ವಿಶೇಷ

ಮೋರಿ ಪ್ಯಾರಿ ಕಚೇರಿ

ಮೋರಿ ಪ್ಯಾರಿ ಕಚೇರಿ
Published On :

ತಾಜ್ ಮಹಲ್‌ನಂಥ ರಿಸೆಪ್ಶನ್ ಕೋಣೆ, ಗಂಟೆಗೊಮ್ಮೆ ಬಣ್ಣ ಬದಲಿಸುವ ಗೋಡೆಗಳು, ಅಂಬಾಸಿಡರ್ ಕಾರು, ರಿಕ್ಷಾದಂತಹ ಮೀಟಿಂಗ್ ರೂಂಗಳು, ಜಾರು ಬಂಡೆಯಂತಾ ಸೀಟುಗಳು ಇವೆಲ್ಲದರ ಜೊತೆಗೆ ಇಷ್ಟೇ ಆಕರ್ಷಕವಾಗಿರುವ ಮಿನಿ ಗಾಲ್ಫ್ ಕೋರ್ಸ್, ಕ್ರಿಕೆಟ್ ಕ್ರೀಡಾಂಗಣ, ಜಿಮ್, ವಿಶ್ರಾಂತಿ ಕೋಣೆಗಳು- ಇಂಥದ್ದೊಂದು ಆಪೀಸ್ ಇದ್ದರೆ, ಜನ ಅಲ್ಲಿಂದ ಮನೆಗೆ ಹೋಗುವ ಮನಸ್ಸು ಮಾಡದೆ, ಬಹುಶಃ ಬೆಂಗಳೂರಿನಂಥಾ ನಗರಗಳಲ್ಲಿ ಬಾಡಿಗೆ ಮನೆಗಳು, ಅಪಾರ್ಟ್‌ಮೆಂಟ್‌ಗಳು ಖಾಲಿಯೇ ಉಳಿಯುತ್ತವೇನೋ!

ಕಾರ್ಪೋರೇಟ್ ಆಫೀಸ್‌ಗಳ ಲುಕ್ ಬದಲಾಗುತ್ತಿದೆ. ಮೇಲಿನ ಚಿತ್ರಣ ಸುಮ್ಮನೆ ಅಧಿಕ ಪ್ರಸಂಗಿತನದ ಕಲ್ಪನೆಯಲ್ಲ, ಅದು ಗುರ್‌ಗಾಂವ್‌ನಲ್ಲಿರುವ ಗೂಗಲ್ ಆಫೀಸ್‌ನ ಹೊಸ ಚಹರೆ. ವರ್ಕ್‌ಪ್ಲೇಸ್ ಯಾವತ್ತೂ ಫನ್ ಪ್ಲೇಸ್ ಆಗಬೇಕು. ನೌಕರವರ್ಗದವರು ಸಂತೋಷದಿಂದದ್ದರೆ ಕೆಲಸದ ಗುಣಮಟ್ಟವೂ ಹೆಚ್ಚುತ್ತದೆ ಎಂಬುದು ಇದರ ಹಿಂದಿನ ಚಿಂತನೆ. ಅಷ್ಟೇ ಅಲ್ಲ, ಇಲ್ಲಿ ಉನ್ನತ ಸ್ಥಾನದಲ್ಲಿರುವವರೂ, ಆಗ ತಾನೇ ಕೆಲಸಕ್ಕೆ ಸೇರಿದವರು ಎಲ್ಲರಿಗೂ ಒಂದೇ ರೀತಿಯ ಕುರ್ಚಿಗಳು.

ಪ್ರಪಂಚದಾದ್ಯಂತ ಇರುವ ಗೂಗಲ್‌ನ ಎಲ್ಲ ಆಫೀಸ್‌ಗಳೂ ಇಂಥದೇ ಹಲವಾರು ಫನ್ ಚಿಂತನೆಗಳಿಂದ ಕೂಡಿವೆ. ಗೂಗಲ್ ಮಾತ್ರವಲ್ಲ. ಭಾರತದಲ್ಲಿ ಲಿಂಕ್ಡ್ ಇನ್, ಎಕ್ಸ್‌ಪೀಡಿಯಾ, ಬ್ರಿಟಿಷ್ ಟೆಲಿಕಾಂ, ಯುನಿಲೆವರ್ ಐಟಿ ಸೆಂಟರ್ ಕಂಪನಿಗಳು ತಮ್ಮ ಆಫೀಸ್‌ಗಳನ್ನು ಸೃಜನಶೀಲತೆಯ ಪ್ರಯೋಗಕ್ಕೊಡಿವೆ.

ಭಾರತದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಭಾಗ 24 ವಯಸ್ಸಿನ ಕೆಳಗೆ ಇದೆ. 2020ರಲ್ಲಿ ಈ ಬಹು ಸಂಖ್ಯಾತ ಯುವ ಜನಾಂಗದ ವಯಸ್ಸು 27 ಆಗಿರುತ್ತದೆ. ಹೀಗಾಗಿ ವಿಶ್ವದ ನೌಕರವರ್ಗದ ಶೇ.28 ಭಾಗ ಭಾರತೀಯರಿರುತ್ತಾರೆ. ಅಂದ ಮೇಲೆ ಭಾರತದಲ್ಲಿ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಆಫೀಸ್ ಕಟ್ಟಡವನ್ನು ನಿರ್ಮಾಣ ಮಾಡಬೇಕು. ಈಗಿನ ತಲೆಮಾರಿನವರಿಗೆ ಕಲೀಗ್ಸ್ ಎಂದರೆ ಗೆಳೆಯರು. ಅವರು ಹತ್ತಿರ ಹತ್ತಿರ ಕೂರಲು ಬಯಸುತ್ತಾರೆ. ಒಟ್ಟಿಗೇ ಕುಳಿತಾಗ ಹರಟಿದರೂ ಸೃಜನಾತ್ಮಕ ಐಡಿಯಾಗಳು ಹೊರಬರುತ್ತವೆ. ಸ್ಪರ್ಧಾತ್ಮಕ ಯುಗದಲ್ಲಿ ಇಂಥ ಸೃಜನಾತ್ಮಕ ಐಡಿಯಾಗಳೇ ಒಂದು ಕಂಪನಿಗಿಂತ ಮತ್ತೊಂದನ್ನು ಮೇಲೇರಿಸುತ್ತವೆ. ಹೀಗಾಗಿ ಯುವನೌಕರರನ್ನು ಕೆಲಸದಲ್ಲಿ ತೊಡಗಿಸುವುದಕ್ಕಾಗಿ ಮ್ಯಾನೇಜ್‌ಮೆಂಟ್‌ಗಳು ತಾವೇ ಬದಲಾಗಲು ನಿರ್ಧರಿಸಿವೆ.

ಲಿಂಕ್ಡ್ ಇನ್‌ನ ಗುರ್‌ಗಾಂವ್ ಬ್ರ್ಯಾಂಚ್‌ನಲ್ಲಿ ಕಂಟ್ರಿ ಮ್ಯಾನೇಜರ್ ನಿಶಾಂತ್ ರಾವ್ ದಿನಕ್ಕೊಂದು ಸ್ಥಳದಲ್ಲಿ ಕೂರುತ್ತಾರೆ. ಇದರಿಂದ ಎಲ್ಲ ಸಹವರ್ತಿಗಳೊಡನೆ ಸಲಿಗೆಯಿಂದಿರಲು ಸಾಧ್ಯ ಎಂಬುದು ಅವರ ಯೋಚನೆ. ಈ ಆಫೀಸ್‌ಗಳಲ್ಲಿ ತಮ್ಮ ಕ್ಯಾಬಿನ್‌ಗಳಲ್ಲಿ ಕೆಲಸ ಮಾಡಲು ಮನಸ್ಸು ಬಾರದಿದ್ದರೆ, ಲ್ಯಾಪ್‌ಟಾಪ್ ಎತ್ತಿಕೊಂಡು ಎದ್ದು ಹೋಗಿ. ಯಾವುದೋ ಗೋಡೆಗೆ ಆತುಕೊಂಡು ಕುಳಿತೂ ಕೆಲಸ ಮಾಡಬಹುದು. ಅಷ್ಟೇ ಅಲ್ಲ ಪೂಲ್‌ಟೇಬಲ್ ಬಳಿ ಗುಂಪಿನಲ್ಲಿ ನಿಂತು ಪ್ರಾಜೆಕ್ಟ್ ಬಗ್ಗೆ ಚರ್ಚಿಸಬಹುದು. ಗಾಜಿನ ಗೋಡೆ ಮೇಲೆ ತಮ್ಮ ಐಡಿಯಾಗಳನ್ನು ಚಿತ್ರಿಸಬಹುದು.

ಒಟ್ಟಾರೆ ಕೆಲಸವೆಂಬುದು ಒಂದು ಮೋಜು ಎಂಬ ಭಾವನೆಯಲ್ಲೇ, ಅಷ್ಟೇ ಖುಷಿಯಲ್ಲೇ ನೌಕರರನ್ನು ಕೆಲಸಕ್ಕೆ ಪ್ರೇರೇಪಿಸಲು ಈ ಆಫೀಸ್‌ಗಳು ಪಣ ತೊಟ್ಟಿವೆ. ಶಿಸ್ತಿನ ವಾತಾವರಣಕ್ಕಿಂತ ಆರೋಗ್ಯಕರ, ಸ್ನೇಹಮಯ ವಾತಾವರಣವಿರಬೇಕು. ಎಂಪ್ಲಾಯಿ ಸ್ಯಾಟಿಸ್ ಫಾಕ್ಷನ್ ಹೆಚ್ಚಿಸಿ ಆ ಮೂಲಕ ಅವರಿಂದ ಕೆಲಸ ತೆಗೆಯುವ ಗೂಗಲ್‌ನ ಐಡಿಯಾ ಚೆನ್ನಾಗಿದೆ.. ಚೆನ್ನಾಗಿದೆ...!

ಭವಿಷ್ಯದಲ್ಲಿ ಇಂಥ ಕಚೇರಿಗಳ ಸಂಖ್ಯೆ ಹೆಚ್ಚಲಿದೆಯಂತೆ. ಯಾಕೆಂದರೆ ಎಂಪ್ಲಾಯಿಗಳನ್ನು ಮೂಗಿಗೆ ಬಳ್ಳಿ ಕಟ್ಟಿ ಗಾಣದೆತ್ತಿನಂತೆ ದುಡಿಸುತ್ತೇನೆ ಎಂದರೆ ಈ ಯುಗದಲ್ಲಿ ಯಾರೂ ಕೇಳಲಾರರು. ಸ್ವತಂತ್ರ ಮನೋವೃತ್ತಿಯುಳ್ಳ ಇಂದಿನ ಯುವಜನ ಚೆನ್ನಾಗಿರುವ ವರ್ಕ್ ಸ್ಪೇಸ್‌ಗಳನ್ನು ಹುಡುಕಿ ವಲಸೆ ಹೋಗುತ್ತಿರುತ್ತಾರೆ. ಅವರನ್ನು ಹೆಚ್ಚಿನ ಹೊತ್ತು ಕಚೇರಿಯಲ್ಲೇ ಉಳಿಸಿಕೊಳ್ಳುವುದು, ಅವರ ಪ್ರೊಡಕ್ಟಿವಿಟಿ ಹೆಚ್ಚಿಸುವುದು ಇಂದಿನ ಕಂಪನಿಗಳ ಸವಾಲು. ಅದಕ್ಕೇ ದೊಡ್ಡ ದೊಡ್ಡ ಕಂಪನಿಗಳು ಇಂಥ ಯೋಜನೆಗಳ ಮೊರೆ ಹೋಗಿವೆ. ಇದಕ್ಕಾಗಿ ಅವುಗಳಿಗೆ ಸ್ವಲ್ಪ ಹೆಚ್ಚಿನ ವೆಚ್ಚವಾಗುತ್ತದೆ, ನಿಜ. ಆದರೆ ಹೆಚ್ಚುವ ಉತ್ಪಾದಕತೆ ಮತ್ತು ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಅದು ಏನೇನೂ ಅಲ್ಲ.

-ರೇಶ್ಮಾರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.