ರಾಜಕೀಯ

NEET ವಿವಾದಕ್ಕೆ ಕೇಂದ್ರವೇ ಹೊಣೆ; ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ: ಕೆ.ಸಿ ವೇಣುಗೋಪಾಲ್ ಆಗ್ರಹ

ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವಾಗ ಪ್ರಧಾನಿ ಮೋದಿ ನೇರವಾಗಿ ಅವರೊಂದಿಗೆ ಮಾತನಾಡದೇ ಇರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರಕ್ಕೆ ನಿಜವಾಗಿಯೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕಿತ್ತು.

NEET ವಿವಾದಕ್ಕೆ ಕೇಂದ್ರವೇ ಹೊಣೆ; ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ: ಕೆ.ಸಿ ವೇಣುಗೋಪಾಲ್ ಆಗ್ರಹ
ಸಂಘಟನ್ ಸೃಜನ್ ಅಭಿಯಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
Published On :

ಬೆಂಗಳೂರು: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ಪ್ರಶ್ನಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

'ಸಂಘಟನ್ ಸೃಜನ್ ಅಭಿಯಾನ' ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳನ್ನು ಪುನರ್‌ರಚಿಸುವ ಉದ್ದೇಶದಿಂದ ನಡೆದ ಕಾಂಗ್ರೆಸ್ ವೀಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದರು.

ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ವೇಣುಗೋಪಾಲ್ ಅವರು, "ಒಬ್ಬ ಕೇಂದ್ರ ಸಚಿವರು 'ಪೇಪರ್ ಲೀಕ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ' ಎಂದು ಹೇಳುತ್ತಿದ್ದಾರೆ. ಇದರ ಅರ್ಥವೇನು? ಪ್ರಶ್ನೆಪತ್ರಿಕೆ ಸೋರಿಕೆಗೆ ಸರ್ಕಾರವೇ ಹೊಣೆ ಹೊರುತ್ತಿದೆಯೇ? ದೇಶದ ವಿದ್ಯಾರ್ಥಿಗಳು ಈಗ ಇದೇ ಪ್ರಶ್ನೆ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವಾಗ ಪ್ರಧಾನಿ ಮೋದಿ ನೇರವಾಗಿ ಅವರೊಂದಿಗೆ ಮಾತನಾಡದೇ ಇರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರಕ್ಕೆ ನಿಜವಾಗಿಯೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕಿತ್ತು, ಬಾಕಿ ಇರುವ ಕಾನೂನು ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕಿತ್ತು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕಿತ್ತು ಹಾಗೂ ಸಂಸತ್ತಿನಲ್ಲಿ ಈ ಕುರಿತು ಸಮಗ್ರ ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದು ಒತ್ತಾಯಿಸಿದರು.

ಪ್ರಸ್ತುತ ಉಂಟಾಗಿರುವ ಬಿಕ್ಕಟ್ಟು ಪ್ರಧಾನಿ ಮೋದಿ ಅವರ ಆಡಳಿತ ವೈಫಲ್ಯದ ಪರಿಣಾಮ ಎಂದು ಆರೋಪಿಸಿದ ಅವರು, ಸರ್ಕಾರವನ್ನು ಜವಾಬ್ದಾರಿಗೆ ಒಳಪಡಿಸುವ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಸಂಸತ್ತಿನ ಕಾರ್ಯವೈಖರಿಯನ್ನು ಟೀಕಿಸಿ, ಪ್ರಮುಖ ವಿಷಯಗಳ ಚರ್ಚೆಯಿಂದ ಸರ್ಕಾರ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ನಾಲ್ಕು ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನ ಅಲ್ಪಾವಧಿಯಲ್ಲೇ ಮುಂದೂಡಿಕೆಯಾಯಿತು. ನೀಟ್-ಸಿಬಿಎಸ್‌ಇ ವಿವಾದ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಮೊದಲ ದಿನವೇ ಮುಂದೂಡಿಕೆ ಸೂಚನೆ ನೀಡಿ ಚರ್ಚೆಗೆ ಅವಕಾಶ ಕೋರಿದ್ದರೂ ಸರ್ಕಾರ ನಿರಾಕರಿಸಿತು ಎಂದು ಹೇಳಿದರು.

ಸಂಸತ್ತಿನ ಪರಿಶೀಲನೆಗೆ ಸರ್ಕಾರ ಹೆದರುತ್ತಿದೆ. ಜನರನ್ನು ದಾರಿ ತಪ್ಪಿಸುವ ಕಣ್ಣೊರೆಸುವ ಕ್ರಮಗಳನ್ನಷ್ಟೇ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಕಾಂಗ್ರೆಸ್‌ನ ಪ್ರಮುಖ ಬೇಡಿಕೆಗಳನ್ನು ಪುನರುಚ್ಚರಿಸಿದ ವೇಣುಗೋಪಾಲ್ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು, ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, "ದೇಶದ ವಿದ್ಯಾರ್ಥಿಗಳ ಪ್ರಮುಖ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸದಿದ್ದರೆ ಇಂತಹ ಭೇಟಿಗಳಿಗೆ ಅರ್ಥವಿಲ್ಲ. ಸರ್ಕಾರ ವಿದ್ಯಾರ್ಥಿಗಳ ಸಂಕಷ್ಟದ ಬಗ್ಗೆ ಸಂವೇದನಾಶೀಲವಾಗಿ ವರ್ತಿಸುತ್ತಿಲ್ಲ," ಎಂದು ಟೀಕಿಸಿದರು.

ರಾಹುಲ್ ಗಾಂಧಿ ಕುರಿತು ಮಾತನಾಡಿ, ರಾಜಕೀಯ ವಿರೋಧಿಗಳು ಟೀಕೆ ಮಾಡುವುದು ಸಹಜ. ಆದರೆ, ಸಂಕಷ್ಟದ ಸಂದರ್ಭಗಳಲ್ಲಿ ಜನರ ಪರವಾಗಿ ಧ್ವನಿ ಎತ್ತುವ ನಾಯಕನಾಗಿ ರಾಹುಲ್ ಗಾಂಧಿಯನ್ನು ದೇಶ ಗುರುತಿಸುತ್ತಿದೆ ಎಂದು ಹೇಳಿದರು.

ಅಯೋಧ್ಯೆ ದೇವಸ್ಥಾನ ಟ್ರಸ್ಟ್‌ನಲ್ಲಿ ಚಿನ್ನ ಹಾಗೂ ನಿಧಿ ನಾಪತ್ತೆಯಾಗಿದೆ ಎಂಬ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ಪ್ರಕರಣದಲ್ಲಿ ಪ್ರಧಾನ ಮಂತ್ರಿ ಕಚೇರಿಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು. ಜನರ ಸಮಸ್ಯೆಗಳಿಗೆ ಉತ್ತರ ನೀಡುವ ಬದಲು ಪ್ರಧಾನಿ ಮೋದಿ "ನಾಟಕ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.