ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!
ಪಕ್ಷದ ಉನ್ನತ ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ನಡೆದ ಮಹತ್ವದ ಸಮಾಲೋಚನೆಗಳ ಬಳಿಕ ಕಾಂಗ್ರೆಸ್ ನಾಯಕತ್ವ ಡಿಕೆ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಬಗ್ಗೆ ಒಲವು ತೋರಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುದ್ದೆಯಿಂದ ಕೆಳಗಿಳಿಯಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆಯತ್ತ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.
ಪಕ್ಷದ ಉನ್ನತ ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ನಡೆದ ಮಹತ್ವದ ಸಮಾಲೋಚನೆಗಳ ಬಳಿಕ ಕಾಂಗ್ರೆಸ್ ನಾಯಕತ್ವ ಡಿಕೆ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಬಗ್ಗೆ ಒಲವು ತೋರಿದೆ ಎಂದು ತಿಳಿದುಬಂದಿದೆ.
ರಾಜ್ಯದ ನೇತೃತ್ವ ವಹಿಸುವಂತೆ ನೀಡಲಾಗಿದ್ದ ಪ್ರಸ್ತಾಪವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಯಸ್ಸು ಹಾಗೂ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ವರ್ಷಗಳ ಅವಧಿಗೆ ಹಂಚಿಕೊಳ್ಳುವ ಒಪ್ಪಂದವಿತ್ತು ಎಂಬ ಚರ್ಚೆ ಬಹುಕಾಲದಿಂದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು.
ಈ ಹಿನ್ನೆಲೆಯಲ್ಲಿ ಪಕ್ಷ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂಬ ನಿಲುವಿಗೆ ಕಾಂಗ್ರೆಸ್ ಸಂಸದೆಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಳೆದ ಕೆಲ ತಿಂಗಳುಗಳಿಂದ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ನಡೆದ ಆಂತರಿಕ ಭಿನ್ನಾಭಿಪ್ರಾಯಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಈ ಹಿನ್ನಲೆಯಲ್ಲಿ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬುವುದು ಹಾಗೂ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ತಂದುಕೊಡುವ ಜವಾಬ್ದಾರಿಯನ್ನು ಶಿವಕುಮಾರ್ ಅವರಿಗೆ ವಹಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಇದೇ ವೇಳೆ ಡಿಕೆ ಶಿವಕುಮಾರ್ ಅವರು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಕ ಹಾಗೂ ಜ್ಯೋತಿಷಿ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ (ಗುರುಜಿ) ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗುರೂಜಿ, “ಮುಖ್ಯಮಂತ್ರಿಯಾಗಿ ನೇಮಕ ಕುರಿತ ಅಧಿಕೃತ ಘೋಷಣೆಗೆ ಶಿವಕುಮಾರ್ ಕಾಯುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯದಲ್ಲಿ 33 ಪ್ರತಿಶತ ಮೀಸಲಾತಿ, ಭ್ರಷ್ಟಾಚಾರ ನಿಯಂತ್ರಣ, ಉತ್ತಮ ಆಡಳಿತ ಹಾಗೂ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತ ಅಂತಿಮ ತೀರ್ಮಾನಕ್ಕಾಗಿ ರಾಜಕೀಯ ವಲಯ ಕಾತರದಿಂದ ಕಾಯುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



