'2004ರಲ್ಲಿ ನಾನು ಮುಖ್ಯಮಂತ್ರಿಯಾಗಬೇಕೆಂದು ಎಂ.ಪಿ ಪ್ರಕಾಶ್ ನನ್ನ ಹೆಸರನ್ನು ಸೂಚಿಸಿದ್ದರು': ಸಿದ್ದರಾಮಯ್ಯ
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಆಯೋಜಿಸಿದ್ದ ಎಂ.ಪಿ. ಪ್ರಕಾಶ್ ಅವರ ಪುತ್ಥಳಿಯನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂ ಪಿ ಪ್ರಕಾಶ್ ತಮ್ಮನ್ನು ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಅವರು ಎಂದಿಗೂ ಹೇಳಿಕೊಂಡವರಲ್ಲ ಎಂದರು.

ವಿಜಯನಗರ: 2004ರಲ್ಲಿ ನಾವು ಎಲ್ಲರೂ ಜನತಾದಳ ಎಸ್ ಪಕ್ಷದಲ್ಲಿದ್ದೆವು. ದೇವೇಗೌಡರು, ಇಬ್ರಾಹಿಂ, ಎಂ.ಪಿ. ಪ್ರಕಾಶ್, ಸಿಂಧ್ಯಾ ಮತ್ತು ನಾನು ಸೇರಿ ಪಕ್ಷದ ಪ್ರಮುಖ ನಾಯಕರಾಗಿದ್ದೆವು. ಆ ಸಂದರ್ಭದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಬೇಕು ಎಂಬ ಚರ್ಚೆ ನಡೆದಾಗ, ಎಂ.ಪಿ. ಪ್ರಕಾಶ್ ಅವರು ನನ್ನ ಹೆಸರನ್ನೇ ಸೂಚಿಸಿ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಿವಂಗತ ಎಂ.ಪಿ. ಪ್ರಕಾಶ್ ಅವರ 86ನೇ ಜನ್ಮ ದಿನೋತ್ಸವ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಆಯೋಜಿಸಿದ್ದ ಎಂ.ಪಿ. ಪ್ರಕಾಶ್ ಅವರ ಪುತ್ಥಳಿಯನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂ ಪಿ ಪ್ರಕಾಶ್ ತಮ್ಮನ್ನು ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಅವರು ಎಂದಿಗೂ ಹೇಳಿಕೊಂಡವರಲ್ಲ.
ನಂತರ ಜನತಾದಳ ಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಧರಂಸಿಂಗ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆ ಸರ್ಕಾರದಲ್ಲಿ ನಾನು ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರೆ, ಎಂ.ಪಿ. ಪ್ರಕಾಶ್ ಅವರು ಸಚಿವರಾಗಿ ಸೇವೆ ಸಲ್ಲಿಸಿದ್ದರು ಎಂದು ನೆನಪು ಮಾಡಿಕೊಂಡರು.
ದಿವಂಗತ ಎಂ.ಪಿ. ಪ್ರಕಾಶ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಪ್ರಾಮಾಣಿಕತೆಯ ವಿಷಯದಲ್ಲಿ ರಾಜಿ ಮಾಡಿಕೊಂಡವರಲ್ಲ. ಆಡಳಿತದ ಎಲ್ಲಾ ಇಲಾಖೆಗಳ ಬಗ್ಗೆಯೂ ಅಪ್ರತಿಮ ಜ್ಞಾನ ಹೊಂದಿದ್ದ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರು ಮತ್ತು ಒಮ್ಮೆಯಾದರೂ ಆ ಉನ್ನತ ಹುದ್ದೆಯನ್ನು ಅಲಂಕರಿಸಬೇಕಿತ್ತು ಎಂದರು.
“ಅವರು ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಅಪ್ರತಿಮ ಅಧ್ಯಯನಶೀಲರಾಗಿದ್ದರು. ಸರ್ಕಾರದಲ್ಲಿ ಅವರು ನಿರ್ವಹಿಸಿದ ಕಾನೂನು, ಕಂದಾಯ,ಗೃಹ ಅಥವಾ ಸಂಸ್ಕೃತಿ ಸೇರಿದಂತೆ ಪ್ರತಿಯೊಂದು ಇಲಾಖೆಯ ನಿಯಮಾವಳಿಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿತ್ತು. ಯಾವುದೇ ವಿಷಯದ ಚರ್ಚೆಯಲ್ಲೂ ಅವರು ಅಪಾರ ಜ್ಞಾನ ಹೊಂದಿದ್ದರು ಎಂದರು.
ಎಂ ಪಿ ಪ್ರಕಾಶ್ ನಾಮಕರಣ ಮಾಡಿ
ಹೂವಿನ ಹಡಗಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಎಂ.ಪಿ. ಪ್ರಕಾಶ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಸಹ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಆ ಮೂಲಕ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ. ನಾನು ಮೈಸೂರು ದಸರಾ ಉತ್ಸವವನ್ನು ಆಯೋಜಿಸುತ್ತಿದ್ದ ಸಂದರ್ಭದಲ್ಲಿ, ಹಂಪಿ ಉತ್ಸವವನ್ನೂ ಆರಂಭಿಸೋಣ ಎಂಬ ಸಲಹೆಯನ್ನು ನೀಡಿ, ಅದಕ್ಕಾಗಿ ನನ್ನಿಂದ ಅನುದಾನ ಮಂಜೂರು ಮಾಡಿಸಿಕೊಂಡು, ಮೊದಲ ಬಾರಿಗೆ ಹಂಪಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದವರು ಎಂ.ಪಿ. ಪ್ರಕಾಶ್ ಅವರೇ ಎಂದು ಸಿದ್ದರಾಮಯ್ಯ ಹೇಳಿದರು.
ಎಂ.ಪಿ. ಪ್ರಕಾಶ್ ಅವರು ಕ್ಯಾನ್ಸರ್‌ಗೆ ತುತ್ತಾದಾಗ ಅವರನ್ನು ಭೇಟಿಯಾಗಲು ನಾನು ಅವರ ಮನೆಗೆ ಹೋಗಿದ್ದೆ. ಉತ್ತಮ ವ್ಯಕ್ತಿತ್ವ ಮತ್ತು ಸದ್ಗುಣಗಳನ್ನು ಹೊಂದಿದ್ದ ಅವರು ಎಂದಿಗೂ ಸಿಗರೇಟ್ ಸೇದುವುದು ಅಥವಾ ಮದ್ಯಪಾನ ಮಾಡುವಂತಹ ದುಶ್ಚಟಗಳಿಗೆ ಒಳಗಾಗಿರಲಿಲ್ಲ. ಆದರೂ ಅವರು ಕ್ಯಾನ್ಸರ್‌ಗೆ ತುತ್ತಾಗಿರುವುದು ನನಗೆ ಅತ್ಯಂತ ಆಶ್ಚರ್ಯ ಮತ್ತು ನೋವುಂಟು ಮಾಡಿದ ಸಂಗತಿಯಾಗಿತ್ತು. ಅವರು ನಿಧನ ಹೊಂದುವ ಸುಮಾರು ಹದಿನೈದು ದಿನಗಳ ಮೊದಲು ಜನಾರ್ಧನ ಹೋಟೆಲ್‌ನಲ್ಲಿ ಅವರೊಂದಿಗೆ ಕುಳಿತು ದೋಸೆ ಸವಿದಿದ್ದೆ. ಅವರು ನಿಧನ ಹೊಂದಿರುವ ಮಾಹಿತಿ ಬಂದಾಗ ನನಗೆ ನಂಬಲು ಸಾಧ್ಯವಾಗಿರಲಿಲ್ಲ ಎಂದು ಬೇಸರ ಹೊರಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



