ಬಿ ನಾಗೇಂದ್ರ ನಿರ್ಗಮನ; ಡಿ.ಕೆ ಶಿವಕುಮಾರ್ ಸಂಪುಟದ ಖಾಲಿ 2 ಸಚಿವ ಸ್ಥಾನಗಳಿಗೆ ಪೈಪೋಟಿ ತೀವ್ರ
ಇದೀಗ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ಸಂಪುಟಕ್ಕೆ ರಾಜೀನಾಮೆ ನೀಡಿರುವುದರಿಂದ, ಒಟ್ಟು 34 ಸಚಿವರ ಮಂಜೂರಾದ ಸಂಖ್ಯಾಬಲ ಹೊಂದಿರುವ ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಂದು ಸ್ಥಾನ ಖಾಲಿಯಾಗಿದೆ.

ವಾಲ್ಮೀಕಿ ನಿಗಮದಲ್ಲಿ ಹಗರಣ ಆರೋಪಕ್ಕೆ ಗುರಿಯಾಗಿದ್ದ ಬಿ. ನಾಗೇಂದ್ರ ಅವರು ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಬಳಿಕ ನಿನ್ನೆ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಪುನಾರಚನೆಗೆ ವೇದಿಕೆ ಸಿದ್ಧವಾಗಿದೆ.
ಆಗಸ್ಟ್ 3ರಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊನೆಯ ಕ್ಷಣದಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಟ್ಟಿದ್ದರಿಂದ ಒಂದು ಸಚಿವ ಸ್ಥಾನ ಖಾಲಿ ಉಳಿದಿತ್ತು. ಡಿ ಕೆ ಶಿವಕುಮಾರ್ ಸಂಪುಟಕ್ಕೆ ಮಹಿಳೆಯರನ್ನು ಸೇರ್ಪಡೆ ಮಾಡಿಲ್ಲ ಎಂಬ ಟೀಕೆಗಳು ಕೇಳಿಬರುತ್ತಲೇ ಇವೆ.
ಇದೀಗ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ಸಂಪುಟಕ್ಕೆ ರಾಜೀನಾಮೆ ನೀಡಿರುವುದರಿಂದ, ಒಟ್ಟು 34 ಸಚಿವರ ಮಂಜೂರಾದ ಸಂಖ್ಯಾಬಲ ಹೊಂದಿರುವ ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಂದು ಸ್ಥಾನ ಖಾಲಿಯಾಗಿದೆ.
ಒಂದು ಖಾಲಿ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎನ್ನಲಾಗುತ್ತಿದ್ದು, ನಾಗೇಂದ್ರ ಅವರ ಸ್ಥಾನಕ್ಕೆ ಸಂಡೂರು ಶಾಸಕಿ, ಬಳ್ಳಾರಿ ಸಂಸದ ತುಕಾರಾಂ ಅವರ ಪತ್ನಿಯೂ ಆಗಿರುವ ಇ. ಅನ್ನಪೂರ್ಣ ತುಕಾರಾಂ ಅವರನ್ನು ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ನಾಗೇಂದ್ರ ಮತ್ತು ಅನ್ನಪೂರ್ಣ ಇಬ್ಬರೂ ಒಂದೇ ಜಿಲ್ಲೆಯವರು ಹಾಗೂ ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಸೇರಿದವರಾಗಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಕೆಜಿಎಫ್ ಶಾಸಕಿ ರೂಪಕಲಾ ಎಂ. ಶಶಿಧರ್ ಅವರ ತಂದೆ ಕೆ.ಎಚ್. ಮುನಿಯಪ್ಪ ಅವರನ್ನು ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಗೊಳಿಸಿ, ಸಮಾಜ ಕಲ್ಯಾಣ ಖಾತೆಯನ್ನೂ ನೀಡಿರುವ ಹಿನ್ನೆಲೆಯಲ್ಲಿ ರೂಪಕಲಾ ಅವರ ಹೆಸರು ಸಚಿವ ಸ್ಥಾನದ ಸ್ಪರ್ಧೆಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತ್ತೊಮ್ಮೆ ಸಚಿವರಾಗುವ ನಿರೀಕ್ಷೆಯನ್ನು ಕೈಬಿಟ್ಟಿಲ್ಲ. ಮೂಡಿಗೆರೆ ಕ್ಷೇತ್ರದ ಮೊದಲ ಬಾರಿಗೆ ಶಾಸಕರಾಗಿರುವ ನಯನಾ ಮೋಟಮ್ಮ, ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯೆಯಾಗಿರುವ ಬಲ್ಕೀಸ್ ಬಾನು ಹಾಗೂ ಪಕ್ಷದ ಸಾಗರೋತ್ತರ ಸಂಪರ್ಕ ವಿಭಾಗವನ್ನು ನಿರ್ವಹಿಸಿರುವ ಆರತಿ ಕೃಷ್ಣ ಅವರೂ ಏಕೈಕ ಮಹಿಳಾ ಸಚಿವ ಸ್ಥಾನದ ಮೇಲೆ ತೀವ್ರವಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ಹಾಗೂ ಆಡಳಿತ-ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟಿನಿಂದ ವಿಧಾನಮಂಡಲದ ಸಂಪೂರ್ಣ ಮುಂಗಾರು ಅಧಿವೇಶನ ಗದ್ದಲದಲ್ಲಿಯೇ ಅಂತ್ಯಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವುದೇ ರಾಜಕೀಯ ಸವಾಲುಗಳಿಲ್ಲದೆ ಸರ್ಕಾರದ ಕೆಲಸಗಳತ್ತ ಗಮನ ಹರಿಸಲು ಪೂರ್ಣ ಪ್ರಮಾಣದ ಸಚಿವ ಸಂಪುಟ ಹೊಂದುವ ನಿರೀಕ್ಷೆಯಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



