದ್ದು ಸಂಭ್ರಮ ಆಚರಿಸುತ್ತಿರುವ ಆಸ್ಟ್ರೇಲಿಯಾ ತಂಡ
Published On :

ಮೆಲ್ಬರ್ನ್: ವಿಶ್ವಕಪ್ ಪಂದ್ಯದಲ್ಲಿ 5ನೇ ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದುಕೊಂಡು ಹೆಮ್ಮೆಯಿಂದ ಬೀಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಸೃಷ್ಟಿಸಿದ ದಾಖಲೆ ಗಳು ಅಷ್ಟಿಷ್ಟಲ್ಲ. ಇಲ್ಲಿಯವರೆಗೆ ನಡೆದ 11 ವಿಶ್ವಕಪ್ ಪಂದ್ಯಗಳಲ್ಲಿ 5 ಬಾರಿ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡಿರುವುದೇ ಕಂಗಾರೂಗಳ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

ಮೊದಲ ವಿಶ್ವಕಪ್ ಪಂದ್ಯದಲ್ಲಿ ರನ್ನರ್ ಅಪ್ ಆಗಿತ್ತು ಆಸ್ಟ್ರೇಲಿಯಾ. ತದನಂತರ 11 ವಿಶ್ವಕಪ್‌ಗಳಲ್ಲಿ 5 ಬಾರಿ ಚಾಂಪಿಯನ್‌ಗಳಾಗಿ ಹೊರ ಹೊಮ್ಮಿದರು. ಎರಡು ಬಾರಿ ರನ್ನರ್ ಅಪ್ ಆದರು. ಮೊದಲ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 17 ರನ್ ಗಳಿಂದ ಪರಾಭವಗೊಂಡಿದ್ದರು. ಏಳು ರನ್ ಗಳ ಮೂಲಕ ಮೊದಲ ವಿಶ್ವಕಪ್ ತನ್ನ ಮುಡಿಗೇರಿಸಿದ ಆಸಿಸ್ ಈ ಬಾರಿ 7 ವಿಕೆಟ್‌ಗಳ ಗೆಲುವಿನಿಂದ 5 ನೇ ಬಾರಿ ವಿಶ್ವಕಪ್ ತನ್ನದಾಗಿಸಿಕೊಂಡಿದೆ.

ಇನ್ನೊಂದು ತಂಡಕ್ಕೆ ಅಷ್ಟು ಸುಲಭದಲ್ಲಿ ದಕ್ಕದೇ ಇರುವ ಗೆಲುವಿನ ಹಾದಿ ಇವರದ್ದು. ಭಾರತ ಮತ್ತು ವೆಸ್ಟ್  ಇಂಡೀಸ್ ಎರಡು ಬಾರಿ ವಿಶ್ವಕಪ್ ಗೆದ್ದದ್ದು ಬಿಟ್ಟರೆ ಬೇರ್ಯಾವ ದೇಶಗಳೂ ಇಷ್ಟು ಗೆಲುವು ಕಂಡಿಲ್ಲ.  1975, 1979ರಲ್ಲಿ ವಿಶ್ವಕಪ್ ಗೆದ್ದ  ವೆಸ್ಟ್ ಇಂಡೀಸ್‌ನ ನಾಗಾಲೋಟಕ್ಕೆ 1983ರಲ್ಲಿ ಭಾರತ ಕಡಿವಾಣ ಹಾಕಿತು. 1983ರಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಭಾರತ ಕ್ರಿಕೆಟ್ ಲೋಕದಲ್ಲಿ ತನ್ನ ಗಟ್ಟಿ ನೆಲೆ ಊರಿದ್ದು ಮಾತ್ರವಲ್ಲದೆ 2011ರಲ್ಲಿ ಮತ್ತೊಮ್ಮೆ ಗೆಲ್ಲುವ ಮೂಲಕ ಕ್ರಿಕೆಟ್ ಲೋಕದಲ್ಲಿ ತನ್ನದೇ ಪ್ರಭಾವಲಯ ಸೃಷ್ಟಿಸಿತು. ಏತನ್ಮಧ್ಯೆ ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ ಒಂದು ಬಾರಿ ವಿಶ್ವಕಪ್ ಗೆದ್ದುಕೊಂಡಿದೆ.  1996ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಶ್ರೀಲಂಕಾ ವಿಶ್ವ ಚಾಂಪಿಯನ್‌ಗಳಾಗಿ ಮೆರೆದಿದ್ದರು.

ಈ ಹಿಂದೆ 1987, 1999, 2003, 2007ರಲ್ಲಿ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ಆಸಿಸ್ ವಿಶ್ವಕಪ್ ಗೆದ್ದು ಬೀಗಿತ್ತು.

Story image



1987 ನವೆಂಬರ್ 8ರಂದು ಕೊಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆದ  ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು 7 ರನ್‌ಗಳಿಂದ ಸೋಲಿಸಿ ಆಸಿಸ್ ಮೊದಲ ಬಾರಿಗೆ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತೀ ಕಡಿಮೆ ಅಂತರದಲ್ಲಿ ಸಾಧಿಸಿದ ವಿಜಯವಾಗಿತ್ತು ಇದು. ಆವಾಗ ಅಲೆನ್ ಬಾರ್ಡರ್ ನಾಯಕನಾಗಿದ್ದರು. ಡೇವಿಡ್ ಬೂನ್ ಮ್ಯಾನ್ ಆಫ್‌ದ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದರು.

Story image


1999 ಜೂನ್ 20ರಂದು ಲಾಡ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 8 ವಿಕೆಟ್‌ಗಳಿಗೆ ಪರಾಭವಗೊಳಿಸಿ ಆಸಿಸ್ ಎರಡನೇ ಬಾರಿ ವಿಶ್ವಕಪ್ ಗೆದ್ದಿತ್ತು. ಆವಾಗ ಸ್ಟೀವ್ ವೋ ನಾಯಕನಾಗಿದ್ದು, 4 ವಿಕೆಟ್ ಕಬಳಿಸಿದ ಶೇನ್ ವಾರ್ನ್ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾಗಿದ್ದರು.

Story image


2003ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚು ಅಂತರದಿಂದ ಗೆದ್ದು ಆಸ್ಟ್ರೇಲಿಯಾ 3 ನೇ ಬಾರಿ ಕಪ್ ಗೆದ್ದುಕೊಂಡಿತ್ತು. ಫೈನಲ್‌ನಲ್ಲಿ ಭಾರತವನ್ನು 125 ರನ್‌ಗಳಿಂದ ಪರಾಭವಗೊಳಿಸಿದ ಆಸಿಸ್ ತಂಡದ ನಾಯಕತ್ವವನ್ನು ರಿಕಿ ಪಾಟಿಂಗ್ ವಹಿಸಿದ್ದರು. 140 ರನ್ ಗಳಿಸಿ ಅಜೇಯರಾಗಿದ್ದ ರಿಕಿ ಪಾಟಿಂಗ್ ಆ ಪಂದ್ಯದಲ್ಲಿ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದ್ದರು.

Story image


2007ರಲ್ಲಿ ಬ್ರಿಡ್ಜ್ ಟೌನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು 53 ರನ್‌ಗಳಿಗೆ ಪರಾಭವಗೊಳಿಸಿ 4 ನೇ ಬಾರಿ ಆಸಿಸ್ ವಿಶ್ವಕಪ್ ಗೆದ್ದಿದ್ದರು. ಸತತ 3 ನೇ ಬಾರಿ ವಿಶ್ವಕಪ್ ಗೆದ್ದ ಸಂಭ್ರಮ. ಎರಡು ಬಾರಿ ವಿಶ್ವಕಪ್ ಗೆಲ್ಲುವಂತೆ ಮಾಡಿದ ನಾಯಕ ಎಂಬ ಹೆಗ್ಗಳಿಕೆ ರಿಕಿ ಪಾಟಿಂಗ್ ಪಾಲಾಯಿತು. ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಗಿಲ್‌ಕ್ರಿಸ್ಟ್ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗಳಿಸಿದರು.

Story image


ಇದೀಗ ಮೈಕಲ್ ಕ್ಲಾರ್ಕ್ ನೇತೃತ್ವದಲ್ಲಿ ತಮ್ಮ ತಾಯ್ನಾಡಿನಲ್ಲೇ ಆಸ್ಟ್ರೇಲಿಯಾ 5ನೇ ಬಾರಿ ವಿಶ್ವಕಪ್ ಎತ್ತಿ ಹಿಡಿದೆ. ಮೆಲ್ಬರ್ನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 7 ವಿಕೆಟ್‌ಗಳಿಂದ ಪರಾಭವಗೊಳಿಸಿ ಆಸ್ಟ್ರೇಲಿಯಾ ಮತ್ತೆ ವಿಶ್ವ ಚಾಂಪಿಯನ್ ಆಗಿದ್ದಾರೆ. ವಿಶ್ವಕಪ್‌ನ ನಂತರ ಏಕದಿನ ಪಂದ್ಯಕ್ಕೆ ವಿದಾಯ ಹೇಳಿರುವ ಮೈಕಲ್ ಕ್ಲಾರ್ಕ್ ಈ ವಿಶ್ವಕಪ್ ವಿಜಯವನ್ನು ಇತ್ತೀಚೆಗೆ ಕ್ರಿಕೆಟ್ ಆಡುತ್ತಿರುವಾಗ ತಲೆಗೆ ಚೆಂಡು ಬಿಡಿದು ಸಾವನ್ನಪ್ಪಿದ ಫಿಲಿಪ್ ಹ್ಯೂಸ್ ಗೆ ಅರ್ಪಿಸಿದ್ದಾರೆ. ಪ್ರಸ್ತುತ ಪಂದ್ಯದಲ್ಲಿ ಜೇಮ್ಸ್ ಫಾಕ್ನರ್ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಹಾಗೂ ಮಿಚೆಲ್ ಸ್ಟಾರ್ಕ್ ಮ್ಯಾನ್ ಆಫ್ ದ ಸೀರಿಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.