ವಿಶೇಷ

ಕೇಜ್ರಿವಾಲ್ ಯಶಸ್ಸಿನಿಂದ ಕಲಿಯಬೇಕಾದುದು...

ಕಳೆದ ಬಾರಿ ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಅರವಿಂದ್ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷ ಈ ಬಾರಿ ಅಭೂತಪೂರ್ವ...

ಕೇಜ್ರಿವಾಲ್ ಯಶಸ್ಸಿನಿಂದ ಕಲಿಯಬೇಕಾದುದು...
ಅರವಿಂದ್ ಕೇಜ್ರಿವಾಲ್‌
Published On :

ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಅರವಿಂದ್ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷ ಈ ಬಾರಿ ದೆಹಲಿ ವಿಧಾನಸಭಾ ಚುನಾವಣೆ ಅಭೂತಪೂರ್ವ ಯಶಸ್ಸು ಕಂಡುಕೊಂಡಿದೆ. ಸಾಮಾನ್ಯ ಮನುಷ್ಯ (ಆಮ್ ಆದ್ಮಿ) ಇಲ್ಲಿ ಗೆದ್ದಿದ್ದಾನೆ ಎಂದು ನಾವು ಬಣ್ಣಿಸುವಾಗ ಅರವಿಂದ್ ಕೇಜ್ರಿವಾಲ್‌ನಂಥ ಜನಸಾಮಾನ್ಯರ ನಾಯಕ ಇಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಾನೆ. ನಾನು ಜನಸಾಮಾನ್ಯರ ಸಿಎಂ ಎಂದು ಕೇಜ್ರಿವಾಲ್ ಹೇಳಿಕೊಳ್ಳುವಾಗ ದಿಲ್ಲಿ ಗದ್ದುಗೆಯೇರಲು ಆತ ಅನುಭವಿಸಿದ ಕಷ್ಟಗಳು ಹಾಗೂ ಆ ಕಷ್ಟಗಳನ್ನು ಹೇಗೆ ನಿಭಾಯಿಸಿದರು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಆ ಯಶಸ್ಸಿಗೆ ಕಾರಣರಾದ ಕೇಜ್ರಿವಾಲ್‌ನಿಂದ ನಾವು ಕಲಿತದ್ದೇನು? ಎಂದು ಯೋಚಿಸಿದರೆ ಒಂದಷ್ಟು ಯಶಸ್ಸಿನ ಗುಟ್ಟುಗಳು ನಮಗೆ ದಕ್ಕಬಹುದು...

ಸೋತರೂ ಸುಮ್ಮನೆ ಕೂರಲಿಲ್ಲ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರಬಂದ ನಂತರ ಕೇಜ್ರಿವಾಲ್, ಹೀಗಾಗಿ ಬಿಡ್ತು ಎಂದು ಸುಮ್ಮನೆ ಕೂರಲಿಲ್ಲ. ಜನರು ಟೀಕಿಸಿದರು, ಲೇವಡಿ ಮಾಡಿದರು. ಆದರೆ ಕೇಜ್ರಿವಾಲ್ ಜನರೊಂದಿಗೆ ಬೆರೆತರು. ಮುಂದಿನ ಚುನಾವಣೆಗಾಗಿ ರಣತಂತ್ರ ಹೂಡುತ್ತಾ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಪ್ರಚಾರ ಕಾರ್ಯದಲ್ಲಿ ತೊಡಗಿದರು. ದೆಹಲಿಯ ಜನ ಸಾಮಾನ್ಯರೇ ಮತದಾರರು ಆದ್ದರಿಂದ ಅವರ ಮನವೊಲಿಸುವುದು ಮುಖ್ಯ ಎಂದು ಮಾತಿನಲ್ಲೇ ಮೋಡಿ ಮಾಡುವುದಕ್ಕಿಂತ ಕಾರ್ಯದತ್ತ  ಗಮನ ಹರಿಸಿದರು.

ಒಣಪ್ರತಿಷ್ಠೆ ಮಾಡಲಿಲ್ಲ
ಕೇಜ್ರಿವಾಲ್ ಬೇರೆ ರಾಜಕಾರಣಿಗಳಂತೆ ಒಣಪ್ರತಿಷ್ಠೆ ಮಾಡಲಿಲ್ಲ. ಅಧಿಕಾರದಲ್ಲಿದ್ದಾಗಲೂ, ಅಧಿಕಾರದಿಂದ ಕೆಳಗಿಳಿದಾಗಲೂ ಅವರು ಜನರ ಸಮಸ್ಯೆಗಳೇನು ಎಂಬುದನ್ನು ಆಲಿಸುತ್ತಿದ್ದರು. ಜಾತಿ, ಮತದ ಆಧಾರದ ಮೇಲೆ ಮತ ಯಾಚಿಸುವ ರೀತಿಯನ್ನು ಬಿಟ್ಟು, ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟು ಆ ಬಗ್ಗೆಯೇ ಕಾರ್ಯಪ್ರವರ್ತರಾಗಿದ್ದರು.

ಭ್ರಮಾಲೋಕದಲ್ಲಿರಲಿಲ್ಲ
ಅಧಿಕಾರ ಕೈಗೆ ಬಂದ ಕೂಡಲೇ ನಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು ಹೇಳಿ ಆಮೇಲೆ ಎಲ್ಲವನ್ನೂ ಮರೆತು ಬಿಡುವ ರಾಜಕಾರಣಿಗಳೇ ಹೆಚ್ಚು. ಆದರೆ ಕೇಜ್ರಿವಾಲ್ ಅಧಿಕಾರದಲ್ಲಿದ್ದಾಗಲೂ ಅಧಿಕಾರದಿಂದ ಕೆಳಗಿಳಿದಾಗಲೂ ಸ್ಥಿತಪ್ರಜ್ಞರಾಗಿದ್ದರು. ಆಮ್ ಆದ್ಮಿ ಪಕ್ಷ ಹೇಳ ಹೆಸರಿಲ್ಲದೆ ಹೋಯ್ತು ಎಂದು ಹೇಳಿದಾಗಲೂ, ಏಳೆಂಟು ತಿಂಗಳಲ್ಲಿ  ಪಕ್ಷವನ್ನು ಪುನಸ್ಥಾಪಿಸಲು ಕೇಜ್ರಿವಾಲ್‌ಗೆ ಸಾಧ್ಯವಾಗಿದ್ದು, ವಾಸ್ತವದ ಅರಿವಿನಿಂದಾಗಿಯೇ. ದೆಹಲಿಯ ವಾಸ್ತವ ಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಕೇಜ್ರಿವಾಲ್‌ಗೆ ದೆಹಲಿಯ ಜನರ ಮಧ್ಯೆ  ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ದುಡಿದರು. ಎಲ್ಲ ಸಮುದಾಯಗಳನ್ನು ಒಂದೇ ರೀತಿ ಎಂದು ಪರಿಗಣಿಸಿದ್ದರಿಂದ ಎಲ್ಲರ ಬೆಂಬಲ ಆಪ್‌ಗೆ ಸಿಕ್ಕಿತು.

ಸಂಯಮದ ವರ್ತನೆ

ಪ್ರತಿಪಕ್ಷಗಳು ಕೇಜ್ರಿವಾಲ್‌ರನ್ನು ಅರಾಜಕತಾವಾದಿ ಎಂದರು. ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್ ಏನೂ ಹೇಳಲಿಲ್ಲ. ಪ್ರಚಾರ ಕಾರ್ಯಕ್ರಮಗಳಲ್ಲಿ ಕಿರಣ್ ಬೇಡಿ, ಕೇಜ್ರಿವಾಲ್ ಸದಾ ಸುದ್ದಿಯಲ್ಲಿರಬಯಸುತ್ತಾರೆ, ಹಾಗೆ..ಹೀಗೆ ಎಂದು ಟೀಕಾಸ್ತ್ರ ಪ್ರಯೋಗಿಸಿದಾಗಲೂ ಬೇಡಿ ವಿರುದ್ಧ ಕೇಜ್ರಿ ಸುಮ್ಮನಿದ್ದರು. ಕಿರಣ್ ಬೇಡಿ ಒಳ್ಳೆಯ ವ್ಯಕ್ತಿ ಆದರೆ ತಪ್ಪಾದ ಪಕ್ಷದಲ್ಲಿದ್ದಾರೆ ಎಂದಷ್ಟೇ ಹೇಳಿ ಕೇಜ್ರಿವಾಲ್ ಸುಮ್ಮನಾದರು.
ಚುನಾವಣಾ ಫಲಿತಾಂಶ ಪ್ರಕಟವಾಗಿ ಆಪ್ ಶಾಸಕರು ವಿಜಯೋತ್ಸಾಹ ಮಾಡುತ್ತಿದ್ದಾಗ ಕೇಜ್ರಿವಾಲ್, ಗೆಲವಿನಿಂದ ಅಹಂಕಾರಿಗಳಾಗಬೇಡಿ. ನಾವು ಅಹಂಕಾರ ಮೆರೆದರೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಆದ ಅನುಭವವೇ ನಮಗಾಗುತ್ತದೆ  ಎಂದು ಕಿವಿಮಾತು ಹೇಳಿದ್ದರು.
ಸೋಲು, ಗೆಲುವುಗಳಲ್ಲಿ ಕೇಜ್ರಿ ಕುಗ್ಗಲಿಲ್ಲ, ಹಿಗ್ಗಲಿಲ್ಲ. ಅವರ ಸಂಯಮದ ವರ್ತನೆಯೇ ಜನರನ್ನು ಹತ್ತಿರವಾಗುವಂತೆ ಮಾಡಿತ್ತು.

ತಪ್ಪಾಗಿದೆ ಕ್ಷಮಿಸಿ ಅಂದ್ರು...
ಎಲ್ಲರೂ ತಪ್ಪು ಮಾಡಿಯೇ ಮಾಡುತ್ತಾರೆ. ಕೇಜ್ರಿವಾಲ್ ಕೂಡಾ ತಪ್ಪು ಮಾಡಿದರು. ತಾನು ಮಾಡಿದ್ದು ತಪ್ಪು ಎಂದು ಅರಿವಾದಾಗ ಅವರು ಜನರಲ್ಲಿ ಕ್ಷಮೆ ಕೇಳಿದರು. ಜನರು ತಮ್ಮ ಮೇಲೆ ವಿಶ್ವಾಸವಿಟ್ಟು ಅಧಿಕಾರಕ್ಕೇರಿಸಿದರು. ಆದರೆ 29 ದಿನಕ್ಕೆ ರಾಜಿನಾಮೆ ಕೊಟ್ಟು ಹೊರ ನಡೆದದ್ದು ನನ್ನ ತಪ್ಪು ಎಂದು ತಮ್ಮ ಅಹಂನ್ನು ಬದಿಗಿಟ್ಟು ಕೇಜ್ರಿವಾಲ್ ಕ್ಷಮೆಯಾಚಿಸಿದರು. ಅಧಿಕಾದಲ್ಲಿದ್ದ 49 ದಿನದಲ್ಲಿ ತಾನು ಏನೆಲ್ಲಾ ಮಾಡಿದೆ ಎಂಬುದನ್ನು ಹೇಳಿದರು. ನನಗೊಂದು ಅವಕಾಶ ಕೊಡಿ ಎಂದು ಬೇಡಿದರು. ಕೇಜ್ರಿವಾಲ್‌ರ ಪ್ರಾಮಾಣಿಕತೆಗೆ ತಲೆಬಾಗಿದ ಜನತೆ, ಇನ್ನೊಂದು ಅವಕಾಶವನ್ನು ನೀಡಿ ಅಧಿಕಾರಕ್ಕೇರುವಂತೆ ಮಾಡಿದರು.

-ಸಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.