ರಾಷ್ಟ್ರದ ಅತಿದೊಡ್ಡ ಭೂ ಲೂಟಿಯ ಮಹಾನಾಯಕ 'ನೈಸ್' ಕಂಪನಿ ಖರೀದಿಸುತ್ತಿದ್ದಾರೆ; ರಾಜ್ಯದ ಜನರಿಗೆ CM ಸ್ಪಷ್ಟನೆ ನೀಡಲಿ: HDK
ವಿಧಾನಸೌಧದ ಮೂರನೇ ಮಹಡಿಯಲ್ಲಿಕೂತು ಈ ಸಿಎಂ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ಬೇನಾಮಿ ಕಂಪನಿ ಮೂಲಕ ಯಾರ್ಯಾರು ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ನನಗಿದೆ.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೈಸ್ ಕಂಪನಿಯನ್ನು ಖರೀದಿಸಲು ಹೊರಟಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಯುವಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಹಾಲಿ ಮುಖ್ಯಮಂತ್ರಿಯೇ ನೈಸ್ ಕಂಪನಿ ಖರೀದಿಸಲು ಹೊರಟಿದ್ದಾರೆ. ನೈಸ್ ಕಂಪನಿಯನ್ನು ಯಾರು 'ಟೇಕ್ ಓವರ್' ಮಾಡುತ್ತಿದ್ದಾರೆಂದು ತಾಕತ್ತಿದ್ದರೆ ಸಿಎಂ ಡಿ.ಕೆ.ಶಿವಕುಮಾರ್ ಜನತೆಯ ಮುಂದೆ ಹೇಳಲಿ ಎಂದು ಸವಾಲನ್ನೂ ಹಾಕಿದ್ದಾರೆ.
ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ನೈಸ್ ಕಂಪನಿ ಅನುಷ್ಠಾನಕ್ಕೆ ತರುತ್ತಿದೆ. ಈ ಯೋಜನೆಯು ದೇಶದಲ್ಲೇ ಅತ್ಯಂತ ದೊಡ್ಡ ಹಗರಣ. ಅದನ್ನು ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು ಎಂದು ವಿವರಿಸಿದರು.
ನೈಸ್ ಕಂಪನಿ ಮತ್ತು ಬಿಎಂಐಸಿ ಯೋಜನೆಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಬದಲಿಗೆ, ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಂತಕ್ಕೆ ಖರೀದಿಸಲು ಮುಂದಾಗಿದ್ದಾರೆ ಎಂಬುದು ಗೊತ್ತಾಗಿದೆ. ಇತರರ ಕಂಪನಿಗಳನ್ನು ಬಳಸಿಕೊಂಡು ತಮ್ಮ ಹಣವನ್ನು ಹೂಡಿಕೆ ಮಾಡಿ, ನೈಸ್ ಅನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನನಗೆ ದೊರೆತಿದೆ. ಸೂಕ್ತ ಸಮಯದಲ್ಲಿ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಬಿಎಂಐಸಿ ಯೋಜನೆ ಹೆಸರಲ್ಲಿಸಾವಿರಾರು ಎಕರೆ ಲೂಟಿ ಹೊಡೆಯಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕುಳಿತು ಸಂತೆ ಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ತಿಳಿಸುತ್ತೇನೆ,'' ಎಂದು ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಕಂಪನಿಯು 20,000 ಎಕರೆಗೂ ಹೆಚ್ಚು ಜಮೀನನ್ನು 20 ವರ್ಷಗಳ ಹಿಂದೆಯೇ ಸ್ವಾಧೀನಕ್ಕೆ ಪಡೆದುಕೊಂಡಿದೆ. ಬೆಂಗಳೂರು–ಮೈಸೂರು ಮಧ್ಯೆ 111 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಿಸಬೇಕಿತ್ತು. ಆದರೆ, ಈವರೆಗೆ 5 ಕಿ.ಮೀ.ನಷ್ಟು ಹೆದ್ದಾರಿಯನ್ನಷ್ಟೇ ನಿರ್ಮಿಸಿದೆ. ರೈತರ ಜಮೀನನ್ನು ಕಸಿದುಕೊಂಡು, ಪರಿಹಾರವನ್ನೂ ನೀಡದೆ ಅನ್ಯಾಯ ಮಾಡಿರುವ ಕಂಪನಿಯನ್ನು ಏಕೆ ಖರೀದಿಸುತ್ತಿದ್ದೇನೆ ಎಂಬುದನ್ನು ಮುಖ್ಯಮಂತ್ರಿ ಅವರು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ಮುಖ್ಯಮಂತ್ರಿಯೇ ರಾಷ್ಟ್ರದಲ್ಲಿ ಅತಿದೊಡ್ಡ ಭೂ ಲೂಟಿಯ ಮಹಾನಾಯಕ. ನನಗಿರುವ ಮಾಹಿತಿ ಪ್ರಕಾರ, ಬೇನಾಮಿ ಕಂಪನಿಗಳ ಮೂಲಕ ಈ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿಸಲು ಹೊರಟಿದ್ದಾರೆ.
ಈ ರಾಜ್ಯದಲ್ಲಿರೈತರಿಗೊಂದು, ಸಿಎಂಗೊಂದು ಕಾನೂನು ಇದೆಯಾ? ವಿಧಾನಸೌಧದ ಮೂರನೇ ಮಹಡಿಯಲ್ಲಿಕೂತು ಈ ಸಿಎಂ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ಬೇನಾಮಿ ಕಂಪನಿ ಮೂಲಕ ಯಾರ್ಯಾರು ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ನನಗಿದೆ. ಈ ಸಿಎಂ ಎದೆ ಮುಟ್ಟಿಕೊಂಡು ಮಾತನಾಡಲಿ. ಈ ಬಗ್ಗೆ ರಾಜ್ಯದ ಜನತೆಯ ಮುಂದೆ ಸತ್ಯವನ್ನು ಬಾಯಿ ಬಿಡಲಿ,'' ಎಂದು ಸವಾಲೆಸೆದರು.
ನೈಸ್ ರಸ್ತೆ ಬಳಕೆಗೆ ಶುಲ್ಕ ಸಂಗ್ರಹಿಸಬಾರದು. ಆದರೆ ಸರ್ಕಾರವು ಆ ಕಂಪನಿಯ ಬೆಂಬಲಕ್ಕೆ ನಿಂತಿದೆ. ಅಲ್ಲಿಗೆ ಜನ ನುಗ್ಗಿಸಿ ಗಲಾಟೆ ಮಾಡಿ ಎಂದು ನಮಗೆ ಸವಾಲು ಹಾಕುವುದರಲ್ಲಿ ಅರ್ಥವಿಲ್ಲ. ನಾವು ಶಾಂತಿಪ್ರಿಯರು. ಕಾನೂನು ಪ್ರಕಾರವೇ ಹೋರಾಟ ನಡೆಸುತ್ತೇವೆ. ಸರ್ಕಾರದ ಈ ಅಕ್ರಮಗಳ ವಿರುದ್ಧ ರಾಜ್ಯದ ಇಡೀ ಯುವ ಸಮುದಾಯ ತಿರುಗಿ ಬೀಳಬೇಕು’ ಎಂದರು.
ಕುಮಾರಸ್ವಾಮಿ ಬೇನಾಮಿ ಆಸ್ತಿ ಹೊಂದಿದ್ದಾರೆಂದು ಯಾರೋ ಮಾತನಾಡಿದ್ದನ್ನು ಗಮನಿಸಿದ್ದೇನೆ. ನನ್ನ ಬೇನಾಮಿ ಆಸ್ತಿ ಯಾವುದಾದರೂ ಇದ್ದರೆ ತೋರಿಸಲಿ. ಇದು ಈ ಸರಕಾರಕ್ಕೆ ನನ್ನ ನೇರ ಸವಾಲು. ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




