ಬಾಯಿ ಮುಚ್ಚಿಕೊಂಡು ಇರಬೇಕೆಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು; ನಾನು-ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ: ಡಿ.ಕೆ ಶಿವಕುಮಾರ್; Video
ನನಗೆ ಯಾವ ಗೊಂದಲವೂ ಇಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನಾನು ಹಾಗೂ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದೇವೆ ಎಂಬುದು ನಮಗೆ ಗೊತ್ತು. ನಾವಿಬ್ಬರು ಕದ್ದು ಮುಚ್ಚಿ ಮಾತನಾಡಿಕೊಂಡಿಲ್ಲ.

ಬೆಂಗಳೂರು: ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಹೇಳಿದ್ದಾರೆ. ಅದನ್ನು ನಾವು ಪಾಲನೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪರ, ವಿರುದ್ಧ ಹೇಳಿಕೆಗಳನ್ನು ಶಾಸಕರು, ಮಂತ್ರಿಗಳು, ಯಾರೇ ನೀಡುತ್ತಿರಬಹುದು. ಈ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆಗಳೇ ಹೊರತು ಪಕ್ಷಕ್ಕೆ ಒಳ್ಳೆಯದನ್ನು ಮಾಡುವ ಹೇಳಿಕೆಗಳಲ್ಲ ಎಂದರು.
ಒಂದಷ್ಟು ಕಾಂಗ್ರೆಸ್ ನಾಯಕರು ನೀವು ಶುಭಸುದ್ದಿ ತರುವಿರಿ ಎಂದಿರುವ ಬಗ್ಗೆ ಕೇಳಿದಾಗ, "ಪ್ರತಿದಿನವೂ ನನಗೆ ಶುಭದಿನ, ಶುಭ ಜೀವನ, ಶುಭ ಪ್ರಾರಂಭ, ಯಶಸ್ಸಿನ ದಿನ, ಪ್ರತಿದಿನವೂ ಕಷ್ಟದ ದಿನವೇ. ಪ್ರತಿದಿನವೂ ಏನೂ ಸುಲಭವಾಗಿ ಇರುವುದಿಲ್ಲ. ಜನರ ಕಷ್ಟಗಳನ್ನು ಬಗೆಹರಿಸಬೇಕಾದರೆ ಕಷ್ಟ ಕಾರ್ಪಣ್ಯಗಳು, ಅಡಚಣೆಗಳು, ತೊಡಕುಗಳು ಇದ್ದೇ ಇರುತ್ತವೆ. ಟೀಕೆಗಳು ಬರುತ್ತಲೇ ಇರುತ್ತವೆ. ಟೀಕೆಗಳನ್ನು ಎದುರಿಸಲೇ ಬೇಕು. ನಮ್ಮ ಕೆಲಸವನ್ನು ಮುಂದುವರೆಸಲೇ ಬೇಕು ಎಂದು ಉತ್ತರಿಸಿದರು.
ಹೈಕಮಾಂಡ್ ಗೊಂದಲವನ್ನು ಬೇಗ ಇತ್ಯರ್ಥ ಮಾಡಬೇಕು ಎನ್ನುವ ಬಗ್ಗೆ ಕೇಳಿದಾಗ, "ನನಗೆ ಯಾವ ಗೊಂದಲವೂ ಇಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನಾನು ಹಾಗೂ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದೇವೆ ಎಂಬುದು ನಮಗೆ ಗೊತ್ತು. ನಾವಿಬ್ಬರು ಕದ್ದು ಮುಚ್ಚಿ ಮಾತನಾಡಿಕೊಂಡಿಲ್ಲ. ನಮ್ಮ ಪಕ್ಷದ ವರಿಷ್ಠರು ಎಲ್ಲಾ ಸೇರಿ ಮಾತನಾಡಿಕೊಂಡಿದ್ದೇವೆ. ಬೇರೆಯವರೆಲ್ಲ ಇದಕ್ಕೆ ಟೆನ್ಷನ್ ತೆಗೆದುಕೊಳ್ಳುವುದು, ಹೇಳಿಕೆ ಕೊಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ" ಎಂದರು.
ನಾವು ಮಾತನಾಡಿದರೆ ನೋಟಿಸ್ ನೀಡುತ್ತಾರೆ ಯತೀಂದ್ರ ಮಾತನಾಡಿದರೆ ಏಕೆ ನೋಟಿಸ್ ನೀಡುವುದಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರು ಪ್ರಶ್ನಿಸಿರುವ ಬಗ್ಗೆ ಕೇಳಿದಾಗ, "ಈ ಬಗ್ಗೆ ಹೈಕಮಾಂಡ್ ಅನ್ನು ಕೇಳೋಣ" ಎಂದರು.
ದೆಹಲಿಗೆ ಹೋದ ಮೇಲೆ ಎಲ್ಲಾ ನಾಯಕರನ್ನು, ಯಾರು ಸಿಗುತ್ತಾರೋ ಅವರನ್ನು ಭೇಟಿ ಮಾಡಲಾಗುವುದು. ಸಂಸತ್ ಅಧಿವೇಶನ ನಡೆಯುತ್ತಿರುತ್ತದೆ. ಬಿಡುವಿದ್ದರೆ ಖಂಡಿತವಾಗಿ ಭೇಟಿ ಮಾಡುತ್ತೇನೆ" ಎಂದರು. ಇಂದು ಸಂಜೆ 4 ಗಂಟೆಗೆ ಎಐಸಿಸಿಯಲ್ಲಿ ಸಭೆಯಿದೆ. ವಿವಿಧ ಚುನಾವಣೆಗಳು ಹಾಗೂ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗುವುದು. ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆಯಿದೆ. ಆದ ಕಾರಣಕ್ಕೆ ನನ್ನನ್ನು ಚರ್ಚೆ ನಡೆಸಲು ಕರೆದಿದ್ದಾರೆ. ನಾನು ಹೋಗುತ್ತಿದ್ದೇನೆ" ಎಂದರು.

ವಿವಿಧ ಇಲಾಖೆಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ: ಕೆ.ಜೆ ಜಾರ್ಜ್ ಬಳಿಕ ಶಾಸಕ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ!
ಕೇರಳಕ್ಕೆ ಹೋಗಿದ್ದೆ ನಂತರ ಅಸ್ಸಾಂಗೂ ತೆರಳಬೇಕು. ಇಂದು ಬಜೆಟ್ ಸಭೆ ಇರುವ ಕಾರಣಕ್ಕೆ ಮುಖ್ಯಮಂತ್ರಿಗಳ ಬಳಿ ಬರಲು ಆಗುವುದಿಲ್ಲ ಎಂದು ಮನವಿ ಮಾಡಿದ್ದೆ. ಸೋಮವಾರದಂದು ಅಧಿಕಾರಿಗಳ ಜೊತೆ ಬಜೆಟ್ ಸಭೆ ನಡೆಸಿದ್ದೇನೆ. ಅವರು ಎಲ್ಲವನ್ನು ವಿವರಿಸುತ್ತಾರೆ. ನಂತರ ಬಂದು ಅವರ ಬಳಿ ಮಾತನಾಡುತ್ತೇನೆ" ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


