ಡಿಕೆಶಿ ಜೊತೆ ಯಾವುದೇ ವ್ಯವಹಾರಿಕ, ಆತ್ಮೀಯತೆಯಿಲ್ಲ, ಅಪಪ್ರಚಾರ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ
ರಾಜ್ಯದ ಬಿಜೆಪಿ ಅಧ್ಯಕ್ಷರು ಮತ್ತು ಡಿ.ಕೆ. ಶಿವಕುಮಾರ್ ಒಂದಾಗಿದ್ದಾರೆ ಎಂಬ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ನನ್ನ ವಿರುದ್ಧ ಯಾರು ಅಪಪ್ರಚಾರ ಮಾಡುತ್ತಿದ್ದಾರೋ ಅವರಿಗೆ ಭಗವಂತ ಒಳ್ಳೆಯ ಬುದ್ಧಿ ನೀಡಲಿ.

ಧರ್ಮಸ್ಥಳ: ಈ ಪವಿತ್ರ ಕ್ಷೇತ್ರದಲ್ಲಿ ನಿಂತು ಮಾತನಾಡುತ್ತಿದ್ದೇನೆ, ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರೊಂದಿಗೆ ಯಾವುದೇ ರೀತಿಯ ವ್ಯವಹಾರಿಕ, ಆತ್ಮೀಯತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ದೆಹಲಿ ಪ್ರವಾಸ ಮುಗಿಸಿ ಶುಕ್ರವಾರ ನೇರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಿ.ವೈ. ವಿಜಯೇಂದ್ರ ಅವರು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಇತ್ತೀಚೆಗೆ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ವಿವಾದದ ಬೆನ್ನಲ್ಲೇ ಅವರ ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರಿಂದ ಆಣೆ-ಪ್ರಮಾಣ ಮಾಡಿಸಲು ಆರಂಭದಲ್ಲಿ ಯೋಜಿಸಲಾಗಿತ್ತು. ಆದರೆ ಪವಿತ್ರ ಕ್ಷೇತ್ರದಲ್ಲಿ ರಾಜಕೀಯ ಕಾರ್ಯಕ್ರಮ ನಡೆಸುವ ವಿಚಾರಕ್ಕೆ ಪಕ್ಷದ ಹಿರಿಯ ನಾಯಕರಿಂದಲೇ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಲಾಯಿತು.
ಈ ಬೆಳವಣಿಗೆಯ ನಂತರ ವಿಜಯೇಂದ್ರ ಅವರು ಒಬ್ಬರೇ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ್ದಾರೆ. ಈ ವೇಳೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಕರಾವಳಿ ಭಾಗದ ಹಲವು ಬಿಜೆಪಿ ಶಾಸಕರು ಉಪಸ್ಥಿತರಿದ್ದರು.
ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದರು.
ನನ್ನ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ಯಾವುದೇ ರೀತಿಯ ವ್ಯವಹಾರವೂ ಇಲ್ಲ, ಆತ್ಮೀಯತೆಯೂ ಇಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ರಾಜಕೀಯ ಸೌಜನ್ಯದಿಂದ ನೀಡಬೇಕಾದ ಗೌರವವನ್ನು ಮಾತ್ರ ನೀಡಿದ್ದೇನೆ. ಅದನ್ನು ಹೊರತುಪಡಿಸಿ ಯಾವುದೇ ವೈಯಕ್ತಿಕ ಅಥವಾ ರಾಜಕೀಯ ಹೊಂದಾಣಿಕೆ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, "ರಾಜ್ಯದ ಬಿಜೆಪಿ ಅಧ್ಯಕ್ಷರು ಮತ್ತು ಡಿ.ಕೆ. ಶಿವಕುಮಾರ್ ಒಂದಾಗಿದ್ದಾರೆ ಎಂಬ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ನನ್ನ ವಿರುದ್ಧ ಯಾರು ಅಪಪ್ರಚಾರ ಮಾಡುತ್ತಿದ್ದಾರೋ ಅವರಿಗೆ ಭಗವಂತ ಒಳ್ಳೆಯ ಬುದ್ಧಿ ನೀಡಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ" ಎಂದರು.
ಅಡ್ಡಮತದಾನ ಕುರಿತು ಮಾತನಾಡಿ, "ನಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದರೂ ಅಡ್ಡಮತದಾನ ನಡೆದಿರುವುದು ನನಗೂ ಮತ್ತು ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೂ ನೋವು ತಂದಿದೆ.
ಫಲಿತಾಂಶದ ಮರುದಿನ ಭಾವನಾತ್ಮಕವಾಗಿ ಶಾಸಕಾಂಗ ಪಕ್ಷದ ಸಭೆಯನ್ನು ಧರ್ಮಸ್ಥಳದಲ್ಲಿ ನಡೆಸಿ, ಶಾಸಕರಿಂದ ಆಣೆ-ಪ್ರಮಾಣ ಮಾಡಿಸಬೇಕು ಎಂದು ಹೇಳಿದ್ದೆ. ಆದರೆ, ಪಕ್ಷದ ಹಿರಿಯರು ನೀಡಿದ ಸಲಹೆಗೆ ಗೌರವ ನೀಡಿ ಆ ನಿರ್ಧಾರವನ್ನು ಕೈಬಿಟ್ಟಿದ್ದೇನೆ" ಎಂದು ಹೇಳಿದರು.
ಬಳಿಕ ಧರ್ಮಸ್ಥಳ ಭೇಟಿ ಸಂಪೂರ್ಣವಾಗಿ ಧಾರ್ಮಿಕ ನಂಬಿಕೆ ಮತ್ತು ವೈಯಕ್ತಿಕ ಪ್ರಾರ್ಥನೆಗಾಗಿ ಎಂದು ಹೇಳಿದ ವಿಜಯೇಂದ್ರ, ಪಕ್ಷದ ಹಿರಿಯರ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವತ್ತ ಗಮನಹರಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



