ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಮೊದಲ ಹಂತದ ಸಂಪುಟ ರಚನೆ: ಸಿದ್ದರಾಮಯ್ಯ ನಿಷ್ಠಾವಂತರಿಗೆ ಮಣೆ
ರಾಜ್ಯದ 31 ಜಿಲ್ಲೆಗಳ ಪೈಕಿ ಕೇವಲ 10 ಜಿಲ್ಲೆಗಳಿಗೆ ಮಾತ್ರ ಮೊದಲ ಹಂತದ ಸಚಿವ ಸಂಪುಟದಲ್ಲಿ ಪ್ರಾತಿನಿಧಿತ್ವ ದೊರೆತಿದೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಹಿರಿಯ ಸಚಿವರಾದ ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್ ಹಾಗೂ ಡಾ. ಹೆಚ್.ಸಿ. ಮಹದೇವಪ್ಪ ಅವರಿಗೆ ಈ ಬಾರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮೊದಲ ಹಂತದ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ.
ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಕಾಂಗ್ರೆಸ್ ಒಬ್ಬ ಮಹಿಳಾ ಶಾಸಕರಿಗೂ ಸಚಿವ ಸ್ಥಾನ ನೀಡಲು ವಿಫಲವಾಗಿದೆ. ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬಂದಿದ್ದರೂ ಅವಕಾಶ ಸಿಗಲಿಲ್ಲ. ಮತ್ತೊಂದೆಡೆ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕನಿಷ್ಠ ನಾಲ್ವರು ಮಹಿಳೆಯರಿಗೆ ಸಚಿವ ಸ್ಥಾನ ನೀಡುವಂತೆ ದೆಹಲಿಯಲ್ಲಿ ತೀವ್ರ ಲಾಬಿ ನಡೆಸಿದ್ದರು.
ರಾಜ್ಯದ 31 ಜಿಲ್ಲೆಗಳ ಪೈಕಿ ಕೇವಲ 10 ಜಿಲ್ಲೆಗಳಿಗೆ ಮಾತ್ರ ಮೊದಲ ಹಂತದ ಸಚಿವ ಸಂಪುಟದಲ್ಲಿ ಪ್ರಾತಿನಿಧಿತ್ವ ದೊರೆತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ನಾಲ್ವರಿಗೆ ಆದ್ಯತೆ ನೀಡಲಾಗಿದೆ. ಅದೇ ವೇಳೆ ಕಲಬುರಗಿ ಜಿಲ್ಲೆಗೆ ಇಬ್ಬರು ಸಚಿವರು — ಪ್ರಿಯಾಂಕ್ ಖರ್ಗೆ ಮತ್ತು ಸೇಡಂ ಶಾಸಕ ಶರಣಪ್ರಕಾಶ ಪಾಟೀಲ್ — ಸ್ಥಾನ ಪಡೆದಿದ್ದಾರೆ.
ಇದರಲ್ಲೂ ಶರಣಪ್ರಕಾಶ ಪಾಟೀಲ್ ಅವರ ಹೆಸರನ್ನು ಕೊನೆಯ ಕ್ಷಣದಲ್ಲಿ ಸೇರಿಸಲಾಗಿದೆ ಎನ್ನಲಾಗಿದ್ದು, ಕುಟುಂಬಪರ ರಾಜಕೀಯ (Nepotism) ಆರೋಪಗಳನ್ನು ತಳ್ಳಿಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಮುಂದಿನ ಸಚಿವ ಸಂಪುಟ ವಿಸ್ತರಣೆ ಇನ್ನು ಸುಮಾರು ಎರಡು ವಾರಗಳಲ್ಲಿ ನಡೆಯುವ ಸಾಧ್ಯತೆ ಇದ್ದು, ಅದರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತರಿಗೆ ಅವಕಾಶ ಕಲ್ಪಿಸುವ ಜೊತೆಗೆ ಪ್ರಾದೇಶಿಕ ಮತ್ತು ಜಾತಿ ಸಮತೋಲನ ಸಾಧಿಸಲು ಪ್ರಯತ್ನಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.
ತಮ್ಮ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ವಿಧಾನಸಭಾ ಸಭಾಧ್ಯಕ್ಷರ ಸ್ಥಾನಕ್ಕೆ ಹೆಚ್.ಕೆ. ಪಾಟೀಲ್ ಅವರ ಹೆಸರು ಪರಿಗಣನೆಯಲ್ಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಈ ನಡುವೆ ಅವರು ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ:
ಜನರು ನನ್ನ ಮೇಲೆ ತೋರಿಸಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಸಿದ್ಧಾಂತಕ್ಕೆ ಬದ್ಧರಾಗಿರುವವರಿಗೆ ದಾರಿ ಯಾವಾಗಲೂ ಕಠಿಣವಾಗಿರುತ್ತದೆ. ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಗೌರವಿಸೋಣ ಮತ್ತು ಪಾಲಿಸೋಣ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



