ವಿಶೇಷ

ಮುಗುಳು ಬಿರಿಯುವ ಸದ್ದು...

ಯಾವ ಕಾಮುಕನ ಕಣ್ಣಿಗೂ ನನ್ನ ಮಗು ಬೀಳದೇ ಇರೋ ಹಾಗೆ ಮಾಡಮ್ಮಾ'ಎಂದು ಮಗಳ ಪರವಾಗಿ ತಾನೇ ಬೇಡಿದಳು...

ಮುಗುಳು ಬಿರಿಯುವ ಸದ್ದು...
Published On :

ಬೆಳಗಾಗುತ್ತಿದೆ. ಕತ್ತಲಾಗುವ ಮುನ್ನ ಮನೆಗೆ ತಲುಪಿಸು ದೇವರೇ ಅಂತನ್ನುವ ಪ್ರಾರ್ಥನೆಗಳು ಈಗಿನಿಂದಲೇ. ಈ ಭರತಭೂಮಿ ಪುಟ್ಟ ಹೆಣ್ಣುಮಕ್ಕಳಿಗೆ ನರಕವಾಗಿ ಹೋಯಿತೆ ಅನ್ನಿಸುವ ಹೊತ್ತಿನಲ್ಲೇ ಒಂದಿಷ್ಟು ಬೆಳಕು.

ಕಣ್ಣಲ್ಲಿ ನಿದ್ದೆಗಿನ್ನೂ ಜೀವವಿದೆ. ಆ ರೆಪ್ಪೆಗಳನ್ನು ಹೇಗಪ್ಪಾ ಪೂರ್ತಿ ಎಬ್ಬಿಸಲಿ? ಈಗಷ್ಟೇ ಎದ್ದ ಪುಟ್ಟಿ ದೇವರಗೂಡಿನೆದುರು ತಲೆದೂಗುತ್ತಾ ನಿಂತಳು. ಮಂಪರಲ್ಲೇ ಇದ್ದುಬಿಟ್ಟರೆ ದೇವರು ವರ ಕೊಡನು ಅಂತ ಪಪ್ಪ ಹೇಳಿದ್ದು ನೆನಪಾಗಿ ಕಣ್ತೆರೆದಳು. 'ಆ ದೇವ್ರು ಮಾತ್ರ ಯಾವಾಗ್ಲೂ ಕಣ್ಮುಚ್ಚೋದಾ? ಇರಲಿ, ಪಪ್ಪನಿಗೆ ಇವತ್ ಕೇಳೇಬಿಡ್ತೀನಿ' ಅಂತ ಸರಸ್ವತಿಯ ಫೋಟೋ ನೋಡಿ ತನ್ನೊಳಗೆದ್ದ ಪ್ರಶ್ನೆಯನ್ನು ದೇವರಿಗೆ ಕಾಣದಂತೆ ಬಚ್ಚಿಟ್ಟುಕೊಂಡಳು. ಮೊದಲ ಪ್ರಾರ್ಥನೆ ಗಣಪತಿಗೆ ಸಂದಾಯ-'ಟೀಚರ್ ಎದ್ದು ನಿಲ್ಸ್‌ದಾಗ ಮ್ಯಾತ್ಸಿನ ಎಲ್ಲ ಫಾರ್ಮೂಲಗಳೂ ಛಕ್ಕನೆ ಹೊಳೆವಂತೆ ಮಾಡಪ್ಪಾ'. ಎರಡನೆಯದ್ದು ಸರಸ್ವತಿಗೆ, 'ಎಷ್ಟಂದ್ರೂ ನೀನು ಹೆಣ್ಣು ನಾನು ಹೆಣ್ಣು. ಮುಂದಿನ ಸೆಮಿಸ್ಟರ್‌ನಲ್ಲಿ ರಾಹುಲ್‌ಗಿಂತ ಹೆಚ್ಚು ಮಾರ್ಕ್ಸ್ ಬಂದು ಫಸ್ಟ್ ಬರೋಹಾಗೆ ಮಾಡ್ಬೇಕು' ಎಂದು ಪ್ರಾರ್ಥನೆಯನ್ನೂ ತಾಕೀತೆಂಬಂತೆ ರವಾನಿಸಿದರುಳು. ಅವಳ ಮೂರನೇ ದೃಷ್ಟಿ ಬಿದ್ದಿದ್ದು ಚಾಮುಂಡಿಯ ಫೋಟೋ ಮೇಲೆ. ಈ ಫೋಟೋ ಎಲ್ಲಿಂದ ಬಂತು? ಇಷ್ಟು ದಿನ ಇಲ್ಲದ ಫೋಟೋ. ಇವಳ ಬಳಿ ನಾ ಯಾವ ವರ ಕೇಳಲಿ? ಪುಟ್ಟಿಗೆ ಗೊತ್ತಾಗಲಿಲ್ಲ.

ಹೋಗಿ ಮಮ್ಮಿಗೆ ಕೇಳಿದಳು. 'ಸಿಂಹದ ಮೇಲೆ ಕೂತ ಆ ದೇವರು ಹೊಸ ಫೋಟೋಗೆ ನಾನೇನು ವರ ಕೇಳಲಿ?'. ತಾಯಿಗೆ ಮಾತು ಹೊರಡಲಿಲ್ಲ. 'ಯಾವ ಕಾಮುಕನ ಕಣ್ಣಿಗೂ ನನ್ನ ಮಗು ಬೀಳದೇ ಇರೋ ಹಾಗೆ ಮಾಡಮ್ಮಾ'
ಎಂದು ಮಗಳ ಪರವಾಗಿ ತಾನೇ ಬೇಡಿದಳು! ಆ ಫೋಟೋವನ್ನು ಅಪ್ಪನೇ ಮಗಳಿಗಾಗಿ ಹಿಂದಿನ ದಿನ ಇಟ್ಟಿದ್ದ.

ದಿನಾ ಕುಕ್ಕೀಸ್, ಫೈವ್‌ಸ್ಟಾರ್ ತಂದುಕೊಡುತ್ತಿದ್ದ ಅಪ್ಪ 'ಇವತ್ತೇನೋ ಸ್ಪೆಷಲ್ ತಂದಿದ್ದೀನಿ' ಅಂದ. ಸೈಜ್ ಸ್ವಲ್ಪ ದೊಡ್ಡದಿದ್ದನ್ನು ನೋಡಿ ಪುಟ್ಟಿ 'ಬಹುಶಃ ಕೇಕ್ ಇರಬಹುದು' ಎಂದು ಕೊಂಡಳು. ಆದರೆ, ಪ್ಲಾಸ್ಟಿಕ್ ಕವರಿನಲ್ಲಿದ್ದ ಅದು ತುಸು ಉದ್ದ ಇತ್ತು. ಐದು ಸೆಕೆಂಡು ತಡವಾಗಿ, 'ಅದು ಅಲ್ಲ' ಎಂದು ಅವಳೇ ಸಪ್ಪೆ ಮೋರೆಯಲ್ಲಿ ಹೇಳಿದಳು. ಹಾಗಾದರೆ ಅಪ್ಪ ಏನು ತಂದಿರಬಹುದು? ಕುಕ್ಕೀಸ್, ಫೈವ್‌ಸ್ಟಾರ್ ನನಗೆ ಇಷ್ಟ ಅಂತ ಗೊತ್ತಿದ್ದರೂ ಬ್ಯ್ರಾಂಡ್ ಯಾಕೆ ಚೇಂಚ್ ಮಾಡಿದ? ಈ ಅಪ್ಪನಿಗೆ ಸರ್‌ಪ್ರೈಸ್ ಹ್ಯಾಗೆ ಕೊಡ್ಬೇಕು ಅಂತನೂ ಗಾತ್ತಾಗೋದಿಲ್ವಾ? ಕೇಳಬೇಕೆನಿಸಿದರೂ ಅಪ್ಪನಿಗೆ ಕೇಳಲಿಲ್ಲ.

ಅಪ್ಪ ನಿಧಾನಕ್ಕೆ ಕವರನ್ನು ತೆರೆದ. 'ಟೈಗರ್ ಬಿಸ್ಕತ್ತು' ಪುಟ್ಟಿಯ ಎದುರಿತ್ತು. ಮಗಳಲ್ಲಿ ಧೈರ್ಯ ಉಕ್ಕಬೇಕು. ಹುಲಿಯಷ್ಟು ಬಲಿಷ್ಠವಾದರೆ ಯಾವ ಕಾಮಪಿಶಾಚಿಯೂ ಅವಳ ಹತ್ತಿರ ಬರುವುದಿಲ್ಲಎಂಬುದು ಅಪ್ಪನ ಹುಂಬ ಭ್ರಮೆಯಲ್ಲ; ಪುಟ್ಟ ಆಶಾವಾದ!

ಶಾಲೆಗೆ ಹೊರಡುತ್ತಿದ್ದ ಪುಟ್ಟಿಯನ್ನು ಕಣ್ಣಲ್ಲೇ ಕರೆದ ಅಜ್ಜ. ಹಾಸಿಗೆಗೆ ಅಂಟಿದ ಬೆನ್ನನ್ನು ನೆಟ್ಟಗೆ ಮಾಡಲಿಕ್ಕೆ ಮೂವತ್ತು ಸೆಕೆಂಡು ಹಿಡಿದರೂ ಎಲ್ಲ ಆಯಾಸ ಮರೆತು ಎದ್ದುಕೂತ. ಪುಟ್ಟಿ ಬಂದಳು, 'ಏನ್ ತಾತಾ ಬರ್ತೀಯಾ ಸ್ಕೂಲ್‌ಗೆ?'. ಅಜ್ಜ ಮಾತಾಡಲಿಲ್ಲ. ಮಾತಾಡುವುದಕ್ಕೂ ಆಗುವುದಿಲ್ಲ. ಬಾಯಿಗೆ ಲಕ್ವ ಹೊಡೆದಿದೆ. ಅವಳ ತಲೆ ನೇವರಿಸಿದ ಅಷ್ಟೇ. ಒಣಗಿದ ಓರೆಕೋರೆ ತುಟಿಗಳಿಂದಲೇ ಅವಳ ತಲೆಗೆ ಮುತ್ತಿಕ್ಕಿದ. 'ತಾತಾ ಕೈಬಿಡು, ಬರ್ತೀನಿ ಟೈಮಾಯ್ತು' ಎಂದು ಕೈತಪ್ಪಿಸಿಕೊಂಡು ಓಡಿಹೋದಳು ಮೊಮ್ಮಗಳು. ಅಷ್ಟು ದೂರ ಓಡಿಹೋದ ಅವಳನ್ನು ಕಂಡು ತಾತಾ ವಿಧಿಗೆ ಒಳಗೊಳಗೆ ಶಾಪ ಹಾಕಿದ. ಯಾಕೆ ಶಾಪ ಹಾಕಿದ? ಅದಕ್ಕೂ ಕಾರಣವುಂಟು. ಅವನಿಗೆ ಬಾಯಿ ಬರಬೇಕಿತ್ತಂತೆ. ಬಾಯಿ ಬಂದಿದ್ದರೆ ಅಷ್ಟು ದೂರ ಓಡಿಹೋದ ಮಗಳಿಗೆ ಕೂಗಿ ಹೇಳುತ್ತಿದ್ದನಂತೆ, 'ಮೊಮ್ಮಗ್ಳೇ ಸ್ಕೂಲ್‌ಗೆ ಹೋಗೋದ್ ಹೋಗ್ತೀಯಾ... ನನ್ನ ದೊಣ್ಣೆ ತಗೊಂಡ್ ಹೋಗು' ಅಂತ. ಅಲ್ಲೆಲ್ಲೋ ಶಾಲಾ ಬಾಲಕಿ ಮೇಲಿನ ರೇಪ್ ಆಗಿದ್ದು ಅಜ್ಜನ ಕಿವುಡು ಕಿವಿಗೆ ನಿನ್ನೆ ತಾನೆ ಬಿದ್ದಿತ್ತು!

ಆ ಅಣ್ಣನಿಗೆ ಪುಟ್ಟಿಯೊಂದಿಗೆ ಆಡುವ ಹುಚ್ಚು. ದಿನವಿಡೀ ಷಟಲ್‌ಕಾಕು, ಕುಂಟಾಬಿಲ್ಲೆ ಅಂತ ಒಂಚೂರು ಬಿಸಿಲನ್ನು ಹಾಳುಮಾಡುವುದಿಲ್ಲ. ಸಂಚೆ ಮುಗಿದರೆ ಕೇರಂ, ಚೆಸ್ಸು, ಹಾವೇಣಿ, ಈ ರಜೆಯಲ್ಲಿ ಒಂದು ನಿಮಿಷನೂ ಹಾಳುಮಾಡಬಾರದು. ಆದರೆ, ಪುಟ್ಟಿಗೀಗ ಬೇಜಾರಾಗುತ್ತಿದೆ. ಅಣ್ಣ ಮೋಸ ಮಾಡುತ್ತಿದ್ದಾನೆ. ಪುಟ್ಟಿ ಸ್ಪೈಕರ್‌ಪಾನ್ ಹಿಡಿಯುವುದರೊಳಗೆ ಬಿಳಿ ಕಾಯಿನನ್ನು ಅಣ್ಣ ಎಗರಿಸುತ್ತಾನೆ ಚೆಸ್ಸಿನಲ್ಲಿ. ಹಾವೇಣಿಯಲ್ಲೂ ಅಂವ ಹಾವಿನ ಬಾಯಿಗೆ ಸಿಕ್ಕಿಬೀಳುವುದಿಲ್ಲ. ಯಾಕೆ ಈ ಥರ ಅವನು ಮೋಸ ಆಡುವುದು? ಅವನೊಳಗೆ ಇದೆ ಒಂದು ಉತ್ತರ. ಪುಟ್ಟಿಗೆ ಸಿಟ್ಟು ಬಂದರೆ ಹೊಡೆಯುತ್ತಾಳೆ. ಈತ ಪ್ರತಿಯೇಟು ಕೊಡುವುದಿಲ್ಲ. ಆಕೆ ಗೆಲ್ಲಬೇಕು. ಅವಳ ಕಣ್ಣಲ್ಲಿ ಹೋರಾಟ ಇಣುಕಬೇಕು. ಆ ಫಳ ಫಳ ಹೋರಾಟದ ಬೆಳಕು, ಕಾಮುಕನ ದೃಷ್ಟಿಯನ್ನು ಕುರುಡಾಗಿಸಬೇಕು. 'ನನ್ನ ತಂಗಿ ಆಟದಲ್ಲಿ ಗೆಲ್ಲುವುದಿಲ್ಲ, ಜೀವನದಲ್ಲಿ ಗೆಲ್ಲಬೇಕು'!

ಆ ಮನೆಯಲ್ಲಿ ಪುಟ್ಟಿಯೊಳಗೆ ಆತ್ಮವಿಶ್ವಾಸ ತುಂಬುವ, ಆಕೆಯನ್ನು ಬಲಿಷ್ಠಗೊಳಿಸುವ ಕೆಲಸಗಳು ಏನೇನೋ ಆಗುತ್ತಿವೆ. ಹ್ಯಾರಿ ಪಾಟರ್ ಪಾರ್ಟ್ ಟು ಅನ್ನು ಕೆಳಗಿಟ್ಟು ಅಪ್ಪ 'ಮೇರಿ ಕೊಂ' ಸಿನಿಮಾದ ಡಿವಿಡಿಯನ್ನು ಅವಳ ಕಣ್ಣಿಗೆ ಬೀಳುವಂತೆ ಇಟ್ಟಿದ್ದು ನಿನ್ನೆ ತಾನೆ. 'ಪ್ಲೀಸ್ ಸಾಕಮ್ಮಾ' ಎಂದು ಅವಳು ಮುದ್ದು ಮುಖ ಕಿವುಚಿದರೂ ಅಮ್ಮಾ ಒಂದು ಮುಷ್ಟಿ ಜಾಸ್ತಿ ಬಡಿಸುವಳು. ಅಪ್ಪ ಸುಮ್ಮನೆ ಮಗಳಿಗೆ ಕಚಗುಳಿ ಇಡುತ್ತಾನೆ. ಬೇಕಂತಲೇ ಅವಳಿಂದ ಪೆಟ್ಟು ತಿನ್ನುತ್ತಾನೆ. ಆಕೆಗೆ 'ನಾನು ಸ್ಟ್ರಾಂಗ್‌' ಎಂದೆನ್ನಿಸುವವರೆಗೂ ಅಪ್ಪ ಈ ಥರ ಪೆಟ್ಟು ತಿನ್ನುವ ಕೆಲಸ ಮಾಡುತ್ತಿರುತ್ತಾನೆ. ಪುಟ್ಟ ಮಗುವಿದ್ದಾಗ 'ಮಗಳು ಐಶ್ವರ್ಯಾ ರೈ ಆಗಲಿ ದೇವ್ರೆ' ಎಂದು ಬೇಡಿಕೊಳ್ಳುತ್ತಿದ್ದ ಅಮ್ಮನ ಪ್ರಾರ್ಥನೆ ಮೊನ್ನೆ ತಾನೆ ಕಸದಬುಟ್ಟಿ ಕಂಡಿದೆ.     'ಮಗಳು ಮಾಲಾಶ್ರೀ ಆಗ್ಲಿ ದೇವ್ರೆ' ಎಂಬುದು ಹೊಸ ಪ್ರಾರ್ಥನೆ.

ಆದರೆ, ದೇವರಿಗೇ ಒಂದು ಗೊಂದಲ ಹುಟ್ಟಿದೆ. ಈ ಮನೆ ಪ್ರಾರ್ಥನಾ ಮಂದಿರವೋ, ಗರಡಿ ಮನೆಯೋ, ಹೋರಾಟದ ಕಣವೋ... ಎಂದು ತಲೆತುರಿಸಿಕೊಳ್ಳುವಾಗ ಇನ್ಯಾರೋ ಪುಟ್ಟ ಬಾಲಕಿ ಅವನ ಜಡೆಗೆ ಊದುಬತ್ತಿ ಸಿಕ್ಕಿಸಿ ಪ್ರಾರ್ಥಿಸಿದಳು; 'ಇವತ್ತು ಸೇಫ್ ಆಗಿ ಮನೇಗ್ ಬರೋಹಾಗೆ ಮಾಡಪ್ಪಾ'!

-ಕೀರ್ತಿ ಕೋಲ್ಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.