ರಾಜಕೀಯ

ಆ ದಿನದ ಒಪ್ಪಂದ ಮರೆತು ಬಿಟ್ರಾ? ನಿಮ್ಮ ಸಮ್ಮುಖದಲ್ಲೇ ಮಾತಾಗಿತ್ತು ಅಲ್ವಾ? ಆಗುತ್ತೋ ಇಲ್ವೋ ಕ್ಲಿಯರ್​ ಮಾಡಿ: ಡಿ.ಕೆ ಬ್ರದರ್ಸ್ ದುಂಬಾಲು!

ಎರಡೂವರೆ ವರ್ಷಕ್ಕೆಂದು ನಿಮ್ಮ ಸಮ್ಮುಖದಲ್ಲೇ ಮಾತಾಗಿತ್ತು. ನಿಮ್ಮ ಆಶ್ವಾಸನೆಯಂತೆ ನಾವು ನಡೆದುಕೊಂಡಿದ್ದೇವೆ. ಪವರ್ ಶೇರಿಂಗ್ ಒಪ್ಪಂದ ಮುಗಿದು ಎರಡೂವರೆ ತಿಂಗಳು ಆಗ್ತಿದೆ.

ಆ ದಿನದ ಒಪ್ಪಂದ ಮರೆತು ಬಿಟ್ರಾ? ನಿಮ್ಮ ಸಮ್ಮುಖದಲ್ಲೇ ಮಾತಾಗಿತ್ತು ಅಲ್ವಾ? ಆಗುತ್ತೋ ಇಲ್ವೋ ಕ್ಲಿಯರ್​ ಮಾಡಿ: ಡಿ.ಕೆ ಬ್ರದರ್ಸ್ ದುಂಬಾಲು!
ಡಿ.ಕೆ ಸುರೇಶ್ ಮತ್ತು ಡಿ.ಕೆ ಶಿವಕುಮಾರ್
Published On :

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ತಡರಾತ್ರಿ ಸಭೆ ನಡೆಸಿದರು.

ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಹೊಸ ಊಹಾಪೋಹಗಳ ನಡುವೆ ಈ ಬೆಳವಣಿಗೆಗಳು ಗಮನ ಸೆಳೆದಿವೆ. ಅಸ್ಸಾಂ ವಿಧಾನಸಭಾ ಚುನಾವಣೆಯ ಕಾರ್ಯತಂತ್ರ ಸಭೆಯಲ್ಲಿ ಭಾಗವಹಿಸಲು ಶಿವಕುಮಾರ್ ದೆಹಲಿಯಲ್ಲಿದ್ದರು ಆದರೆ ಸಭೆಯ ನಂತರ ಅವರು ಖರ್ಗೆ ಮತ್ತು ವೇಣುಗೋಪಾಲ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾದರು.

ನಿನ್ನೆ ರಾತ್ರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾದ ಡಿ.ಕೆ. ಬ್ರದರ್ಸ್ ತಮ್ಮ ಹಕ್ಕೊತ್ತಾಯವನ್ನು ತೀವ್ರವಾಗಿ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಎರಡೂವರೆ ವರ್ಷಕ್ಕೆಂದು ನಿಮ್ಮ ಸಮ್ಮುಖದಲ್ಲೇ ಮಾತಾಗಿತ್ತು. ನಿಮ್ಮ ಆಶ್ವಾಸನೆಯಂತೆ ನಾವು ನಡೆದುಕೊಂಡಿದ್ದೇವೆ. ಪವರ್ ಶೇರಿಂಗ್ ಒಪ್ಪಂದ ಮುಗಿದು ಎರಡೂವರೆ ತಿಂಗಳು ಆಗ್ತಿದೆ. ನಮಗೆ ನೀಡಿದ ವಚನದಂತೆ ಅಧಿಕಾರ ಹಸ್ತಾಂತರ ಆಗಲಿ ಎಂದು ಅವರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಆ ದಿನ ಸಿದ್ದರಾಮಯ್ಯನವರು ನಿಮ್ಮೆಲ್ಲರ ಸಮ್ಮುಖದಲ್ಲೇ ವಚನ ನೀಡಿದ್ದರು. ಎರಡೂವರೆ ವರ್ಷಕ್ಕೂ ಮೊದಲೇ ಕುರ್ಚಿ ಬಿಟ್ಟುಕೊಡ್ತೇನೆ ಎಂದು ಹೇಳಿದ್ದರು. ಆಗ ಪ್ರೆಸ್​​ ಮುಂದೆ ಹೇಳಲಿಲ್ಲ. ಪ್ರೆಸ್ ಮುಂದೆ ಘೋಷಣೆ ಮಾಡದಿದ್ದರಿಂದ ಈ ರೀತಿ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮ ಮಾತಿಗೆ ಓಗೊಟ್ಟು ನಾವು ಒಪ್ಪಿಕೊಂಡಿದ್ದೇವೆ. ಆದರೆ ಈಗ ರಾಹುಲ್ ಗಾಂಧಿಯವರ ಕಡೆ ಬೊಟ್ಟು ಮಾಡೋದು ಶೋಭೆ ತರಲ್ಲ. ಇದು ಸಿದ್ದರಾಮಯ್ಯನವರ ವರ್ಚಸ್ಸಿಗೂ ತರುವುದಿಲ್ಲ ಎಂದು ಡಿ.ಕೆ. ಬ್ರದರ್ಸ್ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯನವರನ್ನು ಕರೆಸಿ ಮಾತಾಡಿ, ಅಧಿಕಾರ ಹಸ್ತಾಂತರದ ಬಗ್ಗೆ ಸ್ಪಷ್ಟವಾಗಿ ಹೇಳಬೇಕು, ಆಗುತ್ತೋ ಆಗಲ್ವೋ ಅದಾದ್ರೂ ಕ್ಲಿಯರ್​ ಮಾಡಿ ಎಂದು ಕೆ.ಸಿ. ವೇಣುಗೋಪಾಲ್ ಅವರನ್ನು ಡಿಕೆ ಬ್ರದರ್ಸ್​ ಒತ್ತಾಯ ಮಾಡಿದ್ದಾರೆ. ಈಗಾಗಲೇ ಎರಡೂವರೆ ತಿಂಗಳು ಕಳೆದಿದ್ದು, ಒಪ್ಪಂದದಂತೆ ನಡೆದುಕೊಳ್ಳಬೇಕು ಎಂದು ಡಿಕೆಶಿ ಮತ್ತು ಡಿ.ಕೆ ಸುರೇಶ್ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಅಧಿಕಾರ ಹಸ್ತಾಂತರಿಸುವ ಹಂಚಿಕೆ ಒಪ್ಪಂದವನ್ನು ಜಾರಿಗೆ ತರುವಲ್ಲಿ ವಿಳಂಬವಾಗುವುದರಿಂದ ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗಳಲ್ಲಿ ಪಕ್ಷದ ಭವಿಷ್ಯದ ಮೇಲೆ ಹಾನಿಯಾಗಬಹುದು ಎಂದು ಡಿಕೆ ಸಹೋದರರು ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಹಿತಾಸಕ್ತಿಗಳ ವಿರುದ್ಧ ಸಾರ್ವಜನಿಕ ಹೇಳಿಕೆಗಳನ್ನು ನೀಡಿರುವ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರನ್ನು ತಡೆಯುವಲ್ಲಿ ಹೈಕಮಾಂಡ್ ವಿಫಲವಾಗಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಖರ್ಗೆ ಮತ್ತು ವೇಣುಗೋಪಾಲ್ ಅವರು ಸಂಭಾವ್ಯ ಪರಿವರ್ತನೆಯ ಕುರಿತು ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಿಲ್ಲ, ಈ ವಿಷಯಕ್ಕೆ ಸಾಮೂಹಿಕ ನಿರ್ಧಾರದ ಅಗತ್ಯವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.