ರಾಮಲಿಂಗಾರೆಡ್ಡಿಗೆ ಮಾತು ಕೊಟ್ಟಿದ್ದು ನಿಜ, ಆದ್ರೆ...: ಖಾತೆ ಕೈತಪ್ಪಲು ಕಾರಣ ಬಿಚ್ಚಿಟ್ಟ ಸಿಎಂ ಡಿ.ಕೆ ಶಿವಕುಮಾರ್; Video
ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮಾರನೇ ದಿನವೇ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿಅವರಿಗೆ ಮಾತು ಕೊಟ್ಟಿದ್ದು ನಿಜ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮಾರನೇ ದಿನವೇ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್‌ನ ಪ್ರಭಾವಿ ಹಾಗೂ ಹಿರಿಯ ನಾಯಕರಾಗಿರುವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಿದ್ದು, ಇದು ರಾಮಲಿಂಗಾರೆಡ್ಡಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರಚನೆ ಸಂದರ್ಭದಲ್ಲಿ ಹೈಕಮಾಂಡ್ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲು ನಿರ್ಧರಿಸಿತ್ತು. ಆದರೆ ಆಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಮಲಿಂಗಾರೆಡ್ಡಿ ಅವರ ಮನವೊಲಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಾನು ಪಡೆಯುತ್ತೇನೆ. ನಾನು ಮುಖ್ಯಮಂತ್ರಿಯಾದ ನಂತರ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೆ ಕೊಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅವರಿಗೆ ಮಾತು ಕೊಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಮಲಿಂಗಾರೆಡ್ಡಿಗೆ ನಾವು ಮಾತು ಕೊಟ್ಟಿದ್ದು ನಿಜ. ನಾನು ನನ್ನ ತಮ್ಮ ಹೋಗಿ ಮಾತು ಕೊಟ್ಟಿದ್ದೇವು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಖಾತೆ ಕೈತಪ್ಪಿರುವುದಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
'ರಾಮಲಿಂಗಾರೆಡ್ಡಿ ಅವರು ಅತ್ಯಂತ ಹಿರಿಯ ನಾಯಕರು. ನಾನು ಅವರಿಗೆ ಒಂದು ಖಾತೆ ನೀಡುವ ಬಗ್ಗೆ ಮಾತು ಕೊಟ್ಟಿದ್ದು ನಿಜ. ಸಾರಿಗೆ ಇಲಾಖೆಯ ಜೊತೆಗೆ ಬೇರೆಯವರುಗೆ ಕೊಟ್ಟಿದ್ದ ಮುಜರಾಯಿ ಖಾತೆಯನ್ನು ಇವರಿಗೆ ಕೊಡಿಸಿದ್ದೆವು. ಆದರೆ ಈಗ ಹೈಕಮಾಂಡ್ ತೀರ್ಮಾನದಂತೆ ಕೃಷ್ಣಬೈರೇಗೌಡರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲಾಗಿದೆ. ಇದಾದ ನಂತರವೂ ನಾನು ರಾಮಲಿಂಗಾರೆಡ್ಡಿ ಅವರ ಪರವಾಗಿ ಖಾತೆ ಕೊಡಿಸಲು ಪ್ರಯತ್ನ ಪಟ್ಟಿದ್ದೆ, ಆದರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು' ಎಂದು ಹೇಳಿದ್ದಾರೆ.
ಸದ್ಯ ರಾಮಲಿಂಗಾರೆಡ್ಡಿಯವರು ಬೆಂಗಳೂರಿನಿಂದ ಹೊರಗಡೆ ಇದ್ದಾರೆ. ಖುದ್ದಾಗಿ ನಾನೇ ಭೇಟಿಯಾಗಿ ಅವರೊಂದಿಗೆ ಮಾತನಾಡ್ತೇನೆ. ಮುನಿಯಪ್ಪ ಜೊತೆ ಮಾತನಾಡಿದ್ದು ಆಯ್ತು, ರಾಹುಲ್‌ಗಾಂಧಿ ಹೇಳಿದ್ದು ಆಯ್ತು. ಮುನಿಯಪ್ಪ ಈಗ ಖುಷಿಯಾಗಿದ್ದಾರೆ. ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.
ಬೆಂಗಳೂರು ರಾಜಕಾರಣದಲ್ಲೇ ತಮ್ಮ ಇಡೀ ಬದುಕನ್ನು ಕಳೆದವರು ರಾಮಲಿಂಗಾರೆಡ್ಡಿ. ಹಾಗಾಗಿ ಅವರು ಈ ಖಾತೆಗಾಗಿ ಪಟ್ಟು ಹಿಡಿದಿರುವುದರಲ್ಲಿ ತಪ್ಪಿಲ್ಲ. ಅವರ ಜೊತೆ ನಾನು ಮಾತನಾಡುತ್ತೇನೆ, ಸಮಜಾಯಿಷಿ ನೀಡುತ್ತೇನೆ. ಅವರ ಮುನಿಸನ್ನು ಶಮನಗೊಳಿಸುವ ಜವಾಬ್ದಾರಿ ನಮ್ಮದು ಎಂದು ಸಿಎಂ ಶಿವಕುಮಾರ್ ಭರವಸೆ ನೀಡಿದ್ದಾರೆ.
ಯಾರ ಸಂಪರ್ಕಕ್ಕೂ ಸಿಗದ ರಾಮಲಿಂಗಾರೆಡ್ಡಿ
ರಾಹುಲ್ ಗಾಂಧಿ, ಸುರ್ಜೆವಾಲ, ವೇಣುಗೋಲಾಲ್, ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬಂದಿದ್ದು, ಕರೆದು ಮನವೊಲಿಸುವ ಯತ್ನ ಮಾಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಾಮಲಿಂಗಾರೆಡ್ಡಿ ಫೋನ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ.
ಮೂಲಗಳ ಪ್ರಕಾರ ಅವರು ಬೆಂಗಳೂರು ಬಿಟ್ಟು ತಮಿಳುನಾಡು ಕಡೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಕೊಟ್ಟ ಮಾತಿನಂತೆ ಖಾತೆ ಕೊಟ್ಟಿಲ್ಲವೆಂದು ಮುನಿಸಿಕೊಂಡಿರುವ ರಾಮಲಿಂಗಾರೆಡ್ಡಿ ಅವರನ್ನು ಸಿಎಂ ಸಮಾಧಾನಪಡಿಸುವ ಮಾತುಗಳನ್ನಾಡಿದ್ದಾರೆ. ಆದ್ರೆ, ರಾಮಲಿಂಗಾರೆಡ್ಡಿ ಮನವೊಲಿಕೆಯಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




