ನೆಂಟರ ವಿಷ್ಯ ಬೇಡವೊ ಶಿಷ್ಯ!
ನೆಂಟರಿಂದ ಬಚಾವಾಗಲು 25 Deadly ಉಪಾಯಗಳು

ಅವರ ಮನೆ ನಿಮ್ಮನೆಯಿಂದ ಹತ್ತೇ ನಿಮಿಷದ ದೂರದಲ್ಲಿದೆ. ಹಾಗಾಗಿ ಅವರಿಗೆ ಬಿಡುವಾದಾಗಲೆಲ್ಲ ನೆನಪಾಗುವುದು ನೀವೇ. 'ಹ್ಹೆ ಹ್ಹೆ... ಚೆನ್ನಾಗಿದ್ದೀರಾ?' ಪ್ರತಿ ವೀಕೆಂಡ್‌ನಲ್ಲೂ ಈ ಧ್ವನಿ ನಿಮ್ಮನೆಯ ಬಾಗಿಲಿನಲ್ಲಿ ಪ್ರತ್ಯಕ್ಷವಾಗುತ್ತದೆ. ಒಮ್ಮೊಮ್ಮೆ ವೀಕ್‌ಡೇಸ್‌ನಲ್ಲೂ. ಯಾವ ಬಾಯಲ್ಲಿ ಚೆನ್ನಾಗಿದ್ದೇವೆ ಅಂತ ಹೇಳುವುದು!
ನೆಂಟರನ್ನು ಹಚ್ಚಿಕೊಳ್ಳುವುದೆಂದರೆ ದಾಕ್ಷಿಣ್ಯಕ್ಕೆ ಗರ್ಭಿಣಿಯಾದಂತೆ. ಹಡೆಯುವ ಕಷ್ಟ ನಮಗೇ. ಕೆಲ ನೆಂಟರು ಪ್ರಯೋಜನಕ್ಕೆ ಬರುತ್ತಾರೆ. ಗಮನಿಸಬೇಕಾದ ವಿಷಯವೇನೆಂದರೆ, ಕೆಲವೇ ನೆಂಟರು ಪ್ರಯೋಜನಕ್ಕೆ ಬರುತ್ತಾರೆ! ಇನ್ನುಳಿದ ಹೆಚ್ಚಿನವರು ಶುದ್ಧ ತಲೆನೋವು. ಕಾಟ ಕೊಡುವ ನೆಂಟರನ್ನು ದೂರ ಇಡದೇ ಇದ್ದರೆ ಬೆನ್ನಿಗೆ ಬಡಿಯುವ ದೆವ್ವವನ್ನು ಸೊಂಟದ ಮೇಲೆ ಕೂರಿಸಿಕೊಂಡಂತೆ. ಅದು ನಾನ್‌ಸ್ಟಾಪ್ ಬಡಿಯುತ್ತಲೇ ಇರುತ್ತದೆ. ನಮ್ಮ ಸಂಬಂಧಿಗಳಿಗೆಲ್ಲ ನಾವೂ ನೆಂಟರೇ ಆಗಿದ್ದರೂ, ನೆಂಟರಿಂದ ಯಾವಾಗಲೂ ಅತಿ ಹೆಚ್ಚು ತೊಂದರೆಯಾಗುವುದು ನಮಗೇ. ಎಲ್ಲ ನೆಂಟರಿಗೂ ಹೀಗೆಯೇ ಆಗುತ್ತದೆ ಎಂಬುದು ವಿಶೇಷ. ಹಾಗಾಗಿ ನೆಂಟರಿಂದ ಬಚಾವಾಗುವ ಕೆಲ ತಂತ್ರಗಳನ್ನು ಇಲ್ಲಿ ಕೊಡಲಾಗಿದೆ. ಇವು ತಮಾಷೆಯೆನ್ನಿಸಿದರೂ ಗಂಭೀರವಾಗಿ ಕೆಲಸಕ್ಕೆ ಬಂದುಬಿಡಬಹುದು.
1. ಯಾವ ನೆಂಟರಿಗೆ ಯಾವ ತರಕಾರಿ ಆಗೋದಿಲ್ಲ ಅಂತ ಮೊದಲೇ ತಿಳಿದುಕೊಂಡಿರಿ. ಉದಾ: ಬದನೇಕಾಯಿ ಅಥವಾ ಮೂಲಂಗಿ. ಅವರು ಬಂದಾಗ ಬದನೇಕಾಯಿ ಸಾಂಬಾರು, ಬದನೇಕಾಯಿ ಗೊಜ್ಜು, ಬದನೇಕಾಯಿ ಪಲ್ಯ, ಬದನೇಕಾಯಿ ಬಜ್ಜಿ... ಎಲ್ಲಾ ಅಡುಗೆಯನ್ನೂ ಬದನೇಕಾಯಿಯಲ್ಲೇ ಮಾಡಿ. ಬದನೇಕಾಯಿ ಪಾಯಸ ಮಾಡುವುದು ಗೊತ್ತಿದ್ದರೆ ಅದನ್ನೂ ಮಾಡಿ. ಇದು ಸ್ವಲ್ಪ ಜಾಸ್ತಿಯಾಯ್ತು ಅನ್ನಿಸಿದರೂ ವರ್ಕೌಟ್ ಆಗುತ್ತದೆ.
2. ಕುಡಿಯಲಾಗದಷ್ಟು ಸ್ಟ್ರಾಂಗ್ ಕಾಫಿ ಕೊಡಿ.
ಹಾಲು ಬೇಕು ಅಂದ್ರೆ 'ಅಯ್ಯೋ, ಖಾಲಿ ಆಗೋಯ್ತು' ಅನ್ನಿ. ಅಂಗಡಿಗೆ ಹೋಗಿ ತನ್ನಿ ಅಂತ ಯಾವ ನೆಂಟರೂ ಹೇಳುವುದಿಲ್ಲ.
3. ಮನೆಯ ಹತ್ತಿರವೇ ಇರುವ ಪದೇ ಪದೇ ಬರುವ ನೆಂಟರಾಗಿದ್ದರೆ ಒಂದೆರಡು ಸಲ ಬಾಗಿಲನ್ನೇ ತೆರೆಯಬೇಡಿ. ಮೊಬೈಲ್ ಸೈಲೆಂಟ್ ಮೋಡ್‌ಗೆ ಹಾಕಿಕೊಂಡು ಶಿವಾ ರಾಮಾ ಎನ್ನುತ್ತ ಬೆಡ್‌ರೂಮ್‌ನಲ್ಲಿ ಕುಳಿತುಬಿಡಿ.
4. ಗಂಡ ಕಂಪ್ಯೂಟರ್ ಮುಂದೆ ಕುಳಿತು ಭಯಂಕರ ಕೆಲಸವಿದೆ ಎಂಬಂತೆ ಆ್ಯಕ್ಟ್ ಮಾಡಲಿ. ಹೆಂಡತಿ ಯಾವುದೋ ಎಕ್ಸಾಮಿಗೆ ಓದುವಂತೆ ಸೀರಿಯಸ್ಸಾಗಿ ಪುಸ್ತಕ ಹಿಡಿದು ಕೂರಲಿ. ಟೀವಿ ಕೇಬಲ್ ಕನೆಕ್ಷನ್ ಮೊದಲೇ ಕಿತ್ತಿಡಿ. ಮಾತು, ಟೀವಿ ಎರಡೂ ಇಲ್ಲದಿದ್ದರೆ ಎಂಥಾ ನೆಂಟರೂ ದಾರಿಗೆ ಬರುತ್ತಾರೆ.
5. ಫೋನ್ ಮಾಡಿ ನಾಳೆ ಬರ್ತೀವಿ ಅಂದರೆ, ಫ್ರೆಂಡ್ ಮಗಳ ಬರ್ತಡೇ ಪಾರ್ಟಿಗೆ ಹೋಗ್ತಿದೀವಿ ಎಂದು ಬುರುಡೆ ಬಿಡಿ. ಇದು ಬಹಳ ಕಾಮನ್ ಉಪಾಯ. ನಿಮ್ಮ ಜೊತೆಗೂ ಹಲವರು ಇದನ್ನೇ ಪ್ರಯೋಗಿಸಿರಬಹುದು.
6. ಯಾರಾದರೂ ಬರುವ ಸುಳಿವು ಸಿಕ್ಕರೆ ಆ ವೀಕೆಂಡ್‌ನಲ್ಲಿ ನೀವೇ ಅವರ ಮನೆಗೆ ಹೋಗಿಬಿಡಿ.
7. ಪದೇ ಪದೇ ಬಂದು ಕಾಟ ಕೊಡುವ ನೆಂಟರು ಡಯಾಬಿಟಿಸ್ ಇರುವವರಾಗಿದ್ದರೆ ಮಧ್ಯಾಹ್ನ ಮೂರು ಗಂಟೆಯಾದರೂ ಅಡುಗೆಯನ್ನೇ ಮುಗಿಸಬೇಡಿ. ಅವರಿಗೆ ಕಾಯಲು ಸಾಧ್ಯವಿಲ್ಲ. 'ನಾವು ದಿನಾ ಊಟ ಮಾಡೋದೇ ಇಷ್ಟೊತ್ತಿಗೆ' ಅನ್ನಿ. 'ರಾತ್ರಿ ಊಟ ಹನ್ನೊಂದೂವರೆಗೆ' ಎಂದು ಮೊದಲೇ ಎಚ್ಚರಿಕೆ ಕೊಡಿ. ಸಂಜೆಯೊಳಗೆ ಜಾಗ ಖಾಲಿ ಮಾಡುತ್ತಾರೆ.
8. ಒಂದೆರಡು ದಿನ ನಿಮಗೆ ಕಷ್ಟವಾದರೂ ಪರವಾಗಿಲ್ಲ, ಅಡುಗೆಗೆ ಜಾಸ್ತಿ ಉಪ್ಪು ಹಾಕಿ. ಯಾವಾಗಲೂ ದೀರ್ಘಕಾಲೀನ ಲಾಭವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರಲ್ಲೇ ಯಶಸ್ಸಿದೆ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ.
9. ಮನೆಯಲ್ಲಿ ಎಕ್ಸ್‌ಟ್ರಾ ಸೊಳ್ಳೆಪರದೆ ಇಡಬೇಡಿ. ಗುಡ್‌ನೈಟ್ ಮ್ಯಾಟ್ ಅಥವಾ ಸೊಳ್ಳೆಬತ್ತಿ ಇದ್ದರೆ ನೆಂಟರು ಬರುವುದಕ್ಕೆ ಮುಂಚೆ ಅಡಗಿಸಿಡಿ. ರಾತ್ರಿ ಮಲಗಿದ ಮೇಲೆ ತಾನೇ ಇವುಗಳ ಅಗತ್ಯ ಬೀಳುವುದು. ಅಷ್ಟೊತ್ತಿಗೆ ಅಂಗಡಿಗಳು ಮುಚ್ಚಿರುತ್ತವೆ. ಬೆಳಿಗ್ಗೆಯೆದ್ದು ನೆಂಟರು ಗಾಡಿ ಬಿಡದಿದ್ದರೆ ಆಗ ಹೇಳಿ.
10. ಪೊಗದಸ್ತಾದ ನಾಯಿ ಸಾಕಿಕೊಳ್ಳಿ. ನೆಂಟರು ಬರುವ ದಿನ ಅದನ್ನು ಕಟ್ಟಿಹಾಕಬೇಡಿ ಮತ್ತು ನೀವು ಮನೆಯಿಂದ ಹೊರಬರಬೇಡಿ. ಸಾಕುನಾಯಿ ಎಂದಮೇಲೆ ಹೇಗಿದ್ದರೂ ರೇಬಿಸ್ ಇಂಜೆಕ್ಷನ್ ಕೊಡಿಸಿರುತ್ತೀರಿ. ಜಾಸ್ತಿ ಅಪಾಯವೇನೂ ಇಲ್ಲ.
11. ಮನೆಯಲ್ಲಿ ಅಡುಗೆ ಮಾಡಲು ಬೇಜಾರು ಅಥವಾ ಮೈ ಹುಷಾರಿಲ್ಲ ಎಂದು ಹೆಂಡತಿಯಿಂದ ನೆಪ ಹೇಳಿಸಿ ಎರಡೂ ಹೊತ್ತು ಕೆಟ್ಟ ಹೋಟೆಲ್‌ಗೆ ಊಟಕ್ಕೆ
ಕರೆದುಕೊಂಡು ಹೋಗಿ.
12. ಕಾಯಂ ಬರುವ ನೆಂಟರಿಗೆ ಸಣ್ಣ ವಯಸ್ಸಿನ ಮಕ್ಕಳಿದ್ದರೆ ಒಂದು ಸಲ ನಿಮ್ಮ ಮಕ್ಕಳಿಂದ ಅವರಿಗೆ ಚೆನ್ನಾಗಿ ಹೊಡೆಸಿ ನೋಡಬಹುದು. ಮಕ್ಕಳ ಜಗಳ ಎಂದು ನೀವು ಉಡಾಫೆ ತೋರುತ್ತೀರಿ. ಏಟು ತಿಂದವರು ಅವರ ಮಕ್ಕಳಾದ್ದರಿಂದ ಅವರದನ್ನು ಗಂಭೀರವಾಗಿಯೇ ತೆಗೆದುಕೊಳ್ಳಬೇಕು.
13. 'ಹೌ ಟು ಅವಾಯ್ಡ್ ರಿಲೇಟಿವ್ಸ್' ಪುಸ್ತಕ ತಂದು ಎಲ್ಲರಿಗೂ ಕಾಣಿಸುವಂತೆ ಟೀಪಾಯ್ ಮೇಲಿಡಿ. ಅದನ್ನು ನೋಡಿಯೂ ನೋಡದಂತೆ ಅವರೇನಾದರೂ ಸುಮ್ಮನಿದ್ದರೆ, 'ಇದು ತುಂಬಾ ಚೆನ್ನಾಗಿದೆ. ನಿಮಗೂ ಹೆಲ್ಪ್ ಆಗಬಹುದು, ಓದಿ ನೋಡಿ' ಎಂದು ನೀವಾಗಿಯೇ ಸಜೆಸ್ಟ್ ಮಾಡಿ.
14. ಫ್ರೆಂಡ್ ಫೋನ್ ಮಾಡಿದರೆ 'ಎಲ್ಲೂ ಬರೋಕಾಗಲ್ಲ ಮಾರಾಯ, ಮನೆಗೆ ನೆಂಟ್ರು ಬಂದು ಕೂತ್‌ಬಿಟ್ಟಿದ್ದಾರೆ' ಅಂತ ಮರೆಗೆ ಹೋಗಿ ಆದರೆ ನೆಂಟರಿಗೆ ಚೆನ್ನಾಗಿ ಕೇಳಿಸುವಂತೆ ಹೇಳಿ.
15.'ಇವತ್ತು ಶನಿವಾರ ಅಲ್ವಾ, ನಾವು ಗಂಡ-ಹೆಂಡತಿ ಇಬ್ಬರೂ ಉಪವಾಸ ಮಾಡ್ತಿದ್ದೀವಿ' ಅಂತ ಅವರಿಗೆ ಒಣ ಅವಲಕ್ಕಿ ಕಲಸಿ ಕೊಡಿ. ಭಾನುವಾರ ಬಂದರೆ, 'ಇವತ್ತು ಭಾನುವಾರ ಅಲ್ವಾ, ನಮಗಿಬ್ಬರಿಗೂ ಉಪವಾಸ' ಅನ್ನಿ. ಏಕಾದಶಿ, ದ್ವಾದಶಿ, ತ್ರಯೋದಶಿ, ಹುಣ್ಣಿಮೆ, ಅಮಾವಾಸ್ಯೆ ದಿನ ಬಂದರೂ ಹೀಗೇ ಹೇಳಿ. ಒಟ್ಟಿನಲ್ಲಿ ನೆಂಟರಿಗೆ ಒಣ ಅವಲಕ್ಕಿ ತಿನ್ನಿಸುವುದು ಇಂಪಾರ್ಟೆಂಟು.
16. ನಿಮ್ಮ ಏರಿಯಾದಲ್ಲಿರುವ ಅತಿ ದುಬಾರಿ ಹೋಟೆಲ್‌ಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ತಿಂದು, ಅವರಿಗೂ ಒತ್ತಾಯ ಮಾಡಿ ತಿನ್ನಿಸಿ ಬಿಲ್ಲನ್ನು ಅವರಿಂದಲೇ ಕೊಡಿಸಿ. ನಂತರ, ಸಂಜೆ ಇನ್ನೊಂದು ಹೋಟೆಲಿಗೆ ಹೋಗೋಣ ಎಂದು ಹೇಳಿ.
17. ಅವರ ಕನ್ನಡಕ ಒಡೆದುಹಾಕಿ, ಅಥವಾ ಮೊಬೈಲ್ ಬೀಳಿಸಿ, ಅಥವಾ ಚಪ್ಪಲಿಯನ್ನು ಬೀದಿನಾಯಿ ಕಚ್ಚಿಕೊಂಡು ಹೋಗುವಂತೆ ಮಾಡಿ, ಅಥವಾ ಮಕ್ಕಳ ಕೈಯಲ್ಲಿ ಕಾರಿಗೆ ಸ್ಕ್ರ್ಯಾಚ್ ಮಾಡಿಸಿ, ಅಥವಾ ಬೈಕ್ ಬೀಳಿಸಿ. ಇವುಗಳಲ್ಲಿ ಯಾವುದನ್ನಾದರೂ ಒಂದೇ ಸಲ ಮಾಡಿದರೆ ಸಾಲದು. ಮುಂದಿನ ಸಲ ಬಂದಾಗ ಮತ್ತೊಂದನ್ನು ಮಾಡಬೇಕು.
18. ವಾರಕ್ಕೊಮ್ಮೆ ಕಾಯಂ ಬರುವ ನೆಂಟರೇನಾದರೂ ಇದ್ದರೆ, ಅವರಿಗೆ ಯಾವುದು ಅಲರ್ಜಿ ಎಂದು ತಿಳಿದುಕೊಳ್ಳಿ. ಉದಾ: ಬೆಕ್ಕಿನ ರೋಮ. ಆಗ ಒಂದು ಬೆಕ್ಕು ತಂದು ಸಾಕಿಕೊಳ್ಳಿ. ಎಷ್ಟು ಮುದ್ದಾಗಿದೆ ನೋಡಿ ಅಂತ ಪದೇ ಪದೇ ಅವರ ಮೈಮೇಲೆ ಬಿಡಿ.
19. ಹೇಗಿದ್ದರೂ ಈಗ ವರ್ಷಕ್ಕೆ ಆರೇ ಗ್ಯಾಸ್ ಸಿಲಿಂಡರ್ ಸಿಗೋದು. 'ಗ್ಯಾಸ್‌ಖಾಲಿ ಆಗೋಗಿದೆ. ಬರೋವಾಗ ನಿಮ್ಮನೆಯಿಂದಲೇ ತಂದುಬಿಡಿ' ಅನ್ನಿ.
20. ಸಾಧ್ಯವಾದರೆ ನೆಂಟರು ಬರುವ ದಿನ ಹಲ್ಲುಜ್ಜಬೇಡಿ. ಮತ್ತು ಅವರ ಹತ್ತಿರದಲ್ಲೇ ಕುಳಿತು ಮಾತನಾಡಿ. ಸ್ನಾನ ಮಾಡದಿದ್ದರೆ ಮತ್ತು ಬೆವರು ವಾಸನೆಯ ಬಟ್ಟೆ ಹಾಕಿಕೊಂಡಿದ್ದರೆ ಪ್ಲಸ್ ಪಾಯಿಂಟ್.
21. ಅವರ ಬಳಿ ದುಬಾರಿ ಮೊಬೈಲೇನಾದರೂ ಇದ್ದರೆ ನಿಮ್ಮ ಮಕ್ಕಳಿಗೆ ಅದನ್ನು ತೋರಿಸಿ 'ಒಳ್ಳೊಳ್ಳೆ ಗೇಮ್ಸ್ ಇರಬಹುದು ನೋಡ್ರೋ' ಎಂದು ಒಂದು ಸೂಚನೆ ಕೊಡಿ ಸಾಕು.
22. 'ಇತ್ತೀಚೆಗೆ ನಮ್ಮನೆಗೆ ನೆಂಟರ ಹಾವಳಿ ಎಷ್ಟು ಜಾಸ್ತಿಯಾಗೋಗಿದೆ ಅಂದರೆ, ಪ್ರತಿ ವೀಕೆಂಡ್‌ನಲ್ಲೂ ಯಾರಾದ್ರೂ ಬಂದೇ ಬರ್ತಾರೆ' ಅಂತ ಮುಗ್ಧವಾಗಿ ಅವರ ಬಳಿಯೇ ಕತೆ ಹೇಳಿ.
23. 'ನಿಮ್ಮನೆಗೆ ಅಷ್ಟೆಲ್ಲಾ ನೆಂಟರು ಬರೋದೇ ಇಲ್ವಲ್ಲ, ಅದಕ್ಕೇನು ಮಾಡ್ಬೇಕು ನಮಗೂ ಹೇಳಿಕೊಡ್ರೀ'
ಅಂತ ಅವರನ್ನೇ ಕೇಳಿ.
24. ನೀರಿನ ಕೆಲಸಗಳನ್ನೆಲ್ಲ ಮೊದಲೇ ಮುಗಿಸಿಕೊಂಡು ವಾಟರ್ ಟ್ಯಾಂಕಿನ ಗೇಟ್‌ವಾಲ್ ಬಂದ್ ಮಾಡಿಬಿಡಿ. ಟಾಯ್ಲೆಟ್‌ಗೆ ಹೋಗಲೂ ನೀರಿರಬಾರದು.
25. ತುಂಬಾ ತಾಕತ್ತಿದ್ದರೆ 'ಪದೇ ಪದೇ ಬರಬೇಡಿ' ಅಂತ ನೇರವಾಗಿ ಹೇಳಿ. ನೆನಪಿಡಿ, ಹೀಗೆ ಹೇಳಿಸಿಕೊಂಡ ಉದಾಹರಣೆ ನೆಂಟರ ಇತಿಹಾಸದಲ್ಲೇ ಇಲ್ಲ.
ತಮಾಷೆ ಸಾಕು!
ಸೀರಿಯಸ್ಸಾಗಿ ದೂರ ಇಡೋದಾದ್ರೆ...
ನೆಂಟರಲ್ಲಿ ಎರಡು ವಿಧ. ನಿರುಪದ್ರವಿ ನೆಂಟರು ಮತ್ತು ಅಪಾಯಕಾರಿ ನೆಂಟರು. ನಿರುಪದ್ರವಿಗಳು ಪದೇ ಪದೇ ಮನೆಗೆ ಬರಬಹುದು, ಆದರೆ ಅವರಿಂದ ಕಿರಿಕಿರಿ ಬಿಟ್ಟರೆ ಬೇರೆ ತೊಂದರೆಯಿಲ್ಲ. ಅಪಾಯಕಾರಿ ನೆಂಟರು ಹಾಗಲ್ಲ. ಅವರು ನಿಮ್ಮ ಬಗ್ಗೆ ಕೆಟ್ಟ ಕೆಟ್ಟ ಗಾಸಿಪ್ ಹರಡುತ್ತಾರೆ. ವಿನಾಕಾರಣ ತೊಂದರೆ ಕೊಡುತ್ತಾರೆ. ಮೇಲೆ ಚೆನ್ನಾಗಿ ಮಾತನಾಡಿ ಒಳಗೊಳಗೇ 'ಫಿಟ್ಟಿಂಗ್' ಇಡುತ್ತಾರೆ. ನೀವು ಅವರನ್ನು ಅವಾಯ್ಡ್ ಮಾಡುತ್ತಿದ್ದರೂ ಅದನ್ನು ಕಡೆಗಣಿಸಿ ತಮ್ಮ ಕೆಲಸ ಮುಂದುವರಿಸುತ್ತಾರೆ. ಅಂಥವರಿಂದ ದೂರವಾಗಲೇಬೇಕು, ಬೇರೆ ವಿಧಿಯಿಲ್ಲ. ಹೇಗೆ ದೂರವಾಗುವುದು? ಕೆಲ ಗಂಭೀರ ಸಲಹೆಗಳು ಇಲ್ಲಿವೆ.
ಮಿತಿ ಹಾಕಿಕೊಳ್ಳಿ
ಅಪಾಯಕಾರಿ ನೆಂಟರು ಯಾವಾಗ ಬೇಕಾದರೂ ನಿಮ್ಮ ಮನೆಗೆ ಬರುವ ಹಕ್ಕು ತಮಗಿದೆಯೆಂದು ಭಾವಿಸಿರುತ್ತಾರೆ. ಅವರು ಯಾವಾಗ ನಿಮ್ಮ ಮನೆಗೆ ಬರಬೇಕು ಅಥವಾ ನೀವು ನೆಂಟರನ್ನು ಬರಮಾಡಿಕೊಳ್ಳುವುದು ಯಾವಾಗ ಎಂದು ನಿಮಗೆ ನೀವೇ ಮಿತಿ ಹಾಕಿಕೊಳ್ಳುವುದರಿಂದ ಬೇರೆ ಕೆಲಸಗಳು ಕ್ರಮಬದ್ಧವಾಗಿ ನಡೆಯುತ್ತವೆ. ಉದಾ: ತಿಂಗಳಿಗೊಮ್ಮೆ ಅಥವಾ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಮಾತ್ರ ನೆಂಟರನ್ನು ಮನೆಗೆ ಕರೆಯುತ್ತೇನೆ ಎಂದು ನಿರ್ಧರಿಸುವುದು. ಆಗ ಯಾವಾಗ ನಿಮಗೆ ನೆಂಟರು ಬರುವುದು ಬೇಡವೋ ಆಗ ಅವರನ್ನು ನಿಮಗೇ ತಿಳಿಯದಂತೆ ದೂರವಿರಿಸುತ್ತೀರಿ.
ನೆಪ ಹೇಳಿ
ಅಪಾಯಕಾರಿ ನೆಂಟರು ಇರುವ ಸಮಾರಂಭಗಳಲ್ಲಿ ನೀವು ಭಾಗವಹಿಸಬೇಕಾಗಿ ಬಂದರೆ ಅಲ್ಲಿಗೆ ಹೋಗದಿರಲು ನೆಪ ಹುಡುಕಿ. ಆಫೀಸ್ ಕೆಲಸ, ಡಾಕ್ಟರ್ ಅಪಾಯಿಂಟ್‌ಮೆಂಟ್, ಕಾರು ಸರ್ವೀಸ್.. ಏನಾದರೂ ನೆಪ ಸಿಗುತ್ತದೆ. ನಿಮ್ಮ ಬಗ್ಗೆ ಕತ್ತಿ ಮಸೆಯುವ ನೆಂಟರಿಂದ ನೀವು ದೂರವಿದ್ದಷ್ಟೂ ಒಳ್ಳೆಯದು. ಅವರ ಸಂಪರ್ಕಕ್ಕೆ ಹೆಚ್ಚೆಚ್ಚು ಬಂದರೆ ನಿಮ್ಮ ಬಗ್ಗೆ ಹೆಚ್ಚೆಚ್ಚು ಯೋಚಿಸಲು ಅವರಿಗೆ ಕಾರಣ ಸಿಕ್ಕಂತಾಗುತ್ತದೆ.
ದೂರ ಹೋಗಿಬಿಡಿ
ನಿಮ್ಮ ಮನೆಯಲ್ಲೇ ಆಗಿರಲಿ ಅಥವಾ ಬೇರೆಯವರ ಮನೆಯಲ್ಲೇ ಆಗಿರಲಿ, ವಿಷ ಕಾರುವ ನೆಂಟರ ಜೊತೆ ಸಂಪರ್ಕ ಬೆಳೆಸುವ ಸಂದರ್ಭ ಬಂದರೆ ಬೇರೇನನ್ನೂ ಲೆಕ್ಕ ಹಾಕಲು ಹೋಗದೆ ಸುಮ್ಮನೆ ದೂರವಿದ್ದುಬಿಡಿ. ನೀವು ಉದ್ದೇಶಪೂರ್ವಕವಾಗಿ ಅವರಿಂದ ದೂರಹೋಗುತ್ತಿದ್ದೀರಿ ಎಂದು ಅವರಿಗೆ ತಿಳಿದರೂ ಪರವಾಗಿಲ್ಲ. ಇದರಿಂದ ಅವರೊಂದಿಗೆ ನಡೆಸಬೇಕಾದ ಅನಿವಾರ್ಯ 'ಡ್ರಾಮಾ'ಗಳನ್ನು ತಪ್ಪಿಸಬಹುದು.
ಕಾರಣ ಪತ್ತೆಹಚ್ಚಿ
ನಿಮಗೂ ನಿಮ್ಮ ನೆಂಟರಿಗೂ ಏಕೆ ಸರಿಹೊಂದುವುದಿಲ್ಲ ಎಂಬುದನ್ನು ಸ್ವಲ್ಪ ಆಳಕ್ಕಿಳಿದು ನೋಡಿ. ನಿಮ್ಮಲ್ಲೇ ತಪ್ಪಿದ್ದರೂ ಇರಬಹುದು. ಅವರಲ್ಲಿ ತಪ್ಪಿದ್ದರೂ, ಅದನ್ನು ಸರಿಪಡಿಸಲು ನಿಮಗೆ ಯಾವುದಾದರೂ ದಾರಿ ಹೊಳೆಯಬಹುದು. ಅಥವಾ ನಿಮ್ಮ ಅವರ ನಡುವಿನ ಶೀತಲ ಸಮರಕ್ಕೆ ಏನು ಕಾರಣವೋ ಅದರಲ್ಲೇ ಪರಿಹಾರವೂ ಇರಬಹುದು.
ಊರು ಬಿಡುವ ಧೈರ್ಯ ಇದೆಯಾ?
ಬಗೆಹರಿಸಲಾಗದಷ್ಟು ಅಥವಾ ದೂರವಿಡಲೂ ಸಾಧ್ಯವಿಲ್ಲದಷ್ಟು ಅಪಾಯಕಾರಿ ನೆಂಟರು ನೀವಿರುವ ಸಿಟಿಯಲ್ಲೇ ಇದ್ದಾರಾದರೆ ಆ ಊರನ್ನೇ ಬದಲಿಸುವ ಬಗ್ಗೆ ನೀವು ಯೋಚನೆ ಮಾಡಬಹುದು. ಆಗ ಬೇರೆ ಕೆಲಸ ಹುಡುಕಬೇಕಾಗುತ್ತದೆ. ಅಥವಾ ಈಗಿನ ಕೆಲಸದಲ್ಲೇ ಟ್ರಾನ್ಸ್‌ಫರ್ ಕೇಳಬೇಕಾಗುತ್ತದೆ. ಬೇರೆ ರೀತಿಯ ಕೆಲಸ ಹುಡುಕುವುದನ್ನು ನೀವು ಊರು ಬಿಡುವುದಕ್ಕೆ ನೆಪವಾಗಿಯೂ ಹೇಳಬಹುದು. ಆದರಿದು ಕೊನೆಯ ಆಯ್ಕೆಯಾಗಬೇಕು.
ನೆನಪಿಡಿ... ಅವರು ಆಪದ್ಬಾಂಧವರೂ ಹೌದು
ನೆಂಟರೆಂದರೆ ಕಿರಿಕಿರಿ ಎಂಬ ಒಂದೇ ಆ್ಯಂಗಲ್‌ನಿಂದ ಯೋಚಿಸುವುದನ್ನು ಬಿಟ್ಟು ಅವರಿಂದ ಲಾಭವೇನಾದರೂ ಇದೆಯೇ ಎಂದು ಒಮ್ಮೆ ಯೋಚಿಸಿನೋಡಿ. ನಿಜ, ಪದೇಪದೇ ಹೊತ್ತಲ್ಲದ ಹೊತ್ತಿನಲ್ಲಿ ಎಂಟ್ರಿ ಕೊಡುವ ನೆಂಟರು ಸುಧನ್ವಾರ್ಜುನ ಯಕ್ಷಗಾನದಲ್ಲಿ ಹನುಮಂತ ತನ್ನ ಪಾತ್ರವಿಲ್ಲದಿದ್ದರೂ ದಿಢೀರ್ ಪ್ರವೇಶ ಮಾಡಿದಂತೆ! ಅವರು ಅಪ್ಪಟ ಅಯಾಚಿತರು. ಆದರೆ, ಅವರೇ ಬಹಳ ಸಲ ಪ್ರಯೋಜನಕ್ಕೂ ಬರುತ್ತಾರೆಂಬು ದನ್ನು ಮರೆಯಬಾರದು. ಮನೆಯ ಹತ್ತಿರದಲ್ಲೇ ನೆಂಟರಿದ್ದರೆ ನಮ್ಮ ಕಷ್ಟಕ್ಕೆ ಅವರೂ, ಅವರ ಕಷ್ಟಕ್ಕೆ ನಾವೂ ಆಗಬಹುದು. ಚಿಕ್ಕ ಮಕ್ಕಳನ್ನು ಬಿಟ್ಟುಹೋಗಲು, ಎಲ್ಲಿಗಾದರೂ ಜೊತೆಗೆ ಕರೆದುಕೊಂಡು ಹೋಗಲು, ಪ್ರವಾಸಕ್ಕೆ ಹೋದಾಗ ಮನೆಯ ಮೇಲೆ ಒಂದು ಕಣ್ಣಿಡಲು, ಮನೆಯಲ್ಲೇನಾದರೂ ವಿಶೇಷವಿದ್ದು ಬಹಳ ಜನರನ್ನು ಕರೆದಿದ್ದರೆ ಹೆಲ್ಪ್ ಮಾಡಲು, ಅರ್ಜೆಂಟಿಗೆ ಹಣ ಬೇಕಿದ್ದರೆ, ಬೈಕೋ ಕಾರೋ ಬೇಕಿದ್ದರೆ... ಹೀಗೆ ಬಹಳ ಉಪಯೋಗವಿದೆ. ರಾತ್ರಿ ತಡವಾಗಿ ಮನೆಗೆ ಬಂದಿದ್ದೀರಿ, ಕೀ ಎಲ್ಲೋ ಕಳೆದುಹೋಗಿದೆ. ಏನು ಮಾಡುತ್ತೀರಿ? ಹತ್ತಿರದಲ್ಲೊಂದು ನೆಂಟರ ಮನೆಯಿದ್ದರೆ ಹೋಗಿ ಮಲಗಬಹುದಲ್ಲವೇ?
ಪ್ರತ್ಯಕ್ಷ ಪ್ರಯೋಜನದ ಮಾತು ಹಾಗಿರಲಿ. ಭಾವನಾತ್ಮಕವಾಗಿಯೂ ಸಂಬಂಧಿಗಳು ಬೇಕಾಗುತ್ತಾರೆ. ಏಕತಾನದ ಬದುಕು ಬಹಳ ದಿನ ನಡೆಯುವುದಿಲ್ಲ. ಕೊನೆಕೊನೆಗೆ ಬೋರು ಹೊಡೆಸುತ್ತದೆ. ಮೈತುಂಬಾ ಕೆಲಸವಿದ್ದರೆ ಇವ್ಯಾವುವೂ ಬೇಕಿಲ್ಲ ಎಂಬುದು ಸರಿ. ಆದರೆ, ಮಾಡಲೇನೂ ಕೆಲಸವಿಲ್ಲದ ಸ್ಥಿತಿಯೂ ಬರುತ್ತದೆ. ಆಗ ಕನಿಷ್ಠ ಪಕ್ಷ ನಾಲ್ಕು ಮಾತನಾಡಲಾದರೂ ಬಂದುಹೋಗುವ ನೆಂಟರಿದ್ದರೆ ಎಷ್ಟೋ ನೆಮ್ಮದಿ.
ವಿಶೇಷ ಸೂಚನೆ: ನೆಂಟರು ಎಲ್ಲಾ ಸಮಯದಲ್ಲಿ ಅತ್ಯಂತ ಅನಿವಾರ್ಯ ಎಂಬುದು ನಿಜವಾದರೂ ಕೆಲವೊಮ್ಮೆ 'ಗಂಟುಕಳ್ಳರಂತ' ನೆಂಟರನ್ನು ಉದ್ದೇಶಿಸಿದ ತಮಾಷೆಯ ಬರಹವಿದು. ಇಲ್ಲಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದರೆ ಅದು ಲೇಖಕಿಯ ತಪ್ಪಲ್ಲ. ಮಾನವ ಸಂಬಂಧಗಳು ಅಳಿದು ಹೋಗುತ್ತಿರುವ ಈ ಹೊತ್ತಲ್ಲಿ ನೆಂಟರು ಒಳ್ಳೆಯ ಕಾಲದಲ್ಲೂ ಕೆಟ್ಟಕಾಲದಲ್ಲೂ ಇರಲಿ!
-ಡ್ರಾ'ಕುಲ'
sakhipakshik@gmail.com
ವ್ಯಂಗ್ಯಚಿತ್ರ: ನವೀನ್
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


