ಕೊನೆಗೂ ಆ ರೈಲು ಬರಲೇ ಇಲ್ಲ...
ಗಿಜಿಗುಡುತ್ತಿರುವ ನಿಲ್ದಾಣ. ಕ್ಷಣ ಕ್ಷಣಕ್ಕೂ ಸದ್ದು ಮಾಡುತ್ತಾ ಬರುವ ರೈಲುಗಳು. ಹತ್ತುವವರೆಷ್ಟೋ, ಇಳಿಯುವವರೆಷ್ಟೋ ಲೆಕ್ಕಕ್ಕೇ ಸಿಗುತ್ತಿಲ್ಲ. ಕಣ್ಣು ಮಿಟುಕಿಸಿ...

ಗಿಜಿಗುಡುತ್ತಿರುವ ನಿಲ್ದಾಣ. ಕ್ಷಣ ಕ್ಷಣಕ್ಕೂ ಸದ್ದು ಮಾಡುತ್ತಾ ಬರುವ ರೈಲುಗಳು. ಹತ್ತುವವರೆಷ್ಟೋ, ಇಳಿಯುವವರೆಷ್ಟೋ ಲೆಕ್ಕಕ್ಕೇ ಸಿಗುತ್ತಿಲ್ಲ. ಕಣ್ಣು ಮಿಟುಕಿಸಿ ತೆಗೆಯುವಷ್ಟರಲ್ಲಿ ಆಗಿದ್ದವರು ಈಗಿಲ್ಲ. ಈಗಿರುವವರು ಗೊತ್ತಿಲ್ಲ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ನೋಟದೆಡೆ ದೃಷ್ಟಿಬೀರುತ್ತಾ, ಮೂಲೆಯ ಕಲ್ಲು ಬೆಂಚಿನ ಮೇಲೆ ಆಕೆ ಕುಳಿತಿದ್ದಾಳೆ. ಪಕ್ಕದಲ್ಲಿ ಗಂಡು ಮಗು, ತೊಡೆಯ ಮೇಲೊಂದು ಹೆಣ್ಣು ಪಾಪು. ಹುಡುಗನಿಗೆ ಸುಮಾರು 5 ವರ್ಷವಿರಬಹುದು. ಸ್ವಲ್ಪ ಪೋಕರಿ. ಕುಳಿತಲ್ಲಿ ಕುಳಿತುಕೊಳ್ಳುವುದಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ, ಅವರನ್ನೊಮ್ಮೆ ಇವರನ್ನೊಮ್ಮೆ ನೋಡುತ್ತಾ, ಏನೋ ಮಾತನಾಡುತ್ತಾ ತನ್ನದೇ ಲೋಕದಲ್ಲಿ ಮುಳುಗಿದ್ದಾನೆ. ಆಕೆಯೋ... ನಿಲ್ದಾಣದಲ್ಲಿ ಬಂದು ನಿಲ್ಲುತ್ತಿರುವ ಪ್ರತಿಯೊಂದು ರೈಲಿನತ್ತಲೂ ಕಾತರದ ಕಣ್ಣುಗಳಿಂದ ನೋಡುತ್ತಿದ್ದಾಳೆ. ಇವರನ್ನೇ ನೋಡುತ್ತಾ ಇದ್ದ ನನಗೆ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ.
ಬೆಂಗಳೂರಿಗೆ ಹೋಗುವ ರೈಲು ಬರಲು ಇನ್ನೂ ಅರ್ಧ ಗಂಟೆಯಿತ್ತು. ಮೆಲ್ಲನೆ ಆ ಮಹಿಳೆಯತ್ತ ಹೆಜ್ಜೆಯಿಟ್ಟೆ. ಕಲ್ಲು ಬೆಂಚಿನಲ್ಲಿ ಆಕೆಯ ಪಕ್ಕದಲ್ಲಿಯೇ ಕುಳಿತೆ. ಒಂದು ಕ್ಷಣ ನಿದ್ದೆಯಿಂದ ಎಚ್ಚೆತ್ತವಳಂತೆ ಛಕ್ಕನೆ ನನ್ನತ್ತ ನೋಡಿದಳು. ಮುಗುಳ್ನಗೆ ಬೀರಿದೆ. ಆಕೆ ಸ್ವಲ್ಪ ಅಂಜುತ್ತಲೇ, ಬೇಕೋ ಬೇಡವೋ ಎಂಬಂತೆ ತುಟಿಯರಳಿಸಿದಳು. ಆ ಹುಡುಗ ನನ್ನ ಕೈಯ್ಯಲ್ಲಿದ್ದ ಮೊಬೈಲ್ ನೋಡಿ ಮೆಲ್ಲನೆ ಪಕ್ಕಕ್ಕೆ ಬಂದು ನಿಂತುಕೊಂಡ.
ಕುತೂಹಲದ ಕಣ್ಣುಗಳಿಂದ ನೋಡತೊಡಗಿದ. ನಾನು ಅವನೊಂದಿಗೆ ಮಾತಿಗಿಳಿದಿದ್ದೇ ತಡ, ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು ಹಾಕತೊಡಗಿದ. ಹಿಂದಿ ಮತ್ತು ಕನ್ನಡ ಅರ್ಧಂಬರ್ದ ಬೆರೆಸಿದ ಆತನ ಮಾತು ಕೇಳುವಾಗ ನಗು ಬರುತ್ತಿತ್ತು.
``ನಾವು ಅಪ್ಪನಿಗಾಗಿ ಕಾಯುತ್ತಿ ದ್ದೇವೆ. ಬರುವಾಗ ಜೀನ್ಸ್ ಪ್ಯಾಂಟ್ ತರುತ್ತೇನೆಂದು ಹೇಳಿದ್ದಾರೆ". ಇದೇ ಮಾತನ್ನು ಸರಿಸುಮಾರು 15 ಬಾರಿ ಹೇಳಿದ. ನನಗೂ ಕೇಳಿ ಕೇಳಿ ಸಾಕಾಯಿತು. ಹಾಂ ಹಾಂ ಎನ್ನುತ್ತಾ
ಸುಮ್ಮನಾದೆ. ಅಷ್ಟರಲ್ಲಿ ಆ ಮಹಿಳೆ ನನ್ನೊಂದಿಗೆ ಮಾತನಾಡಲು ಶುರುಮಾಡಿದಳು.
``ಅವರು(ಪತಿ) ನಮ್ಮ ಮನೆ ಪಕ್ಕದಲ್ಲೇ ಸಲೂನ್ ಇಟ್ಟುಕೊಂಡಿದ್ದರು. ಅವರೊಂದಿಗೆ ಸ್ನೇಹ ಬೆಳೆಯಿತು. ಸ್ನೇಹ ಪ್ರೇಮಕ್ಕೆ ತಿರುಗಿ ಮನೆಯವರೆಲ್ಲರ ಒಪ್ಪಿಗೆಯಿಂದ ಮದುವೆಯೂ ಆಯ್ತು. ಅವರು ದೆಹಲಿಯಿಂದ ಕೆಲಸಕ್ಕೆಂದು ಇಲ್ಲಿಗೆ ಬಂದವರು. ಹಾಗಾಗಿ ಮದುವೆ ನಂತರ ನಾನೂ ದೆಹಲಿಗೆ(ಅತ್ತೆ ಮನೆ) ಹೋದೆ. ಅತ್ತೆ, ಮಾವ, ನಾದಿನಿಯರು ಎಲ್ಲರೂ ಚೆನ್ನಾಗಿ ಹೊಂದಿಕೊಂಡರು. ಅಲ್ಲಿನ ಜೀವನಕ್ಕೆ ಒಗ್ಗಿಕೊಂಡೆ. ಎರಡು ಮಕ್ಕಳೂ ಆದವು. ಹೆಣ್ಣು ಮಗು ಆಗುವವರೆಗೂ ಜೀವನ ಚೆನ್ನಾಗಿಯೇ ಸಾಗಿತ್ತು. ಇವಳು ಹುಟ್ಟಿದ ಬಳಿಕ ನಮ್ಮನ್ನು ಕರೆದುಕೊಂಡು ಕೇರಳಕ್ಕೆ ಬಂದರು.
ಕೇರಳದಲ್ಲಿಯೇ ಅಂಗಡಿ ಇಟ್ಟುಕೊಂಡು ಕೆಲವು ತಿಂಗಳು ಇಲ್ಲೇ ಇದ್ದರು. ಒಂದು ದಿನ ದೆಹಲಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರ ಪತ್ತೆಯೇ ಇಲ್ಲ. ಅಲ್ಲಿಗೆ ಕರೆಮಾಡಿದರೆ ಅತ್ತೆ ಮನೆಯವರು ನಮಗೇನೂ ಗೊತ್ತಿಲ್ಲ ಎನ್ನುತ್ತಿದ್ದರೆ. 6 ತಿಂಗಳಾಯಿತು. ಹೋಗುವಾಗ ಮಗನಿಗೆ ಜೀನ್ಸ್ ಪ್ಯಾಂಟ್ ತರುವುದಾಗಿ ಭರವಸೆ ನೀಡಿ ಹೋಗಿದ್ದರು.
ಇವ ಅದನ್ನೇ ನೆನಪಿಟ್ಟುಕೊಂಡು ಅಪ್ಪನಿಗಾಗಿ ಕಾಯುತ್ತಿದ್ದಾನೆ. ಹೆಚ್ಚು ಹಠ ಮಾಡಿದಾಗ ರೈಲ್ವೆ ನಿಲ್ದಾಣಕ್ಕೆ ಕರೆತರುತ್ತೇನೆ. ಒಂದೆರಡು ಗಂಟೆ ಇಲ್ಲೇ ಕುಳಿತು ನಂತರ ವಾಪಸಾಗುತ್ತೇವೆ.
ಇವತ್ತಲ್ಲ ನಾಳೆ ಅವರು ಬಂದೇ ಬರುತ್ತಾರೆಂಬ ವಿಶ್ವಾಸ ನನಗಿದೆ" ಎಂದಳು. ಅಷ್ಟು ಹೇಳುವಾಗ ಕಣ್ಣೀರು ಕೆನ್ನೆಯಿಂದ ಜಾರಿಬಿತ್ತು. ಸೆರಗಿನಿಂದ ಅದನ್ನು ರೆಸಿಕೊಂಡಳು. ಅಷ್ಟರಲ್ಲಿ ಬೆಂಗಳೂರು ರೈಲು ಬಂದು ನಿಲ್ದಾಣದಲ್ಲಿ ನಿಂತಿತ್ತು. ನಾನು ಲಗುಬಗನೆ ಎದ್ದು ನಿಂತೆ. ಭಾರವಾದ ಮನಸ್ಸಿನಿಂದಲೇ ರೈಲು ಹತ್ತಿ ದೆ. ಕಿಟಕಿಯ ಬಳಿ ಕುಳಿತು ಮತ್ತೆ ಅವರನ್ನೇ ನೋಡಿದೆ.
ನನ್ನನ್ನೊಮ್ಮೆ ದಿಟ್ಟಿಸಿ ನೋಡಿದಳು. ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ಬಂದು ನಿಂತಿತು. ಆಕೆಯ ಕಣ್ಣು ಅದರತ್ತ ಹೊರಳಿತು. ನಿರೀಕ್ಷೆಯ ಕಣ್ಣುಗಳಲ್ಲಿ ಮತ್ತದೇ ನಿರಾಸೆ ಮಗುವನ್ನೆತ್ತಿಕೊಂಡು ಹೊರಟು ನಿಂತಳು. ಕೊನೆಗೂ ಆ ಹೆಂಗಸು ನಿರೀಕ್ಷಿಸಿದ ರೈಲು ಬರಲೇ ಇಲ್ಲ.
-ಹಲೀಮತ್ ಸಅದಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


