ಸದನದಲ್ಲಿ 'CM ಕುರ್ಚಿ ಕಿತ್ತಾಟ' ಪ್ರತಿಧ್ವನಿ: ಸಿದ್ದರಾಮಯ್ಯ ಸೇರಿ 139 ಶಾಸಕರೂ ನನ್ನ ಬಲ ಎಂದ DCM ಡಿ.ಕೆ ಶಿವಕುಮಾರ್!
ಸಿದ್ದರಾಮಯ್ಯ ಅವರು ಶೇ. 100 ರಷ್ಟು ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಗುದ್ದಾಟ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡುವಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸಿದರು.
ಕಳೆದ ಒಂದು ತಿಂಗಳಿಂದ ಡಿ.ಕೆ. ಶಿವಕುಮಾರ್ ಅವರ ಮಾತು, ಟ್ವೀಟ್ ಗಳು ನೂರು ಅರ್ಥ ಬರುವಂತಿದ್ದು, ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ. ಆ ಸಂದರ್ಭ ಯಾವಾಗ ಬರುತ್ತದೆ ಎಂಬುದನ್ನು ಸ್ಪಷ್ಪಪಡಿಸಬೇಕು ಎಂದರು.
ಈ ಮಾತನಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. One man with Courage makes a majority ಎಂಬುದನ್ನು ನಾನು ನಂಬಿದ್ದೇನೆ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ, ಒಬ್ಬನೇ ಸಾಕು. ಆತನ ಜೊತೆ 140 ಜನರೂ ಇರುತ್ತಾರೆ, ಇನ್ನೂ ಜಾಸ್ತಿನೂ ಆಗುತ್ತಾರೆ. ನೋಡೋಣ 2028ರಲ್ಲಿ ಏನಾಗುತ್ತದೆ ಎಂದರು.
“ಅಶೋಕ್ ಅವರೇ, ನೀವು ಹಿರಿಯ ರಾಜಕಾರಣಿ. ಯಾರು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವಿದ್ಯಾರ್ಥಿ ನಾಯಕನಿಂದ ಬೆಳೆದು ಬಂದವನು. ನನ್ನದೇ ಆದ ಮೌಲ್ಯಗಳನ್ನು ಪಾಲಿಸಿಕೊಂಡು, ಉಳಿಸಿಕೊಂಡು ಬಂದಿದ್ದೇನೆ. ಪಕ್ಷ ನನಗೆ ಚಿಕ್ಕ ವಯಸ್ಸಿಗೆ ಟಿಕೆಟ್ ಕೊಟ್ಟಿದ್ದು, ಇಲ್ಲಿಯವರೆಗೂ ಬೆಳೆದಿದ್ದೇನೆ. ರಾಜಕೀಯದಲ್ಲಿ ಏಳು ಬೀಳು ಸಹಜ. ನಾನು ಎಂತೆಂಥಹವರ ಏಳು ಬೀಳು ನೋಡಿದ್ದೇನೆ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ಒಂದು ತಿಂಗಳು ಕಳೆದರೆ ನಾನು ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 139 ಶಾಸಕರೂ ನನ್ನ ಬಲ. ಸಿದ್ದರಾಮಯ್ಯ ಅವರು ಶೇ. 100 ರಷ್ಟು ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ. ನಾವು ಜನಕ್ಕೆ ಮಾತು ಕೊಟ್ಟಿದ್ದು, ಆ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ, ಮುಂದೆಯೂ ನಡೆಯುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಅವರ ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರು ಕೂಡ ಕಷ್ಟ ಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



