ಡಿಜಿಟಲ್ ಇಂಡಿಯಾ ಹೆಸರಲ್ಲಿ ಮೋದಿಯಿಂದ ಜನರ ಬರ್ಬಾದ್; ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ: ಶಿವರಾಜ್ ತಂಗಡಗಿ
ನಾನು ಅವರಿಗೆ 'ಅಣ್ಣ-ತಮ್ಮಾ' ಎಂದು ಗೌರವಯುತವಾಗಿ ಉತ್ತರಿಸಿದ್ದೇನೆ. ಆದರೆ ಅವರು ಹಳೆಯ ವಿಡಿಯೋ ಹುಡುಕಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಕಳೆದ ಆನೆಗೊಂದಿ ಉತ್ಸವದಲ್ಲಿ ನನ್ನನ್ನು ಹೊಗಳಿದ ವಿಡಿಯೋವನ್ನೂ ಅವರು ಬಿಡುಗಡೆ ಮಾಡಲಿ.

ಕಲಬುರಗಿ: ಜನಾರ್ದನರೆಡ್ಡಿಗೆ ಅಧಿಕಾರದ ಮತ್ತು ಸಂಪತ್ತಿನ ಮದ ನೆತ್ತಿಗೇರಿದೆ. ಶಾಸಕ ಗಣೇಶ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ದರ್ಪ ಮೆರೆದಿದ್ದಾರೆ. ಜನಪ್ರತಿನಿಧಿಯಾದವರು ಒಬ್ಬ ವ್ಯಕ್ತಿಯಿಂದ ಗೆಲ್ಲುವುದಿಲ್ಲ, ಕ್ಷೇತ್ರದ ಇಡೀ ಜನತೆಯ ಆಶೀರ್ವಾದದಿಂದ ಗೆದ್ದಿರುತ್ತಾರೆ ಎಂಬ ಸೌಜನ್ಯವನ್ನೂ ಮರೆತಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದರು.
ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ತಂಗಡಗಿ, ಜನಾರ್ದನರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, "ನಾನು ಯಾರ ತಂಟೆಗೂ ಹೋಗುವುದಿಲ್ಲ, ಆದರೆ ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜನಾರ್ದನರೆಡ್ಡಿ ತಮ್ಮನ್ನು ಏಕವಚನದಲ್ಲಿ ಸಂಬೋಧಿಸಿರುವುದನ್ನು ಪ್ರಬಲವಾಗಿ ವಿರೋಧಿಸಿದರು.
ನಾನು ಅವರಿಗೆ 'ಅಣ್ಣ-ತಮ್ಮಾ' ಎಂದು ಗೌರವಯುತವಾಗಿ ಉತ್ತರಿಸಿದ್ದೇನೆ. ಆದರೆ ಅವರು ಹಳೆಯ ವಿಡಿಯೋ ಹುಡುಕಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಕಳೆದ ಆನೆಗೊಂದಿ ಉತ್ಸವದಲ್ಲಿ ನನ್ನನ್ನು ಹೊಗಳಿದ ವಿಡಿಯೋವನ್ನೂ ಅವರು ಬಿಡುಗಡೆ ಮಾಡಲಿ. ನಾನು ಮಾಡಿದ ಸಹಾಯದ ಬಗ್ಗೆಯೂ ಅವರು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ತಮ್ಮ ಜಮೀನು ಮಾರಾಟದ ಸಂದರ್ಭದಲ್ಲಿ ಜನಾರ್ದನರೆಡ್ಡಿ ಆಪ್ತರಿಂದ ಪಡೆದ ಸಹಾಯದ ಬಗ್ಗೆ ಉಲ್ಲೇಖಿಸಿದ ತಂಗಡಗಿ, "ನಾನು ನನಗೆ ಸಹಾಯ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದೇನೆ. ಆದರೆ, ಈಗ ಅದೇ ವಿಷಯವನ್ನು ಹಿಡಿದುಕೊಂಡು ಕನಕಗಿರಿ ಕ್ಷೇತ್ರದ ಜನರನ್ನು ನಾನೇ ಸಾಕಿದ್ದೇನೆ, ತಂಗಡಗಿಯನ್ನು ನಾನೇ ಸಲುಹಿದ್ದೇನೆ ಎಂದು ಹೇಳುತ್ತಿರುವುದು ಅಸಭ್ಯ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಸಚಿವರು ಜಾನಪದ ಹಾಡೊಂದನ್ನು ನೆನಪಿಸಿಕೊಂಡು ಜನಾರ್ದನರೆಡ್ಡಿ ಅವರಿಗೆ ಚಾಟಿ ಬೀಸಿದರು. "ಕೊಟ್ಟು ಹಂಗಿಸಬೇಡ, ಕೊಟ್ಟು ಕುದಿಯಲು ಬೇಡ, ಎಷ್ಟುಂಡರೆಂದು ಅನಬೇಡ..." ಈ ಜನಪದದ ಸಾಲುಗಳನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು, "ಯಾರೇ ಆಗಲಿ ಕೊಟ್ಟ ನಂತರ 'ಯಾಕೆ ಕೊಟ್ಟೆ' ಎಂದು ಮನಸ್ಸಿನಲ್ಲಿ ಕುದಿಯಬಾರದು. ಊಟ ಹಾಕಿದ ಮೇಲೆ 'ಎಷ್ಟು ತಿಂದಾನಲ್ಲ' ಎಂದು ಹೀಯಾಳಿಸಬಾರದು. ಕೊಟ್ಟಿದ್ದು ಶಿವನ ಪಾದಕ್ಕೆ ಸಲ್ಲಿಸಿದಂತೆ ಇರಬೇಕು. ಈ ಸಂಸ್ಕೃತಿಯನ್ನು ರೆಡ್ಡಿ ಅರ್ಥ ಮಾಡಿಕೊಳ್ಳಲಿ" ಎಂದು ವ್ಯಂಗ್ಯವಾಡಿದರು.
ಜನಾರ್ದನರೆಡ್ಡಿ ವಿಷಯದ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧವೂ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಹೊರಟಿರುವುದನ್ನು ಜನಸಾಮಾನ್ಯರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಎಂದು ಕಿಡಿಕಾರಿದರು. "ಡಿಜಿಟಲ್ ಇಂಡಿಯಾ ಎಂದು ಜನರನ್ನು ಬರ್ಬಾದ್ ಮಾಡುತ್ತಿದ್ದಾರೆ.
2000 ರೂಪಾಯಿಗಿಂತ ಹೆಚ್ಚಿನ ವಹಿವಾಟಿಗೆ ಶುಲ್ಕ ವಿಧಿಸುವುದು ವರ್ತಕರಿಗೆ ಬರೆ ಎಳೆದಂತೆ. ವರ್ತಕರು ಆ ಹೊರೆಯನ್ನು ತಮ್ಮ ಜೇಬಿನಿಂದ ಹಾಕುವುದಿಲ್ಲ, ಅಂತಿಮವಾಗಿ ಅದನ್ನು ಜನಸಾಮಾನ್ಯರ ಮೇಲೆಯೇ ವರ್ಗಾಯಿಸುತ್ತಾರೆ. ಜನಸಾಮಾನ್ಯರಿಗೆ ಶುಲ್ಕವಿಲ್ಲ ಎಂದು ಹೇಳುವುದು ಕೇವಲ ಕಣ್ಣೊರೆಸುವ ತಂತ್ರ" ಎಂದು ಮೋದಿ ಸರ್ಕಾರದ ನೀತಿಗಳನ್ನು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



