ಹೋರಾಟ ಮುಂದುವರೆಸಿ: ವಿದ್ಯಾರ್ಥಿ-ಯುವಜನರಿಗೆ ಸಿದ್ದರಾಮಯ್ಯ ಕರೆ
ಕಾಂಗ್ರೆಸ್ ಪಕ್ಷ ಕಾಲದ ಕರೆಗೆ ಓಗೊಟ್ಟು ಒಂದು ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಸಕಾಲದಲ್ಲಿ ದೃಢಚಿತ್ತದ ನಾಯಕತ್ವ ನೀಡಿ ಹೋರಾಟವನ್ನು ಮುನ್ನಡೆಸಿದ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ಬೆಂಗಳೂರು: ದೇಶದ ವಿದ್ಯಾರ್ಥಿ-ಯುವಜನರು ಕೇಂದ್ರದಲ್ಲಿರುವ ಅಸಮರ್ಥ ಮತ್ತು ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ವರೆಗೆ ವಿರಮಿಸಬಾರದು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮುಂದುವರೆಸಬೇಕು. ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ನಿಮ್ಮ ಜೊತೆಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಿದ್ದರಾಮಯ್ಯ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ದೇಶದ ಎಚ್ಚೆತ್ತ ವಿದ್ಯಾರ್ಥಿ-ಯುವಜನರ ಗೆಲುವಾಗಿದೆ. ಅವರೆಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆಂದು ಹೇಳಿದ್ದಾರೆ.
ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿಜಯವಾಗಿದೆ. ಬಿಸಿಲು-ಮಳೆ-ಹಸಿವು-ಆರೋಗ್ಯವನ್ನು ಲೆಕ್ಕಿಸದೆ ದೆಹಲಿಯಲ್ಲಿ ಬೀಡುಬಿಟ್ಟು ಪೊಲೀಸರ ದೌರ್ಜನ್ಯದಿಂದಲೂ ಪ್ರಚೋದನೆಗೆ ಒಳಗಾಗದೆ ಶಾಂತಿಯುತ ಹೋರಾಟವನ್ನು ನಡೆಸಿದ ಲಕ್ಷಾಂತರ ವಿದ್ಯಾರ್ಥಿ-ಯುವಜನರು ದೇಶದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕಾಲದ ಕರೆಗೆ ಓಗೊಟ್ಟು ಒಂದು ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಸಕಾಲದಲ್ಲಿ ದೃಢಚಿತ್ತದ ನಾಯಕತ್ವ ನೀಡಿ ಹೋರಾಟವನ್ನು ಮುನ್ನಡೆಸಿದ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ಶಿಕ್ಷಣ ಸಚಿವರ ರಾಜೀನಾಮೆಯಿಂದ ಶಿಕ್ಷಣ ಕ್ಷೇತ್ರದ ಸರ್ವ ಸಮಸ್ಯೆಗಳು ಪರಿಹಾರವಾಗಲಾರದು. ಸರ್ವಾಧಿಕಾರ ಮತ್ತು ದುರಾಡಳಿತದ ಶಾಲೆಯ ಗುರುಗಳು ಕುರ್ಚಿಯಲ್ಲಿ ಭದ್ರವಾಗಿ ಕುಳಿತಿರುವಾಗ ಇಂತಹ ಶಿಷ್ಯರ ನಿರ್ಗಮನದಿಂದ ಶಾಲೆಯ ಸುಧಾರಣೆಯಾಗಲಾರದು. ರಾಜಕೀಯದಿಂದ ಶಿಕ್ಷಣದ ವರೆಗೆ ಎಲ್ಲವನ್ನೂ ವ್ಯಾಪಾರೀಕರಣ ಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಗಮಿಸುವ ವರೆಗೆ ಶಿಕ್ಷಣ ವ್ಯವಸ್ಥೆಯೂ ಸುಧಾರಣೆಯಾಗದು, ಭಾರತವೂ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲಾರದು.
ಈ ಹಿನ್ನೆಲೆಯಲ್ಲಿ ಒಬ್ಬ ಅಸಮರ್ಥ ಮತ್ತು ಭ್ರಷ್ಟ ಸಚಿವನ ರಾಜೀನಾಮೆಗಾಗಿ ಸಂಭ್ರಮಾಚರಣೆ ಮಾಡದೆ, ದೇಶದ ವಿದ್ಯಾರ್ಥಿ-ಯುವಜನರು ಕೇಂದ್ರದಲ್ಲಿರುವ ಅಸಮರ್ಥ ಮತ್ತು ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ವರೆಗೆ ವಿರಮಿಸಬಾರದು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ಜನರ ಜೊತೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



