ರಾಜಕೀಯ

ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ: ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರರಿದ್ದಾರೆ ಹೇಳಿ? BJP ಶಾಸಕನ ಪರ ರಾಜಣ್ಣ ಬ್ಯಾಟಿಂಗ್!

ನಾವು ಆತನ ಬಗ್ಗೆ ಮರುಕ ವ್ಯಕ್ತಪಡಿಸಬೇಕು ಅಷ್ಟೇ. ಸತ್ಯಹರಿಶ್ಚಂದ್ರನ ಮಕ್ಕಳು ಯಾರು ಇದ್ದಾರೆ ಹೇಳಿ ನೋಡೋಣ. ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರ ಇದ್ದಾರೆ. ಇವನ್ಯಾರೋ ಬಡಪಾಯಿ ಸಿಕ್ಕಿ ಹಾಕಿಕೊಂಡಿದ್ದಾನೆ ಅಷ್ಟೇ.

ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ: ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರರಿದ್ದಾರೆ ಹೇಳಿ? BJP ಶಾಸಕನ ಪರ ರಾಜಣ್ಣ ಬ್ಯಾಟಿಂಗ್!
ಕೆ ಎನ್ ರಾಜಣ್ಣ
Published On :

ಬೆಂಗಳೂರು/ದೆಹಲಿ: ರಾಜಕೀಯ ಪಕ್ಷಭೇದಗಳನ್ನು ಮೀರಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮಾಜಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು, ಇದೀಗ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಪರವಾಗಿ ಮಾತನಾಡಿದ್ದು, ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜಣ್ಣ ಅವರು, ನಾವು ಆತನ ಬಗ್ಗೆ ಮರುಕ ವ್ಯಕ್ತಪಡಿಸಬೇಕು ಅಷ್ಟೇ. ಸತ್ಯಹರಿಶ್ಚಂದ್ರನ ಮಕ್ಕಳು ಯಾರು ಇದ್ದಾರೆ ಹೇಳಿ ನೋಡೋಣ. ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರ ಇದ್ದಾರೆ. ಇವನ್ಯಾರೋ ಬಡಪಾಯಿ ಸಿಕ್ಕಿ ಹಾಕಿಕೊಂಡಿದ್ದಾನೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ಈ ಹಿಂದೆ ರಾಜಣ್ಣ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರಂಭಿಸಿದ ‘ವೋಟ್ ಚೋರಿ’ ಅಭಿಯಾನವನ್ನು ಪರೋಕ್ಷವಾಗಿ ಟೀಕಿಸಿದ್ದರು.

2024ರ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದಾಗ ಮತಗಳ್ಳತನವನ್ನೇಕೆ ತಡೆಯಲಾಗಲಿಲ್ಲ ಎಂದು ಪ್ರಶ್ನಿಸಿದ್ದರು. ಇದು ಪಕ್ಷಕ್ಕೆ ಅಸಮಾಧಾವನ್ನುಂಟು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಸೂಚನೆಯ ಮೇರೆಗೆ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕಾಯಿತು.

ಈ ನಡುವೆ ಸಚಿವ ಸ್ಥಾನದಿಂದ ಹೊರಬಂದ ನಂತರ ರಾಜಣ್ಣ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

ರಾಜಣ್ಣ ಅವರು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಶನಿವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

ಸೋಮಣ್ಣ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ರಾಜಣ್ಣ ಸಹಾಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬೇಕಿದೆ.

ಆದರೆ ಈ ಭೇಟಿ ಕುರಿತು ಸ್ಪಷ್ಟನೆ ನೀಡಿರುವ ರಾಜಣ್ಣ ಅವರು, ನನ್ನ ಕ್ಷೇತ್ರ ಮಧುಗಿರಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಮನವಿ ಪತ್ರ ಸಲ್ಲಿಸಲು ಭೇಟಿ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಏತನ್ಮಧ್ಯೆ ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, ರಾಜಣ್ಣ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಸಾಧಿಸಲು ದೆಹಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, “ನಾನು ದೊಡ್ಡವರ ಬಗ್ಗೆ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಪಕ್ಷ ಬದಲಾವಣೆ ಊಹಾಪೋಹ

2028ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಣ್ಣ ಅವರು ಬಿಜೆಪಿ ಅಥವಾ ಜೆಡಿಎಸ್‌ಗೆ ಸೇರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ನೆಲೆ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಸ್ಪರ್ಧೆ

ರಾಜಣ್ಣ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ಈ ಸ್ಥಾನಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರ ಸಂಬಂಧಿ ಮತ್ತು ಎಂಎಲ್‌ಸಿ ಎಸ್ ರವಿ ಕೂಡ ಈ ಹುದ್ದೆಗೆ ಸ್ಪರ್ಧಿಸುತ್ತಿರುವುದರಿಂದ ಎಲ್ಲಾ ಪಕ್ಷಗಳ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ.

ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರ ಪುತ್ರ ಎಂಎಲ್ಸಿ ಡಾ. ಸೂರಜ್ ಅವರು ರಾಜಣ್ಣಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಷಯದಲ್ಲಿ ಸಿದ್ದರಾಮಯ್ಯ ಮಧ್ಯಸ್ಥಿಕೆ ನಡೆಸಲು ಪ್ರಯತ್ನಿಸಿದರೂ ವಿಫಲವಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.