ರಾಜಕೀಯ

ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ; Video

ಡಿ ಕೆ ಶಿವಕುಮಾರ್ ಸಂಪುಟದಲ್ಲಿ ತಾವು ನಿರೀಕ್ಷಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಕ್ಕಿಲ್ಲ ಎಂದು ನೊಂದು ರಾಮಲಿಂಗಾ ರೆಡ್ಡಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ; Video
ರಾಮಲಿಂಗಾ ರೆಡ್ಡಿ
Published On :

ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲಿಯೇ ಬಿಗ್ ಶಾಕ್ ಎದುರಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ತಾವು ನಿರೀಕ್ಷಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಕ್ಕಿಲ್ಲ ಎಂದು ನೊಂದು ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿರುವುದಾಗಿ ಸ್ವತಃ ರಾಮಲಿಂಗಾ ರೆಡ್ಡಿಯವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ತಮ್ಮ ಸಂಪುಟ ಸದಸ್ಯರಿಗೆ ನಿನ್ನೆ ಸಾಯಂಕಾಲ ಖಾತೆ ಹಂಚಿಕೆ ಮಾಡಿದ್ದರು. ಹಿಂದೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಇರಿಸಿಕೊಂಡಿದ್ದ ಡಿ ಕೆ ಶಿವಕುಮಾರ್ ಅವರು 2 ವರ್ಷದ ಬಳಿಕ ತಾವು ಮುಖ್ಯಮಂತ್ರಿಯಾದಾಗ ನಿಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಇಂದು ಮಾತು ಮುರಿದಿದ್ದಾರೆ. ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ, ಬಹಳ ನೊಂದಿದ್ದೇನೆ ಎಂದು ಹೇಳಿ ರಾಮಲಿಂಗಾ ರೆಡ್ಡಿಯವರು ಇಂದು ರಾಜೀನಾಮೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ರಾಮಲಿಂಗಾರೆಡ್ಡಿ ಅವರು, ನಾನು 1973 ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದೆ. ವೀರಪ್ಪ ಮೊಯ್ಲಿ ನನಗೆ ಕರೆದು ಟಿಕೆಟ್ ಕೊಟ್ರು. ಆರು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾರ ಬಳಿಯೂ ಇಂಥಹುದೇ ಖಾತೆ ಕೊಡಿ ಅಂತ ಲಾಬಿ ಮಾಡಿಲ್ಲ. ಅವರೇ ಎರಡು ಬಾರಿ ಕರೆದು ಬೆಂಗಳೂರು ಅಭಿವೃದ್ದಿ ಕೊಡ್ತೀವಿ ಅಂತ ಹೇಳಿ ಈಗ ಕೊಡಲಿಲ್ಲ. ಈ ವಿಚಾರಕ್ಕೆ ಬೇಸರವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

Story image

2 ಬಾರಿ ನನಗೆ ಮೋಸ ಆಗಿದೆ

ಸಿಎಂ ಆಗಿ‌ ಪ್ರಮಾಣವಚನ ಮಾಡುವ ಹಿಂದಿನ ದಿನವೇ ಹೋಗಿ ಭೇಟಿ ಮಾಡಿದ್ದೆ. ನಾನು ಯಾರಿಗೂ ಮಂತ್ರಿ ಮಾಡಿ ಅಂತ ಕೇಳಿಲ್ಲ. ಆದರೆ ಅವರೇ ಕರೆದು ಬೆಂಗಳೂರು ಖಾತೆ ಕೊಡ್ತೀನಿ ಅಂದವರು ಇದೀಗ ಮಾತು ತಪ್ಪಿದ್ದಾರೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.