ಆಂತರಿಕ ಕಿತ್ತಾಟ, ಉಪ ಚುನಾವಣೆಗಳಲ್ಲಿ ಸತತ ಸೋಲು: ಕರ್ನಾಟಕ ಬಿಜೆಪಿಗೆ ತಲೆನೋವು
2028ರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ಮತ್ತು 2024ರಿಂದ ನಡೆದ ಸರಣಿ ಉಪಚುನಾವಣೆ ಸೋಲುಗಳು ರಾಜ್ಯ ಘಟಕಕ್ಕೆ ದೊಡ್ಡ ತಲೆನೋವಾಗಿವೆ.

ಬೆಂಗಳೂರು: 2028ರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ಮತ್ತು 2024ರಿಂದ ನಡೆದ ಸರಣಿ ಉಪಚುನಾವಣೆ ಸೋಲುಗಳು ರಾಜ್ಯ ಘಟಕಕ್ಕೆ ದೊಡ್ಡ ತಲೆನೋವಾಗಿವೆ. ವಿವಿಧ ಬಣಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವುದು ಕೇಸರಿ ಪಕ್ಷದ ಹಿರಿಯ ನಾಯಕರಿಗೆ ದೊಡ್ಡ ಸವಾಲಾಗಿದೆ.
2024ರಿಂದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಈ ಎಲ್ಲಾ ಕ್ಷೇತ್ರಗಳಲ್ಲೂ ಆಡಳಿತಾರೂಢ ಕಾಂಗ್ರೆಸ್ ಜಯ ಸಾಧಿಸಿದೆ. ಬಿಜೆಪಿಯೊಂದಿಗೆ ಮೈತ್ರಿಯಲ್ಲಿದ್ದ ಜೆಡಿಎಸ್ ಕೂಡ ಈ ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳು ಮೈತ್ರಿ ವ್ಯಾಪ್ತಿಯಲ್ಲಿದ್ದರೂ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ಲೋಕಸಭೆಗೆ ಆಯ್ಕೆಯಾದ ಬಳಿಕ ತಮ್ಮ ವಿಧಾನಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
ಕೆಲ ಬಿಜೆಪಿ ನಾಯಕರ ಪ್ರಕಾರ, ಆಡಳಿತದಲ್ಲಿರುವ ಪಕ್ಷವೇ ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಗೆಲ್ಲುತ್ತದೆ. ಆದರೆ ಬಿಜೆಪಿಯ ಮೂಲಗಳ ಪ್ರಕಾರ, ಪಕ್ಷದ ಸೋಲಿಗೆ ಪ್ರಮುಖ ಕಾರಣ ನಾಯಕರ ನಡುವಿನ ಆಂತರಿಕ ಕಿತ್ತಾಟ.
ಕೆಲ ಹಿರಿಯ ನಾಯಕರು ಪಕ್ಷದ ರಾಜ್ಯ ನಾಯಕತ್ವದೊಂದಿಗೆ ಹೊಂದಾಣಿಕೆಯಲ್ಲಿ ಇಲ್ಲ. ಪಕ್ಷದ ಯಾವುದೇ ಸಾಧನೆಗೆ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಶ್ರೇಯಸ್ಸು ಸಿಗಬಾರದು ಎನ್ನುವುದು ಅವರ ಉದ್ದೇಶ. ವಿಜಯೇಂದ್ರ ಎಲ್ಲರನ್ನು ಒಳಗೊಂಡು ನಡೆಯುತ್ತಿಲ್ಲ ಎಂಬ ಅಸಮಾಧಾನದಿಂದ ಈ ಅಂತರ ಇನ್ನಷ್ಟು ಹೆಚ್ಚಾಗಿದೆ. ಇದರಿಂದ ಕಾಂಗ್ರೆಸ್‌ಗೆ ಉಪಚುನಾವಣೆಗಳಲ್ಲಿ ಲಾಭವಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪ್ರತಿನಿಧಿಗೆ ತಿಳಿಸಿದ್ದಾರೆ.
2023ರ ಮೇ ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮೊದಲ ಉಪಚುನಾವಣೆ 2024ರ ಮೇನಲ್ಲಿ ಸುರಪುರದಲ್ಲಿ ನಡೆದಿತ್ತು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದರು.
ನಂತರ ನವೆಂಬರ್‌ನಲ್ಲಿ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದವು. ಈ ಕ್ಷೇತ್ರಗಳ ಶಾಸಕರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಚುನಾವಣೆ ಅನಿವಾರ್ಯವಾಗಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಸೋತರು. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡರು. ಸಂಡೂರನ್ನು ಕಾಂಗ್ರೆಸ್ ತನ್ನದಾಗಿಯೇ ಉಳಿಸಿಕೊಂಡಿತು.
ಇತ್ತೀಚೆಗೆ ನಡೆದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭಾರೀ ಅಂತರದಿಂದ ಗೆದ್ದರೆ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ 5,700 ಮತಗಳ ಅಂತರದಿಂದ ಜಯಿಸಿದರು.
ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್, ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೂರುರಿಂದ ನಾಲ್ಕು ತಿಂಗಳ ಹಣವನ್ನು ಮಹಿಳಾ ಫಲಾನುಭವಿಗಳಿಗೆ ಬಿಡುಗಡೆ ಮಾಡಿತು.
“ಬಿಜೆಪಿ ಗೆದ್ದರೆ ಈ ಯೋಜನೆ ನಿಲ್ಲಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಮಹಿಳೆಯರನ್ನು ಬೆದರಿಸಿದ್ದಾರೆ,” ಎಂದು ಅವರು ಆರೋಪಿಸಿದರು.
ಆಡಳಿತಾರೂಢ ಕಾಂಗ್ರೆಸ್ ವಿವಿಧ ಸಮುದಾಯಗಳ ಮತದಾರರಿಗೆ ಹಣ ಹಂಚಿದೆ ಎಂದೂ ಅವರು ಆರೋಪಿಸಿದರು. ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 15 ದಿನಗಳ ಕಾಲ ತಂಗಿದ್ದರು ಎಂದರು.
ಬಿಜೆಪಿಯ ಮೂಲಗಳ ಪ್ರಕಾರ, 2028ರ ವಿಧಾನಸಭಾ ಚುನಾವಣೆಯವರೆಗೆ ದೆಹಲಿಯ ಹಿರಿಯ ಬಿಜೆಪಿ ನಾಯಕರು ಕರ್ನಾಟಕಕ್ಕೆ ಪದೇ ಪದೇ ಭೇಟಿ ನೀಡಲಿದ್ದಾರೆ. ಚುನಾವಣಾ ತಂತ್ರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿತ್ರದುರ್ಗದಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಇನ್ನೊಂದೆಡೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿದ್ದಾಗ 15 ಕ್ಷೇತ್ರಗಳ ಉಪಚುನಾವಣೆಗಳನ್ನು ಗೆದ್ದಿತ್ತು. ಆದರೆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಆದ್ದರಿಂದ ಉಪಚುನಾವಣೆ ಫಲಿತಾಂಶಗಳನ್ನು ವಿಧಾನಸಭಾ ಚುನಾವಣೆಯ ಮಾನದಂಡವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




