ವಿಶೇಷ

ಇದೋ ನಿಮಗೆ ವಿದಾಯ...

ಘನತೆ ಲೇಪಿತ ದಯಾಮರಣಕ್ಕೆ ಮುನ್ನುಡಿ ಬರೆದಳು ಮೆನಾರ್ಡ್...

ಇದೋ ನಿಮಗೆ ವಿದಾಯ...
Published On :

ಘನತೆ ಲೇಪಿತ ದಯಾಮರಣಕ್ಕೆ ಮುನ್ನುಡಿ ಬರೆದಳು ಮೆನಾರ್ಡ್
ಒರೆಗಾನ್‌ನಲ್ಲಿ ಕ್ಯಾನ್ಸರ್ ಪೀಡಿತ ಬದುಕನ್ನು ಕೊನೆಗೊಳಿಸಿದ 29ರ ಮಹಿಳೆ ಪ್ರೀತಿಪಾತ್ರರ ಮಡಿಲಲ್ಲಿ ಇಹಲೋಕಕ್ಕೆ ಗುಡ್‌ಬೈ...
ಸರ್ಲೇ: 'ನನಗೆ ಬದುಕಲು ಆಸೆಯಿದೆ. ಆದರೆ ನನ್ನ ಬದುಕನ್ನು, ನನ್ನ ಖುಷಿಯನ್ನು ಕ್ಯಾನ್ಸರ್ ನಿಯಂತ್ರಿಸುವುದು ನನಗಿಷ್ಟವಿಲ್ಲ. ಹಾಗಾಗಿ ನಾನು ಘನತೆಯ ಸಾವನ್ನು ಆಯ್ಕೆ ಮಾಡುತ್ತಿದ್ದೇನೆ'.

ಇಂತಹುದೊಂದು ಭಾವನಾತ್ಮಕ ಸನ್ನಿವೇಶದಲ್ಲಿ ಬದುಕಿಗೆ ವಿದಾಯ ಹೇಳಿದವಳು ಬ್ರಿಟ್ಯಾನಿ ಮೆನಾರ್ಡ್. ತನ್ನ ಜೀವನದ 29 ವರ್ಷಗಳನ್ನಷ್ಟೇ ಕಳೆದಿರುವ ಮೆನಾರ್ಡ್ ನ.1 ರಂದು ಸ್ವಇಚ್ಛೆಯಿಂದ ಈ ಜಗತ್ತಿಗೆ ಗುಡ್‌ಬೈ ಹೇಳಿದಳು. ಪೋರ್ಟ್‌ಲ್ಯಾಂಡ್‌ನ ಒರೆಗಾನ್‌ನಲ್ಲಿ ದಯಾಮರಣದ ಅವಕಾಶ ಪಡೆದು ಸಾವನ್ನಪ್ಪಿಕೊಂಡ ಮೆನಾರ್ಡ್ ಕಥೆಯಿದು.

ಸಾವು ಹತ್ತಿರದಲ್ಲಿತ್ತು...

ವರ್ಷದ ಆರಂಭದಲ್ಲೇ ಮೆನಾರ್ಡ್ (29)ಗೆ ಆಘಾತ ಕಾದಿತ್ತು. ಆಕೆ ಗಂಭೀರವಾದ ಬ್ರೈನ್ ಟ್ಯೂಮರ್ ಕಾಯಿಲೆಗೆ ತುತ್ತಾಗಿದ್ದಳು. ಈ ಅರ್ಬುದ ರೋಗವು ಇನ್ನು 6 ತಿಂಗಳಲ್ಲೇ ಆಕೆಯನ್ನು ಬಲಿಪಡೆಯುವುದರಲ್ಲಿತ್ತು. ತನ್ನದೇ ಆದ ರೀತಿಯಲ್ಲಿ ಬದುಕನ್ನು ಕಲ್ಪಿಸಿಕೊಂಡಿದ್ದ ಆಕೆಗೆ ತನ್ನ ನಿಯಂತ್ರಣ ಇನ್ನು ತನ್ನ ಕೈಯ್ಯಲ್ಲಿಲ್ಲ. ಎಂಬುದನ್ನು ಅರಗಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ವಿಪರೀತ ತಲೆನೋವು, ಕುತ್ತಿಗೆ ನೋವು, ಪಾರ್ಶ್ವವಾಯುವಿನಂತಹ ಲಕ್ಷಣಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದವು. ತನ್ನನ್ನು ತಾನು ನಿಯಂತ್ರಿಸಿಕೊಳ್ಳುವು ಸಾಧ್ಯವಾಗಿತ್ತಿಲ್ಲ, ಮುಂದಿನ ದಿನಗಳಲ್ಲಿ ಕ್ಯಾನ್ಸರೇ ತನ್ನನ್ನು ನಿಯಂತ್ರಿಸಲಿದೆ ಎಂಬ ಭಯ ಆಕೆಯನ್ನು ಆವರಿಸತೊಡಗಿತು. ನನ್ನ ಬದುಕನ್ನು ಕ್ಯಾನ್ಸರ್ ನಿಯಂತ್ರಿಸಲು ನಾನು ಬಿಡಲಾರೆ.

ಪ್ರತಿ ದಿನ ಸತ್ತು, ಸತ್ತು ಬದುಕುವುದಕ್ಕಿಂತ ಒಮ್ಮೆಗೇ ಗೌರವಯುತವಾಗಿ ಸಾಯುವುದು ಮೇಲು ಎಂದು ಯೋಚಿಸಿದ ಆಕೆ ಕೊನೆಗೆ ನಿಶ್ಚಯಿಸಿ ಬಿಟ್ಟಳು ಘನತೆಯಿಂದ ಸಾಯಲು.
ಒರೆಗಾನ್‌ನ ಡೆತ್ ವಿದ್ ಡಿಗ್ನಿಟಿ ಆ್ಯಕ್ಟ್ (ಘನತೆಯ ಸಾವು ಕಾಯ್ದೆ) ಮೆನಾರ್ಡ್‌ಗೆ ದಯಾಮರಣದ ಅವಕಾಶ ಕಲ್ಪಿಸಿತು. ಅದರಂತೆ ಆಕೆ ತಾನು ಇಚ್ಛಿಸಿದ ಪ್ರದೇಶದಲ್ಲಿ ತಾನು ನಿಗದಿಪಡಿಸಿದ ದಿನದಂದು ಪ್ರಾಣಬಿಟ್ಟಳು. ಕಾನೂನು ಪ್ರಕಾರ ನೀರಿನಲ್ಲಿ ವಿಷಯುಕ್ತ, ನಿದ್ದ ಬರಿಸುವ ಮತ್ತು ಉಸಿರಾಟ ವ್ಯವಸ್ಥೆಯನ್ನು ಕುಗ್ಗಿಸುವ ಔಷಧವನ್ನು ಮಿಶ್ರ ಮಾಡಿ ಕುಡಿದ ಆಕೆ, ತನ್ನ ಬೆಡ್ ರೂಂನಲ್ಲಿ, ತನ್ನ ಪ್ರೀತಿಪಾತ್ರರ ಮಡಿಲಲ್ಲಿ ಶಾಂತಿಯಿಂದ ಕೊನೆಯುಸಿರೆಳೆದಳು. ಈ ಮೂಲಕ ತನ್ನಿಷ್ಟದಂತೆಯೇ ಕ್ಯಾನ್ಸರ್‌ಗೆ ಸೆಡ್ಡು ಹೊಡೆದು ಘನತೆಯ ಸಾವನ್ನು ಅಪ್ಪಿಕೊಂಡಳು.

ಆಸೆ ತೀರಿಸಿಕೊಂಡಳು.
ಸಾಯುವ ನಿರ್ಧಾರ ಕೈಗೊಂಡ ಬಳಿಕ ಸ್ವಲ್ಪವೂ ಕುಗ್ಗದ ಮೆನಾರ್ಡ್, ತನ್ನ ಪತಿ, ತಾಯಿ ಹಾಗೂ ಕುಟುಂಬ ಸದಸ್ಯರೊಂದಿಗೆ ಅಲಾಸ್ಕಾ, ಲಾಸ್ ವೇಗಾಸ್, ಗ್ರ್ಯಾಂಡ್ ಕ್ಯಾನ್ಸನ್ ಮತ್ತಿತರ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದಳು. ಅಲ್ಲಿ ಹೈಕಿಂಗ್, ಸೈಕ್ಲಿಂಗ್, ಡಾಗ್ ವಾಕಿಂಗ್, ಕಯಾಕಿಂಗ್ ಮತ್ತಿತರ ಕ್ರೀಡೆಗಳಲ್ಲಿ ತೊಡಗಿ ತನ್ನೆಲ್ಲ ಆಸೆಗಳನ್ನು ತೀರಿಸಿಕೊಂಡಳು. ಇದೇ ವೇಳೆ ಟುಡೇ.ರ್ಕಾ ಗೆ ಒಂದು ಲೇಖನವನ್ನೂ ಬರೆದ ಮೆನಾರ್ಡ್, 'ಬದುಕಲ್ಲಿ ಬೆಳೆಸಿಕೊಂಡ ಪ್ರತಿಯೊಂದು ಸಂಬಂಧದತ್ತ ಗಮನಹರಿಸಿರಿ. ನೀವು ಪ್ರೀತಿಸುವ ವ್ಯಕ್ತಿಗಳಲ್ಲಿ ಅದನ್ನು ಅಭಿವ್ಯಕ್ತಪಡಿಸಿ, ನಾನು ನಿನ್ನನ್ನು ತುಂಬಾ ತುಂಬಾ ಪ್ರೀತಿಸುತ್ತೇನೆ ಎಂದು ಬಾಯಿಬಿಟ್ಟು ಹೇಳಿ. ಈ ಅವಕಾಶವನ್ನು ಮಿಸ್ ಮಾಡ್ಕೋಬೇಡಿ ಎಂದು ಹೇಳಿದ್ದಳು.

ಜತೆಗೆ, ಪೋರ್ಟ್‌ಲ್ಯಾಂಡ್‌ನ ಸುಂದರ ನಗರ ಒರೆಗಾನ್‌ನಲ್ಲಿ ಹಳದಿ ಬಣ್ಣದ ಪುಟ್ಟ ಮನೆಯೊಂದನ್ನು ತನ್ನ ಸಾವಿನ ಮನೆಯನ್ನಾಗಿ ಆಯ್ಕೆ ಮಾಡಿಕೊಂಡಳು. ತನ್ನಂತೆ ಸಾವನ್ನಪ್ಪಲು ಬಯಸುವವರಿಗೆ ಕ್ಯಾಲಿಫೋರ್ನಿಯಾದಲ್ಲಿರುವ ತನ್ನ ಮನೆಯಲ್ಲಿ ಅವಕಾಶ ನೀಡಿ ಎಂದೂ ಹೇಳಿದ್ದಳು.

ಇದು ಆತ್ಮಹತ್ಯೆಯಲ್ಲ
ಸಾವನ್ನು ತಾನು ಬರಮಾಡಿಕೊಂಡಿದ್ದು ನಿಜ. ಆದರೆ ಇದು ಆತ್ಮಹತ್ಯೆಯಲ್ಲ ಎಂದು ಮೆನಾರ್ಡ್ ಸ್ಪಷ್ಟಪಡಿಸಿದ್ದಳು. 'ನಾನು ನನ್ನನ್ನು ಕೊಲ್ಲುತ್ತಿಲ್ಲ. ಕ್ಯಾನ್ಸರ್ ನನ್ನನ್ನು ಕೊಲ್ಲುತ್ತಿತ್ತು. ಹಾಗಾಗಿ ಹೆಚ್ಚು ನೋವು, ಹೆಚ್ಚು ಕಷ್ಟವಿಲ್ಲದೆ ಸಾಯಲು ಬಯಸಿದೆ ಅಷ್ಟೆ' ಎಂದಿದ್ದಳು.

ಕೊನೆಯ ಮಾತು
ಸಾವನ್ನು ತನ್ನ ಮಲಗುವ ಕೋಣೆಗೆ ಆಹ್ವಾನಿಸಿದ್ದ ಮೆನಾರ್ಡ್, ಅದನ್ನು ಎದುರೇ ಕುಳ್ಳುರಿಕೊಂಡು ತನ್ನ ಗೆಳೆಯರಿಗೆ, ಕುಟುಂಬ ಸದಸ್ಯರಿಗೆ, ಆತ್ಮೀಯರಿಗೆ ವಿದಾಯ ಪತ್ರ ಬರೆದಳು.

'ಎಷ್ಟೋ ಮಂದಿ ಬದುಕಿನ ಪಯಣದಲ್ಲಿ ಒಮ್ಮೆ ನಿಂತು, ಬದುಕನ್ನು ಶ್ಲಾಘಿಸುತ್ತಾರೆ. ಹರ್ಷೋಲ್ಲಾಸದಿಂದ ಇರುವವರಿಗೆ ಧನ್ಯವಾದ ಹೇಳುತ್ತಾರೆ. ನಾವು ನಮ್ಮ ಯೋಚನೆಗಳನ್ನು ಬದಲಿಸಿದರೆ, ಜಗತ್ತನ್ನೇ ಬದಲಿಸಲು ಸಾಧ್ಯ. ನಿಮ್ಮೆಲ್ಲರಲ್ಲೂ ಪ್ರೀತಿ ಮತ್ತು ಶಾಂತಿ ನೆಲೆಸಲಿ' ಎಂದು ಹೇಳುತ್ತಾ ಮೆನಾರ್ಡ್ ಸಾವಿಗೆ ತಲೆಬಾಗಿದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.