ಚಪಲ ತೀರಿಸಿಕೊಳ್ಳಲು ಪರಿಷತ್ ಗೆ ಬರ್ತಿದ್ದಾರೆ; ಸಿ.ಎನ್. ಮಂಜುನಾಥ್ ಕಣಕ್ಕಿಳಿಸುವ ತಂತ್ರ ಹೆಣೆದಿದ್ದೇ ನಾನು! Video
ಬಿ.ಎಸ್. ಯಡಿಯೂರಪ್ಪ– ಸಿದ್ದರಾಮಯ್ಯ ಮತ್ತು ಬಿ.ವೈ. ವಿಜಯೇಂದ್ರ– ಡಿ.ಕೆ. ಶಿವಕುಮಾರ್ ಆತ್ಮೀಯರು ಎಂಬ ಅಪಪ್ರಚಾರವನ್ನು ಬಿಜೆಪಿ ನಾಯಕರೇ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದಿರುವ ಯಡಿಯೂರಪ್ಪ ಅವರ ಗೌರವಕ್ಕೆ ಚ್ಯುತಿಯುಂಟು ಮಾಡುವ ಹುನ್ನಾರ ನಡೆಯುತ್ತಿದೆ.

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನವಾದ ಬಳಿಕ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ರೀತಿಯ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಯೋಗ್ಯ ವ್ಯಕ್ತಿಗಳು ವಿಧಾನಪರಿಷತ್ ಗೆ ಬರಬೇಕು. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಚಪಲ ತೀರಿಸಿಕೊಳ್ಳಲು ವಿಧಾನಪರಿಷತ್ ಗೆ ಬರ್ತಿದ್ದಾರೆ. ರಾಜಕೀಯ ಚಟಕ್ಕಾಗಿ ಬರ್ತಿದ್ದಾರೆ. ಹಣದ ಅಹಂನಿಂದ, ಚುನಾವಣೆ ಗೆಲ್ತೀವಿ ಅನ್ನೋ ಭ್ರಮೆಯಿಂದ ಬರ್ತಿದ್ದಾರೆ. ವಿಧಾನ ಸೌಧ ಪ್ರಜಾಪ್ರಭುತ್ವದ ದೇಗುಲ, ಅಲ್ಲಿಗೆ ಯೋಗ್ಯ ವ್ಯಕ್ತಿಗಳು ಬರಬೇಕು ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಯಿತು. ನಾವು 2 ಸ್ಥಾನಗಳನ್ನು ಮಾತ್ರ ಗೆದ್ದಿದ್ದೇವೆ. ಆದರೆ, ಕೆಲವು ಅಡ್ಡ ಮತದಾನ ಆಯಿತು ಎಂದಾಗ ನಡೆದ ಚರ್ಚೆಗಳು ಮನಸ್ಸಿಗೆ ಬೇಸರ ಮೂಡಿಸಿದವು. ರಾಜ್ಯದ ಅಧ್ಯಕ್ಷನಾಗಿ ಪಕ್ಷದ ಆಂತರಿಕ ವಿಚಾರವನ್ನು ಹೇಳಲು ನನಗೇನೂ ಸಂಕೋಚ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಹಿಂದೆ ರಾಜ್ಯದಲ್ಲಿ ನಮ್ಮದೇ ಸರಕಾರ ಇತ್ತು. ಯಡಿಯೂರಪ್ಪ ಅವರು ಒಳ್ಳೆಯ ಆಡಳಿತ ನೀಡಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದರು. ಕಾಂಗ್ರೆಸ್ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಮಾಡಿದಾಗ ಅದನ್ನು ಸರಿಯಾಗಿ ನಾವು ಎದುರಿಸಲು ಸಾಧ್ಯವಾಗದೇ ನಮ್ಮ ಆಂತರಿಕ ಸಮಸ್ಯೆಯಿಂದ ಇವತ್ತು ವಿಪಕ್ಷದಲ್ಲಿ ಕುಳಿತಿದ್ದೇವೆ ಎಂದರು.
ಬಿ.ಎಸ್. ಯಡಿಯೂರಪ್ಪ– ಸಿದ್ದರಾಮಯ್ಯ ಮತ್ತು ಬಿ.ವೈ. ವಿಜಯೇಂದ್ರ– ಡಿ.ಕೆ. ಶಿವಕುಮಾರ್ ಆತ್ಮೀಯರು ಎಂಬ ಅಪಪ್ರಚಾರವನ್ನು ಬಿಜೆಪಿ ನಾಯಕರೇ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದಿರುವ ಯಡಿಯೂರಪ್ಪ ಅವರ ಗೌರವಕ್ಕೆ ಚ್ಯುತಿಯುಂಟು ಮಾಡುವ ಹುನ್ನಾರ ನಡೆಯುತ್ತಿದೆ. ಇಂತಹ ಹೊಂದಾಣಿಕೆ ರಾಜಕಾರಣದ ಮಾತುಗಳನ್ನು ದೇವರು ಕೂಡ ಮೆಚ್ಚುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಯಡಿಯೂರಪ್ಪ ವಿರುದ್ಧ 35 ಪ್ರಕರಣ ದಾಖಲಾಗಿವೆ. ಕೆಲ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್ ವಿರುದ್ಧ ವೈದ್ಯ ಡಾ.ಸಿ.ಎನ್. ಮಂಜುನಾಥ್ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಕಾರ್ಯತಂತ್ರ ಹೆಣೆದಿದ್ದೇ ನಾನು. ಹೀಗಿರುವಾಗ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೆ ಏರಿದ್ದು, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗದೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಲಾಹರಣ ಮಾಡುತ್ತಿದ್ದಾರೆ. ಅವರ ಅಧಿಕಾರವಧಿ ಪೂರ್ಣಗೊಳ್ಳುವ ಮುನ್ನವೇ ಮೂರನೇ ಮುಖ್ಯಮಂತ್ರಿ ನಿಯೋಜನೆಯಾದರೂ ಅಚ್ಚರಿ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



