ರಾಜಕೀಯ

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ; ರಾಜೀನಾಮೆ ನೀಡದಂತೆ ಆಗ್ರಹ..!

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನುವ ಸುದ್ದಿಗಳ ನಡುವೆ, ಸಿದ್ದರಾಮಯ್ಯ ಪರ ಸಚಿವರು, ಶಾಸಕರು ಮತ್ತು ಬೆಂಬಲಿಗರು ಬುಧವಾರ ದಿನಪೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ, ಯಾವುದೇ ಕಾರಣಕ್ಕೂ ಹುದ್ದೆ ತೊರೆಯಬಾರದು ಎಂದು ಒತ್ತಾಯಿಸಿದ್ದಾರೆ.

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ; ರಾಜೀನಾಮೆ ನೀಡದಂತೆ ಆಗ್ರಹ..!
ವಿಧಾನಸೌಧದಲ್ಲಿ ಬುಧವಾರ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಿದ ನಂತರ ಸಿಎಂ ಸಿದ್ದರಾಮಯ್ಯ ತೆರಳಿದ ದೃಶ್ಯ. — Express photo | Nagaraja Gadekal
Published On :

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತಾರಕಕ್ಕೇರಿರುವ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನುವ ಸುದ್ದಿಗಳ ನಡುವೆ, ಸಿದ್ದರಾಮಯ್ಯ ಪರ ಸಚಿವರು, ಶಾಸಕರು ಮತ್ತು ಬೆಂಬಲಿಗರು ಬುಧವಾರ ದಿನಪೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ, ಯಾವುದೇ ಕಾರಣಕ್ಕೂ ಹುದ್ದೆ ತೊರೆಯಬಾರದು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಇಂದು ಸಿದ್ದರಾಮಯ್ಯ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬುಧವಾರ ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಪುಣ್ಯತಿಥಿ ಅಂಗವಾಗಿ ಗೌರವ ನಮನ ಸಲ್ಲಿಸಿದ ಸಿದ್ದರಾಮಯ್ಯ, ನಂತರ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ-ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿದರು. ದಿನವಿಡೀ ರಾಜಕೀಯ ಬೆಳವಣಿಗೆಗಳ ಬಗ್ಗೆ ಮೌನ ವಹಿಸಿದ್ದ ಅವರು, “ಗುರುವಾರ ಮಾತನಾಡುತ್ತೇನೆ” ಎಂಬ ಒಂದು ಮಾತನ್ನು ಮಾತ್ರ ಹೇಳಿದರು.

ಈ ನಡುವೆ ಸಿದ್ದರಾಮಯ್ಯರನ್ನು ಭೇಟಿಯಾದ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ, “ಪಕ್ಷದ ಹೈಕಮಾಂಡ್‌ಗೆ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಕೂಡ ಮುಖ್ಯಮಂತ್ರಿ ನಿವಾಸದಲ್ಲಿ ಸಭೆ ನಡೆದಿರುವುದನ್ನು ದೃಢಪಡಿಸಿದರೂ, ನಾಯಕತ್ವ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಅಹಿಂದ ನಾಯಕನಾದ ಸಿದ್ದರಾಮಯ್ಯರನ್ನು ದಿಢೀರ್ ಬದಲಾಯಿಸಿದರೆ ಅವರ ಬೆಂಬಲಿಗರ ಅಸಮಾಧಾನ ಎದುರಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿದೆ ಎನ್ನಲಾಗಿದೆ.

ಈ ನಡುವೆ ಇಂದು ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಬ್ರೇಕ್‌ಫಾಸ್ಟ್ ಸಭೆ ನಡೆಸಲಿರುವ ಸಿದ್ದರಾಮಯ್ಯ, ಬಳಿಕ ತಮ್ಮ ರಾಜೀನಾಮೆ ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಅವರು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಲು ಸಮಯ ಕೋರಿದ್ದಾರೆ.

ದೆಹಲಿ ಪ್ರವಾಸ ಮುಗಿಸಿ ಮಂಗಳವಾರ ರಾತ್ರಿ ತಡವಾಗಿ ಬೆಂಗಳೂರಿಗೆ ಮರಳಿದ ಸಿದ್ದರಾಮಯ್ಯ, ತಮ್ಮ ಜೊತೆಗಿದ್ದ ಸಚಿವರೊಂದಿಗೆ ರಾತ್ರಿ 2 ಗಂಟೆಯವರೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬಹುತೇಕ ಸಚಿವರು “ರಾಜೀನಾಮೆ ನೀಡಬೇಡಿ” ಎಂದು ಸಲಹೆ ನೀಡಿದ್ದು, ಸಿದ್ದರಾಮಯ್ಯ ಪರ ಶಾಸಕರ ಸಹಿ ಸಂಗ್ರಹಿಸಿ ಹೈಕಮಾಂಡ್‌ಗೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೆ, ತಮ್ಮ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗಬಹುದು ಎಂಬ ಆತಂಕ ಕೆಲ ಸಚಿವರಲ್ಲಿ ಇದೆ ಎಂದು ಹೇಳಲಾಗುತ್ತಿದೆ.

ಸಚಿವರಾದ ಜಮೀರ್ ಅಹ್ಮದ್ ಖಾನ್, ಡಾ. ಎಚ್‌.ಸಿ. ಮಹದೇವಪ್ಪ, ಡಾ. ಎಂ.ಸಿ. ಸುಧಾಕರ್, ಸಂತೋಷ್ ಲಾಡ್, ಎಂ.ಬಿ. ಪಾಟೀಲ್, ಆರ್‌.ಬಿ. ತಿಮ್ಮಾಪುರ, ಕೆ.ಜೆ. ಜಾರ್ಜ್ ಮತ್ತು ಕೆ. ವೆಂಕಟೇಶ್ ಸೇರಿದಂತೆ ಹಲವರು ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ನಡೆಸಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬಂದ ನೂರಾರು ಬೆಂಬಲಿಗರು ಕೂಡ ನಿವಾಸದ ಮುಂದೆ ಜಮಾಯಿಸಿ “ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು” ಎಂದು ಘೋಷಣೆ ಕೂಗಿದ್ದಾರೆ.

ಇನ್ನೊಂದೆಡೆ, ಸಿದ್ದರಾಮಯ್ಯ ಅವರು ದಲಿತ ಕೋಟಾದಡಿ ಸಿಎಂ ಅಭ್ಯರ್ಥಿಯಾಗಿ ಮುಂದಿರಿಸಿದ್ದಾರೆ ಎನ್ನಲಾಗುತ್ತಿರುವ ಗೃಹ ಸಚಿವ ಜಿ.ಪರಮೇಶ್ವರ್ ತಮ್ಮ ಸದಾಶಿವನಗರ ನಿವಾಸದಲ್ಲಿ ಕಳೆದ ಐದು ದಿನಗಳಿಂದ ಹೋಮ-ಹವನಗಳಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಅವರು ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.