ನಿಮ್ಮ ಮಗುವಿನಲ್ಲಿ ಒಬ್ಬ ಮಂಜುಳ್ ಭಾರ್ಗವ!

ಮಂಜುಳ್ ಭಾರ್ಗವ ಎಂಬ ಯುವ ಸಾಧಕ ಇದ್ದಕ್ಕಿದ್ದಂತೆ ಸುದ್ದಿಯಾಗಿದ್ದಾರೆ. ಈತನ ಮೂಲ ಭಾರತ. ಆದರೆ ಈಗ ಇರುವುದು ಅಮೆರಿಕದಲ್ಲಿ. 'ಗಣಿತದ ನೊಬೆಲ್' ಎಂದೇ ಹೆಸರಾದ ಫಿಲ್ಡ್ಸ್ ಮೆಡಲ್ ಇವರಿಗೆ ಸಂದಿದೆ. ನಾಲ್ಕು ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಗಣಿತ ಒಕ್ಕೂಟ ನೀಡುವ ಪ್ರಶಸ್ತಿ ಇದು. ಇನ್ನೂ ಹೆಚ್ಚಿನ ಸಾಧನೆಯನ್ನು ಈ ಪುರುಸ್ಕೃತರಿಂದ ನಿರೀಕ್ಷಿಸಲಾಗುತ್ತಿದೆ.
ಇಂಥ ಹುಡುಗರು ಇದ್ದಕ್ಕಿದ್ದಂತೆ ಸುದ್ದಿ ಮಾಡಿದಾಗ ಇವರು ಎಳ್ಲಿಂದ ಬಂದರಪ್ಪಾ ಎಂಬ ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ. ಇವರೂ ಎಲ್ಲರಂತೇ ಸಾಮಾನ್ಯ ಅಪ್ಪ-ಅಮ್ಮಂದಿರಿಗೆ ಹುಟ್ಟಿ, ಬೆಳೆಯುವವರು ಎನ್ನುವುದು ನಿಮಗೆ ಗೊತ್ತಿರಲಿ. ಆದರೆ ಬೆಳೆಯುವ ಪ್ರಕ್ರಿಯೆಯಲ್ಲೇ ಅಡಗಿರುವ ಕೆಲವು ವಿಶಿಷ್ಟತೆಗಳು ಅವರನ್ನು ಇತರರಿಗಿಂತ ಬೇರೆ ಆಗಿಸುತ್ತವೆ. ನಿಮ್ಮ ಮಧ್ಯೆಯೂ ಒಬ್ಬ ಹುಡುಗನೋ ಹುಡುಗಿಯೋ ಮುಂದಿನ ಮಂಜುಳ್ ಭಾರ್ಗವ ಆಗಿರಬಹುದು. ಆದರೆ ಆತನನ್ನು ಗುರುತಿಸುವುದು ಹೇಗೆ, ಬೆಳೆಸುವುದು ಹೇಗೆ? ಇದಕ್ಕೆ ನಾವು ಮಂಜುಳ್ ಭಾರ್ಗವ್‌ನನ್ನು ಆತನ ಹೆತ್ತವರು ಹೇಗೆ ಬೆಳೆಸಿದಿರು ಎಂಬುದರಿಂದಲೇ ಪಾಠ ಕಲಿಯಬೇಕು.
ಮಂಜುಳ್ ಹತ್ತನೇ ತರಗತಿಯಲ್ಲಿದ್ದಾಗಲೇ ಕ್ಲಿಷ್ಟ ಗಣಿತ ಪ್ರಮೇಯವೊಂದನ್ನು ಕಂಡುಹಿಡಿದ. ಆದರೆ ಅದು ಈಗಾಗಲೇ ಇನ್ಯಾರೋ ಕಂಡುಹಿಡಿದದ್ದಾಗಿತ್ತು. ಆದರೆ ಆತನ ಅಮ್ಮ ಆ ವಿಚಾರ ಹೇಳಿ ಆತನ ಉತ್ಸಾಹವನ್ನು ಭಂಗಗೊಳಿಸಲಿಲ್ಲ. ಪ್ರೋತ್ಸಾಹಿಸಿದಳು. ನಿಮ್ಮ ಮಗುವಿನ ಸಾಧನೆಯ ಉತ್ಸಾಹವನ್ನು ವಾಸ್ತವದ ಸತ್ಯಗಳು ಭಂಗಗೊಳಿಸದಿರಲಿ.
ಮಂಜುಳ್ ಶಾಲೆಗೆ ಹೋಗುವುದನ್ನು ಅತ್ಯಂತ ದ್ವೇಷಿಸುತ್ತಿದ್ದನಂತೆ. ಬದಲಾಗಿ ತನ್ನ ತಾಯಿಯ ಜತೆ ಇರಲು ಹೆಚ್ಚು ಇಷ್ಟಪಡುತ್ತಿದ್ದನಂತೆ. ಆಗ ಆಕೆ ಆತನ ಜತೆಗೂಡಿ ಕುಳಿತು ಸಬ್ಜೆಕ್ಟ್‌ಗಳನ್ನು ಕಲಿಯುತ್ತ, ಕಲಿಸುತ್ತಿದ್ದಳು. ನಿಮ್ಮ ಮಗುವಿಗೆ ಶಾಲೆಗೆ ಹೋಗಲು ಇಷ್ಟವಿಲ್ಲದಿರಬಹುದು. ಹಾಗೆಂದು ಆತ/ಆಕೆ ದಡ್ಡನೆಂದು ಅರ್ಥವಲ್ಲ.
ಮಂಜುಳ್ ತುಂಬಾ ಚೆನ್ನಾಗಿ ತಬಲ ನುಡಿಸಬಲ್ಲ. ಉಸ್ತಾದ್ ಝಾಕಿರ್ ಹುಸೇನರೇ ಆತನಿಗೆ ಗುರು. ಓದುವಿಕೆ ಹಾಗೂ ಹವ್ಯಾಸಗಳನ್ನು ಆತ ಜತೆಜತೆಗೆ ಕೊಂಡೊಯ್ದವನು. ನಿಮ್ಮ ಮಗುವಿನ ಅಭಿರುಚಿ ಗುರುತಿಸಿ. ಯಾವಾಗಲೂ ಸ್ಟಡಿ, ಸ್ಟಡಿ ಎಂದು ಜೀವ ತಿನ್ನಬೇಡಿ. ಅವರಿಗಿಷ್ಟವಾದ ಇತರ ಕಲಿಕೆಗಳಿಗೂ ಆಸ್ಪದ ಕೊಡಿ.
ಆತ ಮ್ಯಾಜಿಕ್ ಕೂಡ ಮಾಡಬಲ್ಲ. ಮ್ಯಾಜಿಕ್ ತಂತ್ರಗಳಿಗೆ ಸಂಬಂಧಿಸಿದ ಹಲವಾರು ಗಣಿತ ಸಮಸ್ಯೆಗಳನ್ನು ಈತ ಅಧ್ಯಯನ ಮಾಡಿದ್ದಾನೆ, ಬಿಡಿಸಿದ್ದಾನೆ. ನಿಮ್ಮ ಮಗುವಿನ ಆಯ್ಕೆ ನಿಮಗೆ ಕ್ರೇಝಿ ಅನ್ನಿಸಬಹುದು. ಆದರೆ ಕಾಲದ ದೃಷ್ಟಿಯಿಂದ ಅದೇ ಜೀನಿಯಸ್ ಅನಿಸಬಹುದು.
ಆತ ಸಿತಾರ್, ಗಿಟಾರ್ ವಯೋಲಿನ್‌ಗಳನ್ನು ನುಡಿಸಬಲ್ಲ. ಸಂಸ್ಕೃತ ಕಾವ್ಯದ ರುಚಿ ಆತನಿಗೆ ಗೊತ್ತು. ಅದು ಅವನಿಗೆ ಬಂದದ್ದು ಭಾರತದಲ್ಲಿರುವ ಅಜ್ಜಿ-ತಾತನಿಂದ. ಸಂಸ್ಕೃತ ಕಾವ್ಯದಲ್ಲಿ ಅದ್ಭುತವಾದ ಗಣಿತದ ಲಯ ಇದೆ ಅನ್ನುತ್ತಾನೀತ. ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲ ಸಂಗತಿಗಳನ್ನು ಅದಕ್ಕೆ ಕೊಡಿಸಿ. ಅದರಲ್ಲಿ ಹೆಚ್ಚಿನವೆಲ್ಲ ಹೆಚ್ಚು ಹಣ ಬೇಡದ ಸಂಗತಿಗಳು.
-ಶ್ರವಂತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


