'ಮನುಷ್ಯ ಯೋಗ್ಯ ಎಂದು ತಿಳಿದಾಗ ಪಟ್ಟಾಭಿಷೇಕ ತಾನಾಗಿಯೇ ಆಗುತ್ತೆ: ಯಾರೇ CM ಆದರೂ ಹೊಟ್ಟೆ ಕಿಚ್ಚು ಪಡುವ ಜಾಯಮಾನ ದೇವೇಗೌಡರ ಕುಟುಂಬದ್ದಲ್ಲ'
ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಕಸಿಯುತ್ತಿದೆ. ಅಭಿವೃದ್ಧಿ ಹೆಸರಲ್ಲಿ ರೈತರ ಮರಣಶಾಸನ ಬರೆಯಲು ಹೊರಟಿದೆ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತಾಡುತ್ತಿದ್ದೀರಾ? ನೇರವಾಗಿ ಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಈ ಮನುಷ್ಯ ಯೋಗ್ಯನಿದ್ದಾನೆ, ಅರ್ಹನಿದ್ದಾನೆ ಇವನಿಗೆ ಅವಕಾಶ ಕೊಡಬೇಕು ಎಂದಾಗ ಪಟ್ಟಾಭಿಷೇಕ ತಾನಾಗಿಯೇ ಆಗುತ್ತದೆ ಎಂದು ಜೆಡಿಎಸ್‌ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡ ಬಿಡದಿ ಟೌನ್‌ಶಿಪ್ ವಿರೋಧಿಸಿ ಬಹಿರಂಗ ಸಭೆ ಹಾಗೂ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಈ ಮನುಷ್ಯ ಯೋಗ್ಯನಿದ್ದಾನೆ, ಅರ್ಹನಿದ್ದಾನೆ ಇವನಿಗೆ ಅವಕಾಶ ಕೊಡಬೇಕು ಎಂದಾಗ ಪಟ್ಟಾಭಿಷೇಕ ತಾನಾಗಿಯೇ ಆಗುತ್ತದೆ ಎಂದಿದ್ದಾರೆ. ಯಾರೇ ಮುಖ್ಯಮಂತ್ರಿಯಾದರು ಹೊಟ್ಟೆ ಕಿಚ್ಚು ಬೀಳುವ ಜಾಯಮಾನ ದೇವೇಗೌಡರ ಕುಟುಂಬದ್ದಲ್ಲ.
ಒಕ್ಕಲುತನ ಮಾಡುವ ಹಾಗೂ ಭೂಮಿ ತಾಯಿಯನ್ನು ನಂಬಿರುವ ಪ್ರತಿಯೊಬ್ಬ ಬಡ ಒಕ್ಕಲಿಗರ ರಕ್ಷಣೆ ಮಾಡುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ರೈತರ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದಿದ್ದಾರೆ.
ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಕಸಿಯುತ್ತಿದೆ. ಅಭಿವೃದ್ಧಿ ಹೆಸರಲ್ಲಿ ರೈತರ ಮರಣಶಾಸನ ಬರೆಯಲು ಹೊರಟಿದೆ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತಾಡುತ್ತಿದ್ದೀರಾ? ನೇರವಾಗಿ ಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಜಿಲ್ಲೆಯ 4 ಶಾಸಕರಿಗೆ ಆಶೀರ್ವಾದ ಮಾಡಿ ಸಚಿವ ಸ್ಥಾನ ನೀಡಿದ್ದಾರೆ. ಆದರೆ ಜನರ ಕಷ್ಟ ಕೇಳುವ ಕೆಲಸ ಸಚಿವರು ಮಾಡುತ್ತಿಲ್ಲ. ಈ ಯೋಜನೆ ರೂಪುಗೊಂಡಾಗ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿರಲಿಲ್ಲ. ಸಿಎಂ ಕುರ್ಚಿ ನೋಡಿ ಹೊಟ್ಟೆಕಿಚ್ಚು ಪಡುವ ಜಾಯಮಾನ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.
ಇಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರೈತರ ವಿರುದ್ಧ ತೆಗೆದುಕೊಂಡಿರುವ ಪ್ರತಿಯೊಂದು ನಿರ್ಧಾರಗಳು ಸಹ ತಪ್ಪಾಗಿವೆ. ನಾವೆಲ್ಲರೂ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಿಡದಿ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸೋಣ ಎಂದರು. ಅಂತಿಮವಾಗಿ ರೈತರಿಗೆ ಜಯ ಸಿಗುವವರೆಗೆ ಹೋರಾಟ ಮಾಡೋಣ ಎಂದೂ ಹೇಳಿದ್ದಾರೆ.
25 ವರ್ಷಗಳಿಂದ ಭೂಮಿ ಕಳೆದುಕೊಂಡ ಬಡ ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಒಪ್ಪಂದದ ರಸ್ತೆಯೂ ಪೂರ್ಣಗೊಂಡಿಲ್ಲ . ಜನರ ಜೇಬಿಗೆ ಕನ್ನ ಹಾಕುತ್ತಿರುವ ನೈಸ್ ಅಕ್ರಮ ಟೋಲ್ ಕಲೆಕ್ಷನ್ ತಕ್ಷಣ ನಿಲ್ಲಿಸಿ, ಹೆಚ್ಚುವರಿ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ನಾವು ಅಭಿವೃದ್ಧಿ ವಿರೋಧಿಗಳಲ್ಲ. ಉಪನಗರ ಯೋಜನೆ ಮಾಡಲೇಬೇಕೆಂದಿದ್ದರೆ ಕೆಐಎಡಿಬಿಯಲ್ಲಿ ಲಭ್ಯವಿರುವ ಬರಡು ಭೂಮಿಯನ್ನು ಬಳಸಿಕೊಳ್ಳಿ. ಅಲ್ಲಿ ಸ್ಮಾರ್ಟ್ ಸಿಟಿ ಮಾಡಲು ನಾವು ಸಿದ್ಧ. ಆದರೆ ಸಣ್ಣ, ಅತಿ ಸಣ್ಣ ರೈತರ ಹೈನುಗಾರಿಕೆ, ಕೃಷಿ ಭೂಮಿ ಕಸಿಯಬೇಡಿ ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



