ಸಿಎಂ ಆಗಲು 113 ಸ್ಥಾನ ಗೆಲ್ಲಬೇಕು ಹೇಳಿಕೆ: ಛಲವಾದಿ ನಾರಾಯಣಸ್ವಾಮಿಗೆ ಕುಮಾರಸ್ವಾಮಿ ತಿರುಗೇಟು
ಇಲ್ಲಿ ಮುಖ್ಯಮಂತ್ರಿ ಯಾರು ಆಗ್ತಾರೆ ಅನ್ನೋದು ಇಲ್ಲ. ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಸಿದ್ರು ಅಂತ ಯಾಕೆ ಬೇಕು. ಇನ್ನೂ ಎರಡು ವರ್ಷ ಇದೆ. ಬಹಳ ಶ್ರಮ ಹಾಕೋದಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: 2028ರಲ್ಲಿ 113 ಸ್ಥಾನ ಗೆದ್ದು ಕುಮಾರಸ್ವಾಮಿ ಸಿಎಂ ಆಗಲು ಅಭ್ಯಂತರವಿಲ್ಲ. ಅದೇ ರೀತಿ ಬಿಜೆಪಿ 113 ಸ್ಥಾನ ಗೆದ್ದರೆ ನಮ್ಮವರು ಸಿಎಂ ಆಗುತ್ತಾರೆ ಎಂಬ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿರುವ ಭ್ರಷ್ಟ, ಕೆಟ್ಟ ಸರ್ಕಾರವನ್ನು ತೆಗೆಯೋದು ನನ್ನ ಅಜೆಂಡಾ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ,ನಾನು ಇಲ್ಲಿವರೆಗೂ ನೂರು ಬಾರಿ ಹೇಳಿದ್ದೇನೆ. ರಾಜ್ಯದಲ್ಲಿನ ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ತೆಗೆಯಬೇಕು ಅನ್ನೋದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಆಗೋದೆಲ್ಲ ಮುಂದೆ ಆಮೇಲೆ ಅದು. ಈ ರಾಜ್ಯದಲ್ಲಿ ಉತ್ತಮವಾದ ಸರ್ಕಾರ, ಜನಪರವಾದ ಸರ್ಕಾರ, ಜನತಾ ಸರ್ಕಾರ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ಜನರ ಭಾವನೆಗೆ ಸ್ಪಂದಿಸುವ ಸರ್ಕಾರ ಬೇಕು. ಇಂತಹ ಭ್ರಷ್ಟ ಸರ್ಕಾರ ತೆಗೆಯಬೇಕು ಎಂಬುದು ನನ್ನ ಅಜೆಂಡಾ ಎಂದು ಹೇಳಿದರು.
ಇಲ್ಲಿ ಮುಖ್ಯಮಂತ್ರಿ ಯಾರು ಆಗ್ತಾರೆ ಅನ್ನೋದು ಇಲ್ಲ. ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಸಿದ್ರು ಅಂತ ಯಾಕೆ ಬೇಕು. ಇನ್ನೂ ಎರಡು ವರ್ಷ ಇದೆ. ಬಹಳ ಶ್ರಮ ಹಾಕೋದಿದೆ. ಯಾರೋ ನಾಲ್ಕು ಜನ ಮಾತಾಡಿದ್ದಕ್ಕೆ ಉತ್ತರ ಕೊಟ್ಟರೆ ಅದಕ್ಕೆ ಪ್ರಬುದ್ಧತೆ ಇಲ್ಲ ಅಂತಾರೆ ಎಂದು ಲೇವಡಿ ಮಾಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ- ಜಿಬಿಎ ಚುನಾವಣೆ ಮೈತ್ರಿ ಮೈತ್ರಿ ಬಗ್ಗೆ ಈವರೆಗೂ ಯಾವುದೇ ಚರ್ಚೆ ಆಗಿಲ್ಲ. ಎಲ್ಲಾ ಪಕ್ಷಗಳು ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಜಿಬಿಎ ವಿಷಯದಲ್ಲಿ ಏನೇನು ನಿರ್ಧಾರ ಮಾಡಬೇಕು ಅಂತ ಪಕ್ಷದ ಸಭೆಯಲ್ಲಿ ಚರ್ಚೆ ಮಾಡ್ತೀವಿ. ಚರ್ಚೆ ಸಮಯ ಬಂದಾಗ ಅದರ ಬಗ್ಗೆ ಚರ್ಚೆ ಮಾಡ್ತೀವಿ. ಮೈತ್ರಿ ವಿಷಯದಲ್ಲಿ ನಾವು ಸಂಪೂರ್ಣವಾಗಿ ಮುಕ್ತವಾಗಿ ಇದ್ದೇವೆ. ಯಾವುದೇ ರೀತಿಯಲ್ಲಿ ನಮ್ಮಿಂದ ಜನರಲ್ಲಿ ಬೇರೆ ರೀತಿ ಗೊಂದಲಗಳಿಗೆ ಅವಕಾಶ ಕೊಡಬಾರದು ಎನ್ನೋದು ನಮ್ಮ ನಿಲುವು. ಸಮಯ ಬಂದಾಗ ಈ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಹೇಳಿದರು.
ಜೆಡಿಎಸ್ ಜೊತೆ ಮೈತ್ರಿಗೆ ಮಂಡ್ಯ, ಹಾಸನ ಬಿಜೆಪಿ ನಾಯಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸಭೆ ಚುನಾವಣೆಗೆ ಎರಡು ವರ್ಷ ಇದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ 4-5 ತಿಂಗಳು ಇದೆ. ಆ ಸಮಯ ಬಂದಾಗ ಚರ್ಚೆ ಮಾಡೋಣ. ವೈಯಕ್ತಿಕವಾಗಿ ಮಾತಾಡೋರಿಗೆ ನಾನು ಉತ್ತರ ಕೊಡೋದು ಅನಾವಶ್ಯಕ ಅಂತ ಮಾಜಿ ಶಾಸಕ ಪ್ರೀತಂಗೌಡ, ನಾರಾಯಣಗೌಡ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



