ವಿಶೇಷ

ಅಂಜಲಿ ಇರುವಾಗ ನಾನೇಕೆ ಅಂಜಲಿ ಅಂತಾರೆ ಸಚಿನ್

ಅಮ್ಮನನ್ನು ರಿಸೀವ್ ಮಾಡಲು ಏರ್‌ಪೋರ್ಟ್‌ಗೆ ಹೊರಟಾಗ ಆ ದಿನದ ಭವಿಷ್ಯದ ಕಾಲಂನಲ್ಲಿ ಆಕೆಯ ರಾಶಿಗೆ ಅಪರೂಪದ ....

ಅಂಜಲಿ ಇರುವಾಗ ನಾನೇಕೆ ಅಂಜಲಿ ಅಂತಾರೆ ಸಚಿನ್
ಅಂಜಲಿ ತೆಂಡೂಲ್ಕರ್_ಸಚಿನ್ ತೆಂಡೂಲ್ಕರ್
Published On :

ಅಮ್ಮನನ್ನು ರಿಸೀವ್ ಮಾಡಲು ಏರ್‌ಪೋರ್ಟ್‌ಗೆ ಹೊರಟಾಗ ಆ ದಿನದ ಭವಿಷ್ಯದ ಕಾಲಂನಲ್ಲಿ ಆಕೆಯ ರಾಶಿಗೆ ಅಪರೂಪದ ವ್ಯಕ್ತಿಯೊಂದಿಗೆ ಅನಿರೀಕ್ಷಿತ ಭೇಟಿ, ಜೀವನವಕ್ಕೊಂದು ತಿರುವು ಎಂದಿತ್ತೇನೋ, ಅವಳು ನೋಡಿಲ್ಲ. ವಿಮಾನವಿಳಿದು ಬಂದ ಆತನ ರಾಳಿಗೆ ಹಿರಿಯ ಮಹಿಳೆಯ ಭೇಟಿಯಿಂದ ಮನೋಲ್ಲಾಸ ಎಂದಿತ್ತೇನೋ, ಅವನೂ ನೋಡಿಲ್ಲ.

ವಿಮಾನ ನಿಲ್ದಾಣದಲ್ಲಿ ಎದುರಿಗೆ ಬಂದ ಗುಂಗುರುಕೂದಲ ಹಿಡುಗ ಕ್ಯೂಟ್ ಎನಿಸಿದ್ದನೇ ಹೊರತು, ಅವನೇ ಬ್ಯಾಟ್ ಹಿಡಿದು ಎದುರಾಳಿಗಳನ್ನು ಚೆಂಡಾಡಿ ಸೋಲಿಸಿ, ಆಗ ತಾನೇ ನ್ಯೂಸ್‌ಪೇಪರ್‌ಗಳ ಕೊನೆಯ ಸ್ಪೋರ್ಟ್ಸ್  ಪೇಜ್‌ನಿಂದ ಮೊದಲ ಪುಟಕ್ಕೆ ಜಿಗಿದು ಕುಳಿತುಕೊಳ್ಳತೊಡಗಿದ್ದ "ಪ್ರಚಂಡ ಕುಳ್ಳ" ಎಂದು ಅವಳಿಗೆ ಗೊತ್ತಿರಲಿಲ್ಲ. ಎಂಬಿಬಿಎಸ್ ಓದಿಕೊಂಡು ಮಕ್ಕಳ ತಜ್ಞೆ ಆಗಬೇಕೆಂದು ಕೊಂಡವಳಿಗೆ ಕ್ರಿಕೆಟ್‌ನ ತಲೆಬುಡ ತಿಳಿದುಕೊಂಡು ಆಗಬೇಕಾದುದಾದರೂ ಏನು?

ಆದರೆ ಆಕೆಯ ಗೆಳತಿ, ಇವನೇ ಸಚಿನ್ ಎನ್ನುತ್ತಿದ್ದಂತೆ ಅದೇನಾಯಿತೋ, ಅವನಿಗಿಂತ 6 ವರ್ಷಕ್ಕೆ ದೊಡ್ಡವಳಾದ ಅಂಜಲಿ "ಸಚಿನ್ ಸಚಿನ್ "ಎಂದು ಕೂಗಿಕೊಂಡು ಅಮ್ಮನನ್ನೂ ಮರೆತು ಅವನತ್ತ ಓಡಿದ್ದಳು. 17 ವರ್ಷದ ಸಚಿನ್ ನಾಚಿಕೆಯಿಂದ ತಲೆಯನ್ನೂ ಎತ್ತದೆ ಮುನ್ನಡೆದುಬಿಟ್ಟಿದ್ದ. ಆದರೆ ಅಂಜಿಲ ಅಷ್ಟಕ್ಕೇ ಬಿಡಲಿಲ್ಲ. ಗೆಳೆಯರಿಂದ ಆತನ ಮನೆಯ ಫೋನ್ ನಂಬರ್ ತೆಗೆದುಕೊಂಡು ಮನೆಗೆ ಹೋದವಳು ಮರುದಿನ ಫೋನ್ ಡಯಲ್ ತಿರುಗಿಸಿದಳು. ಆ ಕಡೆಯಿಂದ ಸಚಿನ್, ನಿನ್ನೆ ಏರ್‌ಪೋರ್ಟ್‌ನಲ್ಲಿ ಆರೆಂಜ್ ಕಲರ್ ಶರ್ಟ್ ಧರಸಿದ ಹುಡುಗಿ ತಾನೇ  ಎನ್ನುತ್ತಿದ್ದರೆ ಎರಡು ಮನಸುಗಳ ಬದುಕಿನ ಪುಸ್ತಕದ ಮುನ್ನುಡಿ ತನ್ನಷ್ಟಕ್ಕೇ ತಾನೇ ಮುಗುಳ್ನಗುತ್ತಾ ಬರೆದುಕೊಳ್ಳುತ್ತಿತ್ತು. ಇದೆಲ್ಲ 1990ರ ಕತೆ. ಅಲ್ಲಿಂದೀಚೆಗೆ ಸಚಿನ್‌ನ ವೃತ್ತಿ ಜೀವನವನ್ನು ಸುಗಮಗೊಳಿಸಲು ಅಂಜಲಿ ತನ್ನ ಸ್ವಂತ ಜೀವನವನ್ನು ಬೇಸರವಿಲ್ಲದೆ ತೇಯುತ್ತಾ ಬಂದಿದ್ದಾಳೆ.

ಸೆಲೆಬ್ರಿಟಿಯೊಬ್ಬನ ಪತ್ನಿಯಾಗುವುದೆಂದರೆ ಅದೃಷ್ಟವೆಂದುಕೊಳ್ಳುತ್ತೇವೆ. ಆದರೆ ಸಮರ್ಥ ಪತ್ನಿಯಾಗಲು ಅವಳೆಷ್ಟೊಂದನ್ನು ಕಳೆದುಕೊಳ್ಳಬೇಕಾಗುತ್ತದೆ? ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತು ಸುಳ್ಳಾಗದಂತೆ ನೋಡಿಕೊಳ್ಳುವಲ್ಲಿ ಅಂಜಲಿ ಬಲು ಎಚ್ಚರ ವಹಿಸಿದ್ದಾಳೆ. ಸಚಿನ್ ಕ್ರಿಕೆಟ್ ದೇವರಾಗಬೇಕೆಂದು ದೇವರಲ್ಲಿ ಪ್ರಾರ್ಥಿಸಿ, ಎಂಟೂವರೆ ವರ್ಷಗಳ ಕಾಲ ಹಗಲೂ ರಾತ್ರಿಯೆನ್ನದೆ, ಓದಿ ಗಳಿಸಿದ್ದ ಮಕ್ಕಳ ತಜ್ಞೆ ಕೆಲಸಕ್ಕೆ ವಿದಾಯ ಹೇಳುವುದೆಂದರೆ ಅಂಜಲಿಯ ತ್ಯಾಗ ಸುಮ್ಮನೆ ಅಲ್ಲ. ಮನೆ, ಮಕ್ಕಳು, ಖರ್ಚುವೆಚ್ಚ ಇನ್ನಿತರೆ ಯಾವುದೇ ಟೆನ್ಶನ್‌ಗಳು ಸಚಿನ್‌ನ್ನು ಬಾಧಿಸದಂತೆ, ಎಲ್ಲವನ್ನೂ ತನ್ನ ಹೆಗಲಿಗೆ ಹೊತ್ತು ನೊಗವೆಳೆಯುವುದೂ ಸುಲಭದ ಮಾತಲ್ಲ.

ಸದಾ ಕಾಲ ದೇಶ ವಿದೇಶ ಸುತ್ತಿಕೊಂಡಿರುವ  ಪತಿಯ ಕೆಲಸವನ್ನು ಒಪ್ಪಿಕೊಂಡು, ಮಕ್ಕಳಿಗೆ ಅಪ್ಪನ ಗೈರು ಕಾಡದಂತೆ ನೋಡಿಕೊಳ್ಳಲು ಪ್ರತಿ ಕ್ಷಣ ಒದ್ದಾಡಿದ್ದಾಳೆ. ಪತಿಯೊಂದಿಗೆ ಒಂದು ವಾಕಿಂಗ್ ಹೋಗಬೇಕು, ಫಿಲ್ಮ್ ನೋಡಲು ಹೋಗಬೇಕೆನಿಸಿದಾಗಲೆಲ್ಲ ಆತನ ಪ್ರಸಿದ್ಧಿ ಹೊರಗೆ ಹೋಗಲು ನೀಡದ ಸ್ವಾತಂತ್ರ್ಯ ವನ್ನು , ತನ್ನ ತುಮುಲಗಳನ್ನು ಹೇಳಿಕೊಳ್ಳಬೇಕೆನಿಸಿದಾಗ ಪಕ್ಕದಲ್ಲಿಲ್ಲದ ಗಂಡನ ಅನುಪಸ್ಥಿತಿಯನ್ನು ನಗುನಗುತ್ತಲೇ ಒಪ್ಪಿಕೊಂಡಿದ್ದಾಳೆ.

ನನಗೆ ಸಚಿನ್ ಬಿಟ್ಟರೆ ಇನ್ಯಾರೂ ಗೊತ್ತಿಲ್ಲ. ಅದಕ್ಕಾಗಿಯೇ ಅವನ ಎಲ್ಲ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡು ನೋಡಿಕೊಳ್ಳುವುದು ನನಗೆ ಕಷ್ಟವೆನಿಸುವುದಿಲ್ಲ ಎನ್ನುತ್ತಾಳೆ ಅಂಜಲಿ.

ಅಂಜಲಿಯ ಜಾಗದಲ್ಲಿ ಇನ್ಯಾರೇ ಇದ್ದಿದ್ದರೂ, ಆತನ ಮ್ಯಾಚ್ ಇರುವಲ್ಲೆಲ್ಲ ಜೊತೆಗೆ ಹೋಗಿ, ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬೀಳುವಂತೆ ನೋಡಿಕೊಂಡು ಎಲ್ಲೆಡೆಯೂ ಹಾಲಿಡೇ ಸಂಭ್ರಮ ಆಚರಿಸಿ ಮೆರೆಯಬಹುದಿತ್ತು. ಆದರೆ ಅಂಜಲಿ ಹಾಗಲ್ಲ , ಅವಳು ಮಾಧ್ಯಮಗಳಿಗೆ ಇಂಟರ್‌ವ್ಯೂ ನೀಡಿದ್ದೇ ಇಲ್ಲ. ಸಚಿನ್ ಆಟಗಳನ್ನು ಕೂಡಾ ಲೈವ್‌ನಲ್ಲಿ ನೋಡೋದಿಲ್ಲ.  ಕಾರಣ, ಆತ ಡಿಸ್ಟ್ರ್ಯಾಕ್ಟ್ ಆಗಿಬಿಡಬಹುದೆಂದು. ಮದುವೆಯಾದ ನಂತರ ಈ 19 ವರ್ಷಗಳಲ್ಲಿ ಎರಡು ಬಾರಿ ಹೊರತು ಪಡಿಸಿದರೆ, ಅವಳು ಸಚಿನ್ ಕ್ರಿಕೆಟ್ ಮ್ಯಾಚುಗಳನ್ನು ರೆಕಾರ್ಡ್ ಮಾಡಿಕೊಂಡೇ ನೋಡಿರುವುದು. ಆ ಎರಡು ಬಾರಿಯೂ ತನ್ನ ಇರುವನ್ನು ಸಚಿನ್‌ನಿಂದ ಗುಟ್ಟಾಗಿಯೇ ಇಟ್ಟು, ಆತನಿಗೆ ಸರ್ಪ್ರೈಸ್ ಕೊಡುವುದು ಅವಳ ಉದ್ದೇಶವಾಗಿತ್ತು.

ಸಚಿನ್ ಮ್ಯಾಚು ನೋಡಲು ಹೋಗದಿದ್ದರೂ, ನಡೆಯುತ್ತಿರುವಷ್ಟು ಹೊತ್ತು ಅವಳ ಜೀವನ ನಿಂತಲ್ಲೇ ನಿಂತಿರುತ್ತದೆ. ಆ ಸಮಯದಲ್ಲಿ ಅವಳಿಗದೇನೇ ಕೆಲಸವಿರಲಿ, ಎಲ್ಲಬಿಟ್ಟು ಮನೆಯಲ್ಲಿ ಎಕ್ಸೈಟ್‌ಮೆಂಟ್‌ನಲ್ಲಿ ಕೂರುತ್ತಾಳೆ. ಮೊಬೈಲ್‌ನ ಕುಯ್ಯ, ಕುಸ್ಸಗಳೆಡೆಗೆ ತಿರುಗಿಯೂ ನೋಡುವುದಿಲ್ಲ. ತಿಂಡಿತೀರ್ಥ ಸೇವನೆ? ಊಹೂಂ, ಇಲ್ಲವೇ ಇಲ್ಲ. ವಾಶ್‌ರೂಂಗೆ ಕೂಡಾ ಹೋಗುವುದಿಲ್ಲ! ಟೆನ್ಶನ್ ಜಾಸ್ತಿ ಆದರೆ ತನ್ನ ಮನೆಯ ಹಾಲ್‌ನಲ್ಲಿ ಗಣಪತಿಯೂ, ಟಿವಿಯೂ ಕಾಣುವ ಜಾಗದಲ್ಲಿ ನಿಂತು ಪ್ರಾರ್ಥಿಸುತ್ತಾ ಮ್ಯಾಚ್ ವೀಕ್ಷಿಸುತ್ತಾಳೆ.

ಸಚಿನ್ ನಮ್ಮೆಲ್ಲರವನಾಗಲು, ಅಂಜಲಿ ತನ್ನೆಲ್ಲವನ್ನೂ ಬಿಟ್ಟುಕೊಟ್ಟಿದ್ದಾಳೆ. ವಾಮನನಾಗಿ ಬೆಳೆದ ಸಚಿನ್ ನೆರಳಲ್ಲಿ ಯಾರ ಕಣ್ಣಿಗೂ ಕಾಣದಂತೆ , ತ್ಯಾಗ , ಶ್ರಮದಿಂದ 'ಸೂಪರ್ ವೈಫ್‌' ಆಗಿ ನಿಂತ ಅಂಜಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಳೆ.

-ರೇಶ್ಮಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.