ರಾಜಕೀಯ

ED ದಾಳಿ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಬೆನ್ನಿಗೆ ನಿಂತ ಎಸ್‌ಟಿ ಸಮುದಾಯ: ಬೃಹತ್‌ ಸಮಾವೇಶಕ್ಕೆ ಮುಂದು; ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು..!

ಪ್ರಮುಖ ಎಸ್‌ಟಿ ನಾಯಕ ಹಾಗೂ ಹಿಂದುಳಿದ ಸಮುದಾಯಗಳ ಪ್ರತಿನಿಧಿಯಾಗಿರುವ ಕಾರಣಕ್ಕೆ ಜಾರಕಿಹೊಳಿ ಅವರನ್ನು ಗುರಿಯಾಗಿಸಲಾಗಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದರು.

ED ದಾಳಿ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಬೆನ್ನಿಗೆ ನಿಂತ ಎಸ್‌ಟಿ ಸಮುದಾಯ: ಬೃಹತ್‌ ಸಮಾವೇಶಕ್ಕೆ ಮುಂದು; ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು..!
ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಕೆಎನ್ ರಾಜಣ್ಣ
Published On :

ಬೆಂಗಳೂರು: ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಕೈಗೊಂಡಿರುವ ಕ್ರಮ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿರುವ ಬಹುತೇಕ ಕಾಂಗ್ರೆಸ್‌ ಬೆಂಬಲಿತ ಎಸ್‌ಟಿ ನಾಯಕರ ಗುಂಪು, ಸಚಿವರ ಬೆಂಬಲಕ್ಕೆ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಿದೆ.

ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಬೃಹತ್‌ ಸಮಾವೇಶ ನಡೆಸುವ ಬಗ್ಗೆ ನಾಯಕರು ಚರ್ಚಿಸಿದ್ದಾರೆ. ಸಮಾವೇಶಕ್ಕೆ ವಾಲ್ಮೀಕಿ ಸಮುದಾಯದ ಲಕ್ಷಾಂತರ ಜನರನ್ನು ಸೇರಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ವಿಜಯ್‌ ನಾಯಕ್‌, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶುಭಾ ವೇಣುಗೋಪಾಲ್‌, ಕಾನೂನು ಘಟಕದ ಕಾರ್ಯಾಧ್ಯಕ್ಷ ಹಾಗೂ ವಕೀಲ ದಿವಾಕರ್‌ ನಾರಾಯಣಸ್ವಾಮಿ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯರೂ ಆಗಿರುವ ಅವರು, ಧಾರವಾಡದ ಅಶೋಕ್‌ ಮತ್ತು ಕೋಟಿಯಾಳ್‌, ರಾಯಚೂರಿನ ರವಿ, ಗದಗದ ರತ್ನಾಕರ್‌ ಹಾಗೂ ಸುರಪುರದ ಸಮಾಜ ಸೇವಕ ರಮೇಶ್‌ ದೊರೆ ಸೇರಿದಂತೆ ಸುಮಾರು 300 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಸಮುದಾಯದ ನಾಯಕರ ಪ್ರತಿಕ್ರಿಯೆ ತಿಳಿದುಕೊಳ್ಳುವ ಉದ್ದೇಶದಿಂದ ಸಮಾನ ಮನಸ್ಕರ ಪ್ರಾಥಮಿಕ ಸಭೆ ನಡೆಸಲಾಗಿದೆ. ಆದರೆ, ಬೃಹತ್‌ ಸಮಾವೇಶವನ್ನು ಖಂಡಿತವಾಗಿಯೂ ನಡೆಸುತ್ತೇವೆ” ಎಂದು ದಿವಾಕರ್‌ ಅವರು ತಿಳಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸತೀಶ್‌ ಜಾರಕಿಹೊಳಿ ಅವರನ್ನು ಇ.ಡಿ. ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ ಬೆನ್ನಲ್ಲೇ ಈ ಸಭೆ ನಡೆದಿದೆ.

ಪ್ರಮುಖ ಎಸ್‌ಟಿ ನಾಯಕ ಹಾಗೂ ಹಿಂದುಳಿದ ಸಮುದಾಯಗಳ ಪ್ರತಿನಿಧಿಯಾಗಿರುವ ಕಾರಣಕ್ಕೆ ಜಾರಕಿಹೊಳಿ ಅವರನ್ನು ಗುರಿಯಾಗಿಸಲಾಗಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದರು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಜಾರಕಿಹೊಳಿ ಅವರನ್ನು ಎರಡನೇ ಬಾರಿಗೆ ಗುರಿಯಾಗಿಸಿದೆ ಹಾಗೂ ಎಸ್‌ಟಿ ಸಮುದಾಯದಲ್ಲಿ ಅವರ ಪ್ರಭಾವ ಹೆಚ್ಚಿರುವ ಕಾರಣ ಕರ್ನಾಟಕದ ಬಿಜೆಪಿ ನಾಯಕರು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.

ಹಿರಿಯ ಕಾಂಗ್ರೆಸ್‌ ನಾಯಕರನ್ನು, ಅದರಲ್ಲೂ ವಿಶೇಷವಾಗಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸೇರಿದ ನಾಯಕರನ್ನು ರಾಜಕೀಯ ದ್ವೇಷದ ಮನೋಭಾವದಿಂದ ತನಿಖೆಗೆ ಒಳಪಡಿಸಲಾಗುತ್ತಿದೆ ಎಂಬ ಆರೋಪ ಹೊಸದೇನಲ್ಲ ಎಂದು ಸುರ್ಜೇವಾಲಾ ಹೇಳಿದ್ದರು. ಇದೇ ವೇಳೆ ಕಾಂಗ್ರೆಸ್‌ ಪಕ್ಷ ಸತೀಶ್‌ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿದೆ ಎಂದೂ ತಿಳಿಸಿದ್ದರು.

ಗುರುವಾರ ನಡೆದ ಸಭೆಯಲ್ಲಿ ಎಸ್‌ಟಿ ನಾಯಕರ ವಿರುದ್ಧ ನಡೆದಿರುವ ಇ.ಡಿ. ಶೋಧ ಕಾರ್ಯಾಚರಣೆಯ ರಾಜಕೀಯ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಯಿತು. ಸಮುದಾಯದ ಪ್ರಮುಖ ನಾಯಕರನ್ನು ಗುರಿಯಾಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ತಮ್ಮ ಆತಂಕವನ್ನು ನಾಯಕರು ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.