ಮರು ಮತ ಎಣಿಕೆಯಲ್ಲಿ ಅಂಚೆ ಮತಪತ್ರಗಳನ್ನು ತಿರುಚಲಾಗಿದೆ: ಶಾಸಕ ಟಿ.ಡಿ ರಾಜೇಗೌಡ
ಸ್ಟ್ರ್ಯಾಂಗ್‌ರೂಮ್‌ನಲ್ಲಿ ಸಂರಕ್ಷಿಸಲಾದ ಬಾಕ್ಸ್ ಗಳನ್ನು ಪರಿಶೀಲಿಸಿದ ವೇಳೆ ಬೀಗ ಒಡೆದಿರುವುದು, ಟ್ರಂಕ್‌ಗಳನ್ನೇ ಮುರಿದಿರುವುದು ಕಂಡು ಬಂದಿದೆ.

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಅಂಚೆ ಮತಪತ್ರಗಳನ್ನು ತಿರುಚಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.
ಅಂಚೆ ಮತಪತ್ರಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್ ಅವರು ಮುನ್ನಡೆ ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟ್ರ್ಯಾಂಗ್‌ರೂಮ್‌ನಲ್ಲಿ ಸಂರಕ್ಷಿಸಲಾದ ಬಾಕ್ಸ್ ಗಳನ್ನು ಪರಿಶೀಲಿಸಿದ ವೇಳೆ ಬೀಗ ಒಡೆದಿರುವುದು, ಟ್ರಂಕ್‌ಗಳನ್ನೇ ಮುರಿದಿರುವುದು ಕಂಡು ಬಂದಿದೆ. ನನಗೆ ಇದ್ದ ಅಂಚೆ ಮತಗಳಲ್ಲಿ ಮತ್ತೊಂದು ಗೆರೆ ಎಳೆಯುವ ಮೂಲಕ ಅದನ್ನು ಅಮಾನ್ಯಗೊಳಿಸಲು ಸಂಚು ನಡೆದಿದೆ.
ಮತಪತ್ರದಲ್ಲಿ ಮತದಾರರು ಬಳಸಿದ ಪೆನ್ನಿಗಿಂತಲೂ ಭಿನ್ನವಾದ ಒಂದೇ ಇಂಕಿನ ಪೆನ್ನನ್ನು ಬಳಸಿ ಗೆರೆ ಎಳೆಯಲಾಗಿದೆ. ನನಗೆ ಬಂದಿದ್ದ ಮತಗಳಲ್ಲಿ 158 ಅಮಾನ್ಯವಾಗಿವೆ. ಈ ಕೃತ್ಯವನ್ನು ಮೂರು ವರ್ಷಗಳ ಹಿಂದೆಯೇ ಮಾಡಲಾಗಿದೆ ಎಂದು ಆರೋಪಿಸಿದರು.
ಮತಗಳನ್ನು ತಿರುಚಿರುವುದರ ವಿರುದ್ಧ ತಾವು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದೇವೆ.ಮತ ಎಣಿಕೆಯ ಪ್ರಕ್ರಿಯೆಗೆ ಕಾಂಗ್ರೆಸ್ ಏಜೆಂಟಾಗಿ ಕೆಲಸ ಮಾಡಿದ್ದ ಸುಧೀರ್‌ಕುಮಾರ್ ಮುರೋಳ್ಳಿ ಮಾತನಾಡಿ, 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನಿಂದ ನಾನು, ಬಿಜೆಪಿಯಿಂದ ಬಿ.ಎ.ಸತೀಶ್, ಜೆಡಿಎಸ್‌ನಿಂದ ಸುಧಾಕರ್ ಶೆಟ್ಟಿ, ಮತ ಏಜೆಂಟರಾಗಿ ಕೆಲಸ ಮಾಡಿದ್ದೆವು. ಆ ವೇಳೆ ಮಾನ್ಯವಾಗಿದ್ದ ಮತಗಳು ಈಗ ಅಮಾನ್ಯವಾಗಿವೆ. ಇದು ಹೇಗೆ ಸಾಧ್ಯ? ದೇಶದ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಈ ರೀತಿಯಾಗಿರುವುದು ಇದೇ ಮೊದಲ ಬಾರಿ ಎಂದರು.
ಇದಕ್ಕೆ ಯಾರು ಹೊಣೆ? 2023ರ ಮತ ಎಣಿಕೆಯಲ್ಲಿ ಏಜೆಂಟ್ ಆಗಿದ್ದ ಸತೀಶ್ ಅವರು ಸರಿಯಾಗಿ ಗಮನಿಸದೇ ಸಹಿ ಹಾಕಿದ್ದರೇ? ಅದೇ ಸತೀಶ್ ಈಗಲೂ ಬಿಜೆಪಿಯಲ್ಲಿದ್ದಾರೆ. ಈ ಮೊದಲು ಬಿಜೆಪಿಯಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಈಗ ಡಿಸಿಸಿ ಸದಸ್ಯರಾಗಿದ್ದಾರೆ. ಆ ವೇಳೆ ಚುನಾವಣಾಧಿಕಾರಿಯಾಗಿ ವೇದಮೂರ್ತಿ ಕೆಲಸ ಮಾಡಿದ್ದರು. ಅವರು ಒಂದು ವೇಳೆ ತಪ್ಪು ಮಾಡಿದ್ದರೆ, ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಎಲ್ಲಿಯೂ ಈ ರೀತಿ ಆಗಬಾರದು ಎಂದು ಹೇಳಿದರು.
ರಾಜೇಗೌಡರ ಮತಗಳು ಮಾತ್ರ ಅಮಾನ್ಯವಾಗಿರುವುದು ಅನುಮಾನಾಸ್ಪದವಾಗಿದೆ. ರಾಜೇಗೌಡರಿಗೆ ಬಂದಿದ್ದ ಅಂಚೆ ಮತಗಳಲ್ಲಿ ಮತ್ತೊಂದು ಗೆರೆಯನ್ನು ಬೇರೆಯ ಪೆನ್ನು ಬಳಸಿ ಎಳೆಯಲಾಗಿದೆ. ಮತ ಪತ್ರಗಳನ್ನು ಅಮಾನ್ಯಗೊಳಿಸುವ ಷಡ್ಯಂತ್ರದಿಂದಲೇ ಈ ರೀತಿ ಮಾಡಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



