ಗೌಡರ ತಲೆ ಹಗುರ
ಅಧಿಕಾರ ಇರಲಿ, ಇಲ್ಲದಿರಲಿ... ದೇವೇಗೌಡರು ಈ ನಾಡಿನ 24x 7 ರಾಜಕಾರಣಿ

ಅಧಿಕಾರ ಇರಲಿ, ಇಲ್ಲದಿರಲಿ... ದೇವೇಗೌಡರು ಈ ನಾಡಿನ 24x7 ರಾಜಕಾರಣಿ. ಪಾಲಿಟಿಕ್ಸಿನ ಏಳು ಕೆರೆಯ ನೀರು ಕುಡಿದ ಗೌಡರು ಸುಲಭದಲ್ಲಿ ಸೋಲೊಪ್ಪಿಕೊಳ್ಳುವವರಲ್ಲ. ಅವರ ತಲೆಯ ಫ್ಯಾಕ್ಟರಿಯೊಳಗೆ ನೂರಾರು ತಂತ್ರ-ಪ್ರತಿತಂತ್ರಗಳು ಹುಟ್ಟುತ್ತಲೇ ಇರುತ್ತವೆ. ಗೌಡರ ನಡೆ ಕೆಲವೊಮ್ಮೆ ದೇವರ ಊಹೆಗೂ ನಿಲುಕದು. ಹಾಗಾದರೆ ಗೌಡರ ತಲೆಯ ಸೀಕ್ರೆಟ್ ಏನಿರಬಹುದು?
ಏನೂ ಅಲ್ಲ, ಜಸ್ಟ್ ಮಸಾಜ್! ಆಯುರ್ವೇದದ ಪಂಚಕರ್ಮ ಚಿಕಿತ್ಸೆ! ಸದ್ಯ ದೇವೇಗೌಡರು ಬೆಂಗಳೂರಿನಂದ ಬಲುದೂರ. ಹುಟ್ಟೂರು ಹಾಸನದಲ್ಲೇ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿರುವುದರ ಹಿಂದೆ ಕೌಟುಂಬಿಕ ಕಾರಣಗಳು ಇಲ್ಲ ಎನ್ನುವ ಹಾಗಿಲ್ಲ. ಪಕ್ಷದ ಆಂತರಿಕ ಬೆಳಣಿಗೆಗೆ ಅವರನ್ನು ಇನ್ನಷ್ಟು ಮಾನಸಿಕವಾಗಿ ಕುಗ್ಗುವಂತೆ ಮಾಡಿರುವುದೂ ಸುಳ್ಳಲ್ಲ. ಈ ಎಲ್ಲ ಸಂಗತಿಗಳಿಂದ ಮಾನಸಿಕವಾಗಿ ಹಗುರವಾಗಲು ಕೂಡಾ ಗೌಡರಿಗೆ ನೆರವಾಗುತ್ತಿರುವುದು ಪಂಚಕರ್ಮ ಚಿಕಿತ್ಸೆ . ಸರ್ವಾಂಗ ಅಭ್ಯಂಗ ಹಾಗೂ ಶಿರೋಧಾರ ಚಿಕಿತ್ಸೆ ಅವರ ಸದ್ಯದ ಮಾನಸಿಕ ಆರೋಗ್ಯದ ಗುಟ್ಟು. ಗೌಡರಿಗೆ ವಯಸ್ಸು ಎಂಭತ್ತು ಆದರೂ ರಾಜಕಾರಣ ಅವರಿಗೇನು ಸಪ್ಪೆ ಅನಿಸಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆಯು ಬಿಜೆಪಿಯನ್ನು ಆಟ ಆಡ್ಸುತ್ತಾ? ಹರಿಯಾಣದಲ್ಲಿ ಕಾಂಗ್ರೆಸ್ ಸಂಪೂರ್ಣ ಉದುರಿ ಬಿತ್ತಾ? ಇವೆಲ್ಲ ಪ್ರಶ್ನೆಯನ್ನು ಟೀವಿ ನೋಡುತ್ತಲೇ ತಲೆಯೊಳಗೆ ಬಿಟ್ಟುಕೊಳ್ಳುವ ಗೌಡರಿಗೆ ಜೆಡಿಎಸ್‌ನಲ್ಲಿ ಮೊದಲ ಗೌರವ ಸಿಗುತ್ತಿಲ್ಲ. ಮಕ್ಕಳ ನಡೆ ಮತ್ತೊಂದು ರೀತಿ. ಮೋದಿ ಅಲೆ ಮುಂದೆ ಪ್ರಾದೇಶಿಕ ಪಕ್ಷಗಳೆಲ್ಲ ನೆಲಕಚ್ಚುತ್ತಿರುವ ನೋವು ಅವರನ್ನು ಕಾಡದೇ ಉಳಿದಿಲ್ಲ. ರಾಜಕೀಯದಲ್ಲಿ ಏನೇನೋ ಬಿರುಗಾಳಇಗೆ ಎದೆಕೊಟ್ಟಿರುವ ಗೌಡರಿಗೆ ಈ ಸಂಗತಿಗಳು ಯಾವ ಲೆಕ್ಕನೂ ಅಲ್ಲ. ಆದರೂ ಅವರಿಗೀಗ ಮಾನಸಿಕ ಶಾಂತಿ ಬೇಕಾಗಿದೆಯಂತೆ. ದಿಂಬಿಗೆ ತಲೆಯಿಟ್ಟರೆ ನೆಮ್ಮದಿಯ ನಿದ್ದೆ ಬೇಕಂತೆ. ಈ ಕಾರಣಕ್ಕಾಗಿ ಅವರು ಹಾಸನದಲ್ಲಿರುವ ಶ್ರೀ ಧರ್ಮಸ್ಥಳ ಆಯುರ್ವೇದ ಚಿಕಿತ್ಸಾಲಯದಲ್ಲಿ ಚೈತನ್ಯ ತುಂಬಿಕೊಳ್ಳುತ್ತಿದ್ದಾರೆ. ಸರ್ವಾಂಗ ಅಭ್ಯಂಗ ಹಾಗೂ ಶಿರೋಧಾರ ಚಿಕಿತ್ಸೆಹೆ ಏನಿಲ್ಲವೆಂದರೂ ಎರಡು ತಾಸು ಬೇಕು. ಯಾವುದೋ ಕಾಡಿನ ಸಸ್ಯಗಳ ಎಣ್ಣೆ, ಅದನ್ನು ಕೊಂಚ ತಲೆಗೆ ಬಿಟ್ಟುಕೊಂಡು, ಮಸಾಜ್ ಮಾಡಿದರೆ ಗೌಡರ ತಲೆ ಇನ್ನಷ್ಟು ರೀಫ್ರೆಶ್ ಆಗುತ್ತದೆ. ನೇಗಿಲು ಹಿಡಿದು ಹೊಲ ಉಳುಮೆ ಮಾಡಿದ ಆ ಭುಜಗಳಲ್ಲಿ ಕಸುವು ಇನ್ನೂ ಇದೆ. ಆ ರಟ್ಟೆ ಬತ್ತಿಲ್ಲ. ಅದಕ್ಕೂ ಅರ್ಧ ತಾಸು ಎಣ್ಣೆಯ ಅಭಿಷೇಕ.
ನಮ್ಮ ದೇವೇಗೌಡರಿಗೆ ಆಲೋಪತಿ ಚಿಕಿತ್ಸೆ ಅಷ್ಟು ಹಿಡಿಸುತ್ತಿಲ್ಲ. ಹಂತ ಹಂತವಾಗಿ ಅದರೊಂದಿಗಿನ ನಂಟನ್ನು ಕಳಚುತ್ತಲೇ ಬಂದಿದ್ದಾರೆ. ಈ ಕಾರಣವಿಟ್ಟುಕೊಂಡೂ ಗೌಡರು ಇಲ್ಲಿಗೆ ಚಿಕಿತ್ಸೆಗೆ ಬಂದಿದ್ದಾರೆ. ಸುಮಾರು 10 ದಿನಗಳವರೆಗೆ ಚಿಕಿತ್ಸೆ ಪಡೆಯಲಿದ್ದಾರೆ. ಈಗಾಗಲೇ ಮೂರು ದಿನಗಳವರೆಗೆ ಚಿಕಿತ್ಸೆ ಪಡೆದುಕೊಂಡಿರುವ ಗೌಡರು ಮತ್ತೆ ಇಲ್ಲಿಗೆ ಬರಲಿದ್ದಾರೆ. ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳೆಲ್ಲ ಮುಗಿದ ಬಳಿಕ ನವೆಂಬರ್ 2 ರಿಂದ 8ರ ವರೆಗೆ ಮತ್ತೆ ಚಿಕಿತ್ಸೆ ಪಡೆಯಲಿದ್ದಾರೆ.
ವೈದ್ಯ ಉವಾಚ
ಗೌಡರಿಗೆ ಚಿಕಿತ್ಸೆ ನೀಡುತ್ತಿರುವ ಆಯುರ್ವೇದ ವೈದ್ಯ ಡಾ. ಬಿ.ಎ. ಲೋಹಿತ್ ಹೇಳುವುದು ಹೀಗೆ; ಅಭ್ಯಂಗ ಮತ್ತು ಶಿರೋದಾರ ಚಿಕಿತ್ಸೆಯಿಂದ ಮಾನಸಿಕ ಒತ್ತಡ ಕಡಿಮೆಯಾಗಿ ನಿದ್ರಾಹೀನತೆ ನಿವಾರಣೆ ಆಗುತ್ತದೆ. ಅಲ್ಲದೇ ಸ್ವಾಭಾವಿಕವಾಗಿ ರಕ್ತ ಪರಿಚಲನೆಗೆ ಇರುವ ಅಡ್ಡಿ ಆತಂಕಗಳು ದೂರವಾಗುತ್ತವೆ. ಅಲ್ಲದೇ ಶುಗರ್ ಅನ್ನೂ ನಿಯಂತ್ರಣದಲ್ಲಿಡಬಹುದು. ಈ ಚಿಕಿತ್ಸೆ ಚೈತನ್ಯ ತುಂಬುತ್ತದೆ. ಈ ಕಾರಣಗಳಿಂದ ದೇವೇಗೌಡರು ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ.
ಸೇವೆಗೆ ಇನ್ನಷ್ಟು ಶಕ್ತಿ
ವೈದ್ಯರ ಸ್ಪಷ್ಟನೆ ಇದಾದರೆ, ದೇವೇಗೌಡರು ನೀಡುವ ವ್ಯಾಖ್ಯಾನವೇ ಬೇರೆ. ಇರುವಷ್ಟು ದಿನ ಆರೋಗ್ಯವಾಗಿರಬೇಕು ಎಂಬ ಕಾರಣದಿಂದ ಈ ಚಿಕಿತ್ಸೆ ಪಡೆಯುತ್ತಿದ್ದೇನೆ. ಧರ್ಮಸ್ಥಳ ಕ್ಷೇತ್ರದ ಶ್ರೀ ವಿರೇಂದ್ರ ಹೆಗ್ಗಡೆ ಅವರು ಆಯುರ್ವೇದ ಚಿಕಿತ್ಸೆ ಪಡೆದು ನೋಡಿ ಅಂದರು. ಅದಕ್ಕೆ ಒಪ್ಪಿ ಈ ಚಿಕಿತ್ಸೆ ಪಡೆಯುತ್ತಿದ್ದೇನೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತಿದೆ. ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ಮತ್ತು ಉಲ್ಲಾಸ ಬರುತ್ತಿದೆ. ಅಂದಹಾಗೆ ದೇವೇಗೌಡರ ಚಿಕಿತ್ಸೆಯ ಉಸ್ತುವಾರಿಯನ್ನು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರಸನ್ನ ಎಸ್ ರಾವ್ ನೋಡಿಕೊಳ್ಳುತ್ತಿದ್ದಾರೆ. ಏನೇ ಅನ್ನಿ...ಗೌಡರ ಮಾರ್ಗದರ್ಶನ ಈ ನಾಡಿಗೆ ಬೇಕು. ಈ ನಮ್ಮ ಒಕ್ಕೊರಲ ಮನವಿಗೆ ಆ ಚಿಕಿತ್ಸೆ ಸೂಕ್ತವಾಗಿ ಸ್ಪಂದಿಸಿದರೆ ಸಾಕಷ್ಟೇ.
ನಾನೇನು ಇಲ್ಲಿ ಸುಮ್ಮನೆ ಚಿಕಿತ್ಸೆಗೆ ಬಂದಿಲ್ಲ. ಈ ಚಿಕಿತ್ಸೆಯಿಂದ ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ಹಾಗೂ ಉಲ್ಲಾಸ ಬರುತ್ತದೆ.
-ಎಚ್.ಡಿ ದೇವೇಗೌಡ
-ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


