ಎರಡು ದಿನ ದೆಹಲಿಯಲ್ಲೇ ಠಿಕಾಣಿ: ಸಚಿವರ ಖಾತೆ ಖ್ಯಾತೆ, ಸಂಪುಟ ವಿಸ್ತರಣೆ ಕುರಿತಂತೆ ಹೈಕಮಾಂಡ್ ಜೊತೆ CM ಶಿವಕುಮಾರ್ ಚರ್ಚೆ!
ಕಾಂಗ್ರೆಸ್ ಸಚಿವರ ಖಾತೆ ಖ್ಯಾತೆ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎರಡು ದಿನಗಳ ಕಾಲ ನವದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ. ಖಾತೆ ಕುರಿತಂತೆ ಕೆಲವು ಸಚಿವರ ಅಸಮಾಧಾನದ ನಡುವೆಯೂ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಷಯಗಳ ಕುರಿತು ಹೈಕಮಾಂಡ್ ಜೊತೆ ಚರ್ಚಿಸುವ ಸಾಧ್ಯತೆ ಇದೆ.

ಬೆಂಗಳೂರು: ಕಾಂಗ್ರೆಸ್ ಸಚಿವರ ಖಾತೆ ಖ್ಯಾತೆ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎರಡು ದಿನಗಳ ಕಾಲ ನವದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ. ಖಾತೆ ಕುರಿತಂತೆ ಕೆಲವು ಸಚಿವರ ಅಸಮಾಧಾನದ ನಡುವೆಯೂ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಷಯಗಳ ಕುರಿತು ಹೈಕಮಾಂಡ್ ಜೊತೆ ಚರ್ಚಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಡಿಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ. ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದು ಕೆಲವು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ನವದೆಹಲಿಗೆ ತೆರಳಲಿರುವ ಡಿಕೆ ಶಿವಕುಮಾರ್ ಮೊದಲಿಗೆ ಎಐಸಿಸಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಂತರ, ಅವರು ಎಐಸಿಸಿ ಕಚೇರಿ ಮತ್ತು ಪಕ್ಷದ ವಿವಿಧ ಮುಂಭಾಗದ ಸಂಸ್ಥೆಗಳ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ ಹಿರಿಯ ಐಎಎಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಗುರುವಾರ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮುಂದಿನ ಸಂಪುಟ ವಿಸ್ತರಣೆಯ ಸಮಯದಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಲಾಬಿ ನಡೆಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಸಂಪುಟಕ್ಕೆ ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಬೇಡಿಕೆ ಇದೆ. ಮೇ 28ರಂದು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜೂನ್ 3ರಂದು ಶಿವಕುಮಾರ್ 13 ಸಚಿವರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೀಗ 20 ಸಚಿವ ಸ್ಥಾನಗಳು ಇನ್ನೂ ಖಾಲಿಯಿದ್ದು, ಅವುಗಳಲ್ಲಿ ಹೆಚ್ಚಿನವು ಈ ತಿಂಗಳ ಅಂತ್ಯದ ವೇಳೆಗೆ ಭರ್ತಿಯಾಗುತ್ತವೆ ಎಂಬ ಊಹಾಪೋಹಗಳು ಹರಡಿವೆ.
ಸಚಿವರ ಖಾತೆ ಖ್ಯಾತೆ
ಬೆಂಗಳೂರಿನ ಎರಡು ಪ್ರಭಾವಿ ಇಲಾಖೆಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್ಡಿಎ) ವನ್ನು ಡಿಕೆ ಶಿವಕುಮಾರ್ ತಮ್ಮಲ್ಲೇ ಇಟ್ಟುಕೊಂಡಿರುವುದರಿಂದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಖಾತೆ ಕುರಿತಂತೆ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರಿನ್ನೂ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಇದಕ್ಕೂ ಮುನ್ನ ನನಗೆ ಜಲಸಂಪನ್ಮೂಲ ಖಾತೆ ಬೇಡ ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ರಾಮಲಿಂಗಾ ರೆಡ್ಡಿ ಪಟ್ಟುಹಿಡಿದಿದ್ದರು. ನಂತರ ರಾಮಲಿಂಗಾ ರೆಡ್ಡಿ ಸಮಾಧಾನಗೊಂಡಿದ್ದರು. ಮತ್ತೊಂದೆಡೆ, ಸಚಿವ ಸಂಪುಟದ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್ ಮುನಿಯಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

'ಟ್ರಬಲ್ ಶೂಟರ್' ಡಿಕೆಶಿಗೆ ಖಾತೆ ಹಂಚಿಕೆ ಟ್ರಬಲ್: ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ಹಾರಿದ ಸಚಿವ ಕೃಷ್ಣ ಬೈರೇಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


