ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್
ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿದೆ. ಶೀಘ್ರದಲ್ಲೇ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದರು.

ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ವಿಪಕ್ಷಗಳ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರ ಹೈಕಮಾಂಡ್ ನಾಯಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಕೇಂದ್ರ ಸಚಿವರ ಮೇಲೆ ಕೇಸ್‌ಗಳು ಇಲ್ಲವೇ? ಲೋಕಸಭಾ ಚುನಾವಣೆಯಲ್ಲಿ ನಾವು ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಹೆಚ್ಚು ಗೆದ್ದಿರುವುದನ್ನು ಸಹಿಸದೆ ಬಿಜೆಪಿ ಈ ರೀತಿ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗೇಂದ್ರ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಪಕ್ಷ ನಿಷ್ಠ ನಾಯಕ, ಶಿಸ್ತಿನ ಸಿಪಾಯಿ ಮತ್ತು ಪಕ್ಷಕ್ಕೆ ಆಸ್ತಿಯಾಗಿದ್ದಾರೆ. ಪಕ್ಷದ ಹಿತಕ್ಕಾಗಿ ಅವರು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದಾರೆ. ಈ ಬಗ್ಗೆ ಹೈಕಮಾಂಡ್ ಮುಂದೆ ವಾಸ್ತವಾಂಶಗಳನ್ನು ಮಂಡಿಸಿದ್ದು, ಅಂತಿಮ ನಿರ್ಧಾರವನ್ನು ವರಿಷ್ಠರೇ ತೆಗೆದುಕೊಳ್ಳಲಿದ್ದಾರೆ ಸಿಎಂ ತಿಳಿಸಿದ್ದಾರೆ.
ಇದೇ ವೇಳೆ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆ ನಡೆಸುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಪಾದಯಾತ್ರೆ ಮಾಡುವವರನ್ನು ತಡೆಯಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡಲು ಅವರು ಸಿದ್ಧವಿರಲಿಲ್ಲ. ಭೋವಿ ನಿಗಮದ ಹಗರಣ ಸೇರಿದಂತೆ ಅವರ ಅವಧಿಯ ಹಲವು ಹಗರಣಗಳು ಬಯಲಾಗುವ ಭಯದಿಂದಲೇ ಪ್ರತಿಪಕ್ಷಗಳು ಚರ್ಚೆಯಿಂದ ಓಡಿಹೋಗಿವೆ ಎಂದು ವಾಗ್ದಾಳಿ ನಡೆಸಿದರು.
ಶೀಘ್ರದಲ್ಲೇ ಬೆಂಗಳೂರಿಗೆ ರಾಹುಲ್ ಗಾಂಧಿ ಭೇಟಿ
ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿದೆ. ಶೀಘ್ರದಲ್ಲೇ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಗಿಗ್ ವರ್ಕರ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



