ವಿಶೇಷ

ಸೂಪರ್‌ಸ್ಟಾರ್‌ನ ಆತ್ಮಕಥೆ: ಆರಂಭದಿಂದ ಆಧ್ಯಾತ್ಮದವರೆಗೆ

ದ್ವಿತೀಯಾರ್ಧದಲ್ಲಿ ಲೇಖಕರ ನಿರೂಪಣೆ..

ಸೂಪರ್‌ಸ್ಟಾರ್‌ನ ಆತ್ಮಕಥೆ: ಆರಂಭದಿಂದ ಆಧ್ಯಾತ್ಮದವರೆಗೆ
Published On :

ದ್ವಿತೀಯಾರ್ಧದಲ್ಲಿ ಲೇಖಕರ ನಿರೂಪಣೆ ವೇಗವಾಗಿ ಸಾಗುತ್ತದೆ. ರಜನಿ ಎಂಬ ನಾಯಕ ಸೂಪರ್‌ಸ್ಟಾರ್‌ನಿಂದ ದಂತಕಥೆಯಾದ ಹಾಗೆ... ಬಹುಶಃ ಇದಕ್ಕೆ ಕಾರಣ ರಜನಿ ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿದ್ದು ಮತ್ತು ಆತ ನೀಡಿದ ರಾಜಕೀಯ ಹೇಳಿಕೆಗಳ ದಾಖಲಿತ ವಸ್ತುಗಳ ಲಭ್ಯತೆ ಇರಬಹುದು.

'ಅಣ್ಣಾಮಲೈ'ನಿಂದ ಆರಂಭಗೊಂಡು 'ಕೊಚದೈಯಾನ್-ದಿ ಲೆಜೆಂಡ್‌'ನಲ್ಲಿ ಕೊನೆಗೊಳ್ಳುವ ದ್ವಿತೀಯಾರ್ಧ ಚಿತ್ರ ಜಗತ್ತಿನ ನಕ್ಷತ್ರದ ಬಗ್ಗೆ ವಿಶ್ಲೇಷಿಸುವುದು ಮಾತ್ರವಲ್ಲ, ರಜನಿಯ ವೈಯಕ್ತಿಕ ವಿಕಾಸದ ಬಗ್ಗೆಯೂ ತಿಳಿಸುತ್ತದೆ. ಇತರ ತಾರೆಗಳು, ಸ್ನೇಹಿತರಿಂದ ಹಿಡಿದು ಪತ್ರಕರ್ತರ ಉತ್ತಮ ಉಪಾಖ್ಯಾನ ದೃಷ್ಟಿಕೋನಗಳು ಈ ಭಾಗವನ್ನು ಹೆಚ್ಚು ಆತ್ಮೀಯ ಮಾಡುತ್ತವೆ. ನಟನ ವ್ಯಕ್ತಿತ್ವದ ಬಗ್ಗೆ ಅತ್ಯುತ್ತಮ ಒಳನೋಟಗಳನ್ನು ನೀಡುತ್ತವೆ.

1995ರಲ್ಲಿ ಸಕ್ರಿಯವಾಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ ರಜನಿ ಕರುಣಾನಿಧಿಯವರ ಬೆಂಬಲಕ್ಕೆ ನಿಂತರು. 2002ರಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಸಿ ಚಿತ್ರರಂಗ ಮತ್ತು ಜನರ ಮನಗೆದ್ದರು. ಕರ್ನಾಟಕದ ಪರವಾಗಿಇದ್ದರು ಎಂಬ ಆರೋಪವನ್ನು ಸುಳ್ಳು ಮಾಡಿದರು. ಹೋರಾಟದ ಕೊನೆಯಲ್ಲಿ ಎಲ್ಲಾ ನದಿಗಳನ್ನು ಜೋಡಣೆ ಮಾಡಬೇಕೆಂಬ ಸಲಹೆಯನ್ನೂ ನೀಡಿದರು.

ಬಾಲ್ಯದಿಂದಲೇ ಆಧ್ಯಾತ್ಮದ ಒಲವಿರುವ ರಜನಿ ಆಗಾಗ ಹಿಮಾಲಯಕ್ಕೆ ತೆರಳಿ ಬರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಚೆನ್ನೈನಿಂದ ನವದೆಹಲಿಗೆ ವಿಮಾನದಲ್ಲಿ ತೆರಳಿದರೆ, ಅಲ್ಲಿಂದ ಹಿಮಾಲಯದವರೆಗೆ ರಸ್ತೆಯ ಮೇಲೆ ಪ್ರಯಾಣ. ಮೊದಲ ರಾತ್ರಿ ಹರಿದ್ವಾರದ ಆಶ್ರಮದಲ್ಲಿ ಬಾಬ ಅವರ ಕ್ರಿಯಾಯೋಗವಾಡುತ್ತ ಕಾಲ ಕಳೆಯುತ್ತಾರೆ. ಅಲ್ಲಿಂದ ಯೋಗದ ರಾಜಧಾನಿ ರಿಷಿಕೇಶ್‌ಗೆ ತೆರಳುವ ಅವರು ಅಲ್ಲಿನ ಸಾಧು ಸಂತರ ಗುಂಪಿನಲ್ಲಿ ಬೆರೆಯುತ್ತಾರೆ. ಅಲ್ಲಿ ದಯಾನಂದ ಸರಸ್ವತಿ ಆಶ್ರಮದಲ್ಲಿ ಕೆಲವು ದಿನಗಳು ತಂಗಿದ್ದು ಆದಿ ಬದರಿನಾಥದ ಕಡೆಗೆ ಪ್ರಯಾಣಿಸುತ್ತಾರೆ. ಕರ್ಣಪ್ರಯಾಗದಲ್ಲಿ ಸಮಯ ಕಳೆಯುವುದು ರಜನಿಗೆ ಬಹಳ ಪ್ರಿಯವಾದ ವಿಷಯ. ಹಲವು ಕಠಿಣ ಮಾರ್ಗಗಳನ್ನು ನಡೆದು ಬಾಬಾ ಅವರು ವಾಸಿಸುತ್ತಿದ್ದ ಗುಹೆಯನ್ನು ತಲುಪಿ ಅಲ್ಲಿ ಧ್ಯಾನ ಮಾಡುತ್ತಾರೆ. ಬಾಬಾ ಅವರ ಶಿಷ್ಯ ಲಹಿರಿ ಮಹಾಶಯ ಅವರನ್ನು 1861ರಲ್ಲಿ ಇದೇ ಗುಹೆಯಲ್ಲಿ ಭೇಟಿ ಮಾಡಿದ್ದರು. ಇದೇ ಗುಹೆಗೆ ಆಗಾಗ ರಜನಿ ಭೇಟಿ ನೀಡಿ ಧ್ಯಾನ ಮಾಡುವುದು. ಇದರ ಪ್ರಭಾವದಿಂದಲೇ 'ಬಾಬಾ' (2002) ಚಿತ್ರ ಹೊರಬಂದಿದ್ದು.

ಆತ್ಮಚರಿತ್ರೆ
'ಎಸ್. ರಾಮಕೃಷ್ಣನ್ ತಮಿಳು ಸಾಹಿತಿ. 'ಆನಂದ ವಿಕಟನ್‌' ಪತ್ರಿಕೆಯಲ್ಲಿ ಬರುವ ಅವರ ಅಂಕಣ ಬಹಳ ಹೆಸರುವಾಸಿ. ಕಷ್ಟಕಾಲದಲ್ಲೇ ನಮ್ಮ ಶಕ್ತಿ ಅರಿವಾಗುವುದು. ಸಂತಸವಾಗಿರುವಾಗ ಏನೂ ಅರಿವಾಗುವುದಿಲ್ಲ. ಆ ಕಷ್ಟ ಕಾಲದ ಬಗ್ಗೆ ಬರೆಯಬೇಕೆಂಬ ಆಸೆಯಿತ್ತು. ಪ್ರಯತ್ನ ಮಾಡೋಣವೆಂದುಕೊಂಡೆ. ತಮಿಳಿನಲ್ಲಿ ಬರೆಯುವುದು ನನಗೆ ತಿಳಿದಿಲ್ಲ, ಇಂಗ್ಲಿಷಿನಲ್ಲಿ ನಾನು ಅಷ್ಟು ಸರಾಗವಾಗಿ ಬರೆಯಲಾರೆ. ಇನ್ನು ಕನ್ನಡದಲ್ಲಿ ಬೇರ್ಯಾವುದನ್ನು ಮರೆತೇ ಹೋಗಿದ್ದೇನೆ. ಹಾಗಾಗಿ ರಾಮಕೃಷ್ಣನ್ ಅವರಿಗೆ ಬರೆಯುವಂತೆ ಹೇಳಿದೆ. ಅದನ್ನು ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡುವ ಉದ್ದೇಶವಿತ್ತು. ಯಾರನ್ನೂ ನೋಯಿಸಲು ಅಲ್ಲ. ಬದಲಾಗಿ ನನ್ನ ಮನಸಿನ ತೊಳಲಾಟವನ್ನು ಹಂಚಿಕೊಳ್ಳಲು. ಯಾರನ್ನೂ ಟೀಕೆ ಮಾಡುವ ಉದ್ದೇಶವೂ ಇರಲಿಲ್ಲ' ಎಂದು ರಜನಿ ಹೇಳುತ್ತಾರೆ.

ತಿರುಪತಿಯಲ್ಲಿ ಗೆಳೆಯನೊಬ್ಬನ ಮನೆಗೆ ರಾಮಕೃಷ್ಣನ್ ಅವರನ್ನು 12 ದಿನಗಳವರೆಗೆ ಕರೆದೊಯ್ದ ರಜನಿ ಅಲ್ಲಿ ಎಲ್ಲವನ್ನೂ ಮನಬಿಚ್ಚಿ ಹೇಳಿದರು. ಚೆನ್ನೈಗೆ ಮರಳಿದ 15 ದಿನಗಳ ಬಳಿಕ ರಾಮಕೃಷ್ಣನ್ ಅವರು ನೀಡಿದ ಹಸ್ತಪ್ರತಿ ಕಂಡು ರಾಣಿ ದಂಗಾಗಿಹೋದರು. 'ಅದು ತುಂಬಾ ಚೆನ್ನಾಗಿತ್ತು. ಆದರೆ ಅದರಲ್ಲಿ ಸತ್ಯ ಇತ್ತು. ಹಲವರಿಗೆ ಅದರಿಂದ ನೋವಾಗುತ್ತಿತ್ತು. ಪತ್ರಿಕೆಗಳಿಗೆ ತೆರಳಿ ಸುಮ್ಮನೆ ಸುದ್ದಿಗೆ ಗ್ರಾಸವಾಗುತ್ತದೆ ಎನಿಸಿತು. ಸರಿಯಾದ ಸಮಯ ಬಂದಾಗ ಬಿಡುಗಡೆ ಮಾಡಬೇಕೆಂದು  ನನ್ನ ಬಳಿಯೇ ಇರಿಸಿಕೊಂಡೆ' ಎನ್ನುತ್ತಾರೆ ರಜನಿ.

ಸರಳತೆಗೆ ಇನ್ನೊಂದು ಹೆಸರು
ಈ ನಡುವೆ ಅವರ ಸಾಕಷ್ಟು ಚಿತ್ರಗಳು ಯಶಸ್ವಿಯಾಗುತ್ತವೆ. 'ರೋಬೋ' ಚಿತ್ರೀಕರಣ ಸಂದರ್ಭದಲ್ಲಿ ಪುಣೆಯಲ್ಲಿ ಅವರಿಗಾಗಿ ಒಂದು ದೊಡ್ಡ ರೂಮನ್ನು ಕಾಯ್ದಿರಿಸಲಾಗಿತ್ತು. ಆದರೆ ಅದನ್ನು ನಿರಾಕರಿಸಿದ ರಜನಿ 'ನನಗೊಂದು ಸಿಂಗಲ್ ರೂಂ ಕೊಡಿ. ನನಗೆ ಮಲಗಲು, ಯೋಗ ಮಾಡಲು, ಧ್ಯಾನಿಸಲು ಮತ್ತು ಊಟ ಮಾಡಲು ಸಾಕಾಗುವಷ್ಟು ಜಾಗವಿದ್ದರೆ ಸಾಕು' ಎಂದು ಹೇಳುತ್ತಾರೆ. ಎಲ್ಲಿಗೇ ಹೋಗಲಿ ಯಾವುದೇ ವೈಭವತೆ ಬೇಕಾಗಿಲ್ಲ. ಎಲ್ಲದರಲ್ಲೂ ಸರಳತೆಯನ್ನು ಹುಡುಕುವ ರಜನಿಗೆ ಬಿಸಿಯಾಗಿಇರುವ ಊಟದ ಡಬ್ಬಿಯನ್ನು ರೂಮಿನ ಹೊರಗೆ ಇರಿಸಬೇಕು, ಎನ್ನುವ ಲೇಖಕ ಯೋಗ, ಧ್ಯಾನ ಮತ್ತು ಕುಡಿತದ ಬಳಿಕ ಊಟವನ್ನೂ ಒಳಗೆ ತೆಗೆದುಕೊಂಡು ತಿಂದು, ಪಾತ್ರೆಯನ್ನು ತೊಳೆದು ಮತ್ತೆ ರೂಮಿನ ಹೊರಗೆ ಇರಿಸುತ್ತಾರೆ ಎಂದು ತಿಳಿಸುತ್ತಾರೆ. ಶೂಟಿಂಗ್ ಸಮಯವಾದಾಗ ರೂಮಿನಿಂದ ಹೊರಬರುತ್ತಾರೆ. ಇಷ್ಟೆಲ್ಲಾ ಇದ್ದರೂ ಸರಳತೆಗೆ ಇನ್ನೊಂದು ಹೆಸರು ರಜನಿಕಾಂತ್. ಹಲವರ ಆರಾಧ್ಯ ದೈವ, ನಡೆದಾಡುವ ದಂತಕಥೆ.

ಕೊನೆಯ ಕೆಲವು ಪುಟಗಳಲ್ಲಿ ಲೇಖಕ ನಿರ್ದೇಶಕರು, ಸಹ ನಟರು, ಅಭಿಮಾನಿಗಳು, ರಜನಿಯ ಸ್ನೇಹಿತರು ಮತ್ತು ಮಾರ್ಗದರ್ಶಿಗಳು, ಪತ್ರಕರ್ತರ ಅಭಿಪ್ರಾಯ ದೃಷ್ಟಿಕೋನ ಪಡೆಯುವ ಪ್ರಯತ್ನ ಮಾಡಿದ್ದಾರಾದರೂ, ರಜನಿ ಹೇಗೆ ಮತ್ತು ಏಕೆ ದಂತಕಥೆಯಾದರು ಎನ್ನುವುದು ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಏನೇ ಆಗಲಿ ರಜನಿಕಾಂತ್ ಎಂಬ ಸೂಪರ್‌ಸ್ಟಾರ್‌ನ ಬಗ್ಗೆ ಬರೆಯುವುದು ಅಷ್ಟು ಸುಲಭದ ಮಾತಲ್ಲ. ರಜನಿ ಒಬ್ಬ ವ್ಯಕ್ತಿಯಾಗಿ, ಸಿನೆಮಾ ಜಗತ್ತಿನ ಹೊರಗೆ ಅವರ ಜೀವನದ ಬಗ್ಗೆ ಲೇಖಕ ಸಾಕಷ್ಟು ಹೇಳಿದ್ದಾರೆ. (ಮುಂದುವರಿಯುವುದು)

- ಚೈತ್ರಾ ಅರ್ಜುನಪುರಿ

carjunp@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.