ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ: ಬೆಂಗಳೂರಿನಲ್ಲಿ ನಡೆದ 'ಒನ್ ಆನ್ ಒನ್' ಮೀಟಿಂಗ್ ನಂತರ ರಾಧಾ ಮೋಹನ್ ಅಗರ್ವಾಲ್ ಹೇಳಿದ್ದೇನು?
ರಾಜ್ಯ ನಾಯಕತ್ವದ ಕುರಿತು ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸುವ ಈ ಪ್ರಕ್ರಿಯೆ, ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಅನುಸರಿಸುವ ಸಾಮಾನ್ಯ ಕ್ರಮ ಎಂದು ಹೇಳಲಾಗಿದೆ.

ಬೆಂಗಳೂರು: ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರಿಗೆ ಎರಡನೇ ಅವಧಿ ಸಿಗುವ ಸಾಧ್ಯತೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್ ನಿರಾಕರಿಸಲಿಲ್ಲ.
ಆದರೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಶಿವಪ್ರಕಾಶ್ ಮತ್ತು ಬೈಜಯಂತ್ ಪಾಂಡಾ ಅವರು ಕೋರ್ ಸಮಿತಿ ಸದಸ್ಯರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂಸದರನ್ನು ಒಳಗೊಂಡ 31 ಆಯ್ದ ನಾಯಕರೊಂದಿಗೆ ನಡೆಸಿದ ರಹಸ್ಯ ಸಭೆಯಲ್ಲಿ, ಅನೇಕ ನಾಯಕರು ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ನಾಯಕತ್ವದ ಕುರಿತು ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸುವ ಈ ಪ್ರಕ್ರಿಯೆ, ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಅನುಸರಿಸುವ ಸಾಮಾನ್ಯ ಕ್ರಮ ಎಂದು ಹೇಳಲಾಗಿದೆ.
ಮೊದಲ ಬಾರಿಗೆ ಶಾಸಕರಾದ ವಿಜಯೇಂದ್ರ ಅವರನ್ನು 2023ರ ಮೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಸೋಲು ಅನುಭವಿಸಿದ ಬಳಿಕ, 2023ರ ನವೆಂಬರ್‌ನಲ್ಲಿ ಪಕ್ಷದ ಹೈಕಮಾಂಡ್ ನೇರವಾಗಿ ರಾಜ್ಯಾಧ್ಯಕ್ಷರಾಗಿ ನೇಮಿಸಿತ್ತು. ಈ ನೇಮಕಕ್ಕೆ ಕೆಲ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
ನಿನ್ನೆ ಸಭೆಯಲ್ಲಿ ಕೆಲ ನಾಯಕರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಜಯೇಂದ್ರ ವಿಫಲರಾಗಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿ, ವಿವಿಧ ಸಮುದಾಯಗಳಿಂದ ಪರ್ಯಾಯ ಹೆಸರುಗಳನ್ನು ಸೂಚಿಸಿದ್ದಾರೆ. ಮತ್ತೊಂದೆಡೆ ವಿಜಯೇಂದ್ರ ಬೆಂಬಲಿಗರು, 2028ರ ವಿಧಾನಸಭಾ ಚುನಾವಣೆಯವರೆಗೆ ಅವರನ್ನು ಮುಂದುವರಿಸಬೇಕು ಎಂದು ವಾದಿಸಿದ್ದಾರೆ.
ಈಗ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸೂಕ್ತ ಪ್ರಕ್ರಿಯೆ ಅನುಸರಿಸುವುದೇ ಸರಿಯಾದ ಮಾರ್ಗ ಎಂದು ಪಕ್ಷದೊಳಗೆ ಅಭಿಪ್ರಾಯ ಮೂಡಿರುವುದಾಗಿ ಹೇಳಲಾಗಿದೆ. ಶಿವಪ್ರಕಾಶ್ ಮತ್ತು ಬೈಜಯಂತ್ ಪಾಂಡಾ ರಾಷ್ಟ್ರೀಯ ನಾಯಕತ್ವಕ್ಕೆ ವರದಿ ಸಲ್ಲಿಸಲಿದ್ದು, ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ.
ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯದಲ್ಲಿ ಕೇವಲ ತಾತ್ಕಾಲಿಕ ಅಧ್ಯಕ್ಷರಿದ್ದಾರೆ ಎಂಬ ಮಾತನ್ನು ತಳ್ಳಿಹಾಕಿದರು. ನಮಗೆ ಪೂರ್ಣ ಪ್ರಮಾಣದ ರಾಜ್ಯಾಧ್ಯಕ್ಷರಿದ್ದಾರೆ, ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿರುವವರು ಶಕ್ತಿಶಾಲಿ ನಾಯಕರು. ಅವರು ಮುಂದುವರಿದರೂ ಅಥವಾ ಹೊಸಬರು ಆಯ್ಕೆಯಾದರೂ ಅದೇ ಶಕ್ತಿ ಮುಂದುವರಿಯುತ್ತದೆ ಎಂದು ಹೇಳಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವರೋ ಇಲ್ಲವೋ ಎಂಬುದನ್ನು ಇಲ್ಲಿ ನಿರ್ಧರಿಸಲಾಗುವುದಿಲ್ಲ. ಬಿಜೆಪಿಯಲ್ಲಿ ನಾಯಕರ ಕಾರ್ಯಕ್ಷಮತೆಯ ಮೌಲ್ಯಮಾಪನ ನಿರಂತರ ಪ್ರಕ್ರಿಯೆಯಾಗಿದೆ. ಪ್ರತಿಯೊಬ್ಬ ನಾಯಕ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ನಾಯಕತ್ವ ಇಲ್ಲಿಗೆ ಬರಬೇಕಾಗಿಲ್ಲ. ರಾಜ್ಯ ಉಸ್ತುವಾರಿಯಾಗಿ ನಾನು ನಾಯಕತ್ವಕ್ಕೆ ಮಾಹಿತಿ ನೀಡುತ್ತೇನೆ. ನಾನು ಬಿಜೆಪಿ ಪಕ್ಷದ ಕಾರ್ಯಕರ್ತ, ರಾಜ್ಯಾಧ್ಯಕ್ಷರ ಕಾರ್ಯಕರ್ತನಲ್ಲ ಎಂದು ಹೇಳಿದರು.
ರಾಜ್ಯ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದಾಗ ಹೊಸ ತಂಡವನ್ನೂ ರಚಿಸಲಾಗುತ್ತದೆ. ತೃಪ್ತಿಕರವಾಗಿ ಕೆಲಸ ಮಾಡಿದವರನ್ನು ಉಳಿಸಿಕೊಳ್ಳುತ್ತೇವೆ, ಕಾರ್ಯಕ್ಷಮತೆ ತೋರದವರನ್ನು ಬದಲಿಸುತ್ತೇವೆ ಎಂದು ಅಗರ್ವಾಲ್ ಹೇಳಿದರು.
2028ರ ವಿಧಾನಸಭಾ ಚುನಾವಣೆಯವರೆಗೆ ವಿಜಯೇಂದ್ರ ಅಧ್ಯಕ್ಷರಾಗಿರಬಹುದೇ ಎಂಬ ಪ್ರಶ್ನೆಗೆ, 2028ರಲ್ಲಿ ಯಾರು ಅಧ್ಯಕ್ಷರಾಗಿರುತ್ತಾರೋ ಅವರ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸುತ್ತದೆ. ಬಿಜೆಪಿಯಲ್ಲಿ ಮೂರು ವರ್ಷದ ನಿಗದಿತ ಅವಧಿ ಇಲ್ಲ. ಆದರೆ ಒಬ್ಬ ಅಧ್ಯಕ್ಷರು ಗರಿಷ್ಠ ಎರಡು ಅವಧಿಗಳವರೆಗೆ ಸೇವೆ ಸಲ್ಲಿಸಬಹುದು ಎಂದು ಹೇಳುವ ಮೂಲಕ ವಿಜಯೇಂದ್ರ ಅವರಿಗೆ ಎರಡನೇ ಅವಧಿಗೆ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಸುಳಿವು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.





