ರಾಜಕೀಯ

ಕ್ರಾಸ್ ವೋಟಿಂಗ್: ಬಿ.ವೈ ವಿಜಯೇಂದ್ರ, ಆರ್ ಅಶೋಕಗೆ ಹೈಕಮಾಂಡ್ ಬುಲಾವ್; ಯಾರ ತಲೆದಂಡವಾಗುತ್ತೆ?

ವಿಧಾನ ಪರಿಷತ್ 7 ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ 11 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಇದನ್ನು ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್. ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ.

ಕ್ರಾಸ್ ವೋಟಿಂಗ್: ಬಿ.ವೈ ವಿಜಯೇಂದ್ರ, ಆರ್ ಅಶೋಕಗೆ ಹೈಕಮಾಂಡ್ ಬುಲಾವ್; ಯಾರ ತಲೆದಂಡವಾಗುತ್ತೆ?
ಬಿವೈ ವಿಜಯೇಂದ್ರ ಮತ್ತು ಆರ್ ಅಶೋಕ್
Published On :

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನ ಶಾಸಕರು ಅಡ್ಡ ಮತದಾನ ಮಾಡಿದ್ದಕ್ಕೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರಿಗೆ ಜೂನ್ 23 ರಂದು ದೆಹಲಿಗೆ ಬರುವಂತೆ ಬುಲಾವ್ ನೀಡಲಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ವಿಧಾನ ಪರಿಷತ್ 7 ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ 11 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಇದನ್ನು ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್. ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ.

ಬಿಜೆಪಿ– ಜೆಡಿಎಸ್‌ ಶಾಸಕರ ಅಡ್ಡ ಮತದಾನ ಮಾಡಿದ ಪರಿಣಾಮ ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ 11 ಮತಗಳು ಬಂದಿದ್ದು ಮೈತ್ರಿಗೆ ಸೋಲು ಮತ್ತು ತೀವ್ರ ಮುಜುಗರ ಉಂಟಾಗಿದೆ.ಇದು ಮುಂದಿನ ದಿನಗಳಲ್ಲಿ ಮೈತ್ರಿ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದ್ದು, ಬಿಜೆಪಿ ಅಡ್ಡ ಮತದಾನ ಮಾಡಿದ್ದಕ್ಕೆ ರಾಜ್ಯ ನಾಯಕರ ಮೇಲೆ ಹೈಕಮಾಂಡ್ ಕೆಂಡಾಮಂಡಲವಾಗಿದ್ದು ವರದಿ ನೀಡುವಂತೆ ಸೂಚಿಸಿದೆ.

ಸಮಿತಿ ರಚನೆ

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಇದರ ತನಿಖೆಗಾಗಿ ಹಾಗೂ ತಪ್ಪಿತಸ್ಥರನ್ನು ಗುರುತಿಸಲು ಸಿ.ಟಿ. ರವಿ, ಎನ್. ಮಹೇಶ್ ಮತ್ತು ಮಹೇಶ್ ಟೆಂಗಿನಕಾಯಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದೆ.

ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಶಾಸಕರು ಅಡ್ಡ ಮತದಾನ ಮಾಡಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನುಂಟುಮಾಡಿದೆ. ಪಕ್ಷದ ನಿರೀಕ್ಷೆಯಂತೆ ಮತಗಳು ಬೀಳದೆ, 4 ರಿಂದ 5 ಬಿಜೆಪಿ ಶಾಸಕರು ಮತ್ತು 6 ರಿಂದ 7 ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

"ನಮ್ಮ ಪಕ್ಷದ ಶಾಸಕರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರನ್ನು ಕ್ಷಮಿಸಲಾಗುವುದಿಲ್ಲ. ಈ ನಾಟಕವನ್ನು ಯಾರು ಆಡಿರಬಹುದು ಎಂಬುದರ ಕುರಿತು ನಮಗೆ ಕೆಲವು ಮಾಹಿತಿಯೂ ಇದೆ" ಎಂದು ಅವರು ಹೇಳಿದರು.

ಪರಿಸ್ಥಿತಿಯ ಬಗ್ಗೆ ವಿವರಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

"ನಾನು ಇಂದು ಬೆಳಗ್ಗೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಅಪಾಯಿಂಟ್ಮೆಂಟ್ ಕೋರಿದ್ದೇನೆ. ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು, ವಿಧಾನ ಪರಿಷತ್ತಿನಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ವಿವರಿಸಲು ನಾನು ಸಮಯ ಕೋರಿದ್ದೇನೆ. ಹೆಚ್ಚಾಗಿ ಇಂದು ಅಥವಾ ಸೋಮವಾರ ಅವರು ಸಮಯ ನೀಡುತ್ತಾರೆ. ನಾನು ಅವರನ್ನು ಭೇಟಿಯಾಗುತ್ತೇನೆ, ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗುತ್ತೇನೆ ಮತ್ತು ಸಂಪೂರ್ಣ ವಿವರಣೆ ನೀಡುತ್ತೇನೆ" ಎಂದು ವಿಜಯೇಂದ್ರ ತಿಳಿಸಿದರು.

ಒಟ್ಟಿನಲ್ಲಿ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ದೋಸ್ತಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್​​ನಲ್ಲಿ ಮಹತ್ವ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಅಂತಿಮವಾಗಿ ಅಡ್ಡಮತದಾನ ಮಾಡಿದವರನ್ನು ಪತ್ತೆ ಮಾಡಿ ಯಾವ ಕ್ರಮಕೈಗೊಳ್ಳುತ್ತಾರೊ ಅಥವಾ ರಾಜ್ಯ ನಾಯಕರ ತಲೆದಂಡವಾಗುತ್ತೆ ಎಂಬುದು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.