ಸಚಿವ ಸ್ಥಾನಕ್ಕಾಗಿ ಕೃಷ್ಣಪ್ಪ ಬಿಗಿ ಪಟ್ಟು: ಡಿಕೆಶಿ ಸಂಪುಟದಿಂದ ಒಬ್ಬರಿಗೆ ಕೊಕ್? 'ನಾನು ರಾಜೀನಾಮೆಗೆ ಸಿದ್ಧ' ಎಂದ ಬಾಲಕೃಷ್ಣ!
ಇದೀಗ ಕೃಷ್ಣಪ್ಪ ಅವರನ್ನು ಸಮಾಧಾನ ಪಡಿಸಲು ಒಬ್ಬರು ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಸಚಿವ ಎಚ್ ಸಿ ಬಾಲಕೃಷ್ಣ ಅವರು ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ವಿಜಯನಗರ ಶಾಸಕ ಎಂ. ಕೃಷ್ಣಪ್ಪ ತಮಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.
ಕೃಷ್ಣಪ್ಪ ಅವರನ್ನು ಸಮಾಧಾನ ಪಡಿಸಲು ಖುದ್ದು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಕೃಷ್ಣಪ್ಪರನ್ನು ಸಮಾಧಾನಪಡಿಸಲು ಹಲವು ಹುದ್ದೆಗಳನ್ನು ಆಫರ್ ಮಾಡಿದ್ದರೂ, ಅವರು ಯಾವುದನ್ನೂ ಸ್ವೀಕರಿಸದೆ ಸಚಿವ ಸ್ಥಾನವೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ.
ಇದೀಗ ಕೃಷ್ಣಪ್ಪ ಅವರನ್ನು ಸಮಾಧಾನ ಪಡಿಸಲು ಒಬ್ಬರು ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಸಚಿವ ಎಚ್ ಸಿ ಬಾಲಕೃಷ್ಣ ಅವರು ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಮೊದಲ ಬಾರಿ ಸಚಿವ ಸ್ಥಾನ ಸಿಕ್ಕಿದ್ದರೂ ರಾಜೀನಾಮೆ ಬಗ್ಗೆ ಮಾತಾಡಿದ್ದಾರೆ. ಪಕ್ಷ ಹೇಳಿದರೆ ತ್ಯಾಗಕ್ಕೆ ಸಿದ್ಧವಿದ್ದೇನೆ ಎಂದು ನೂತನ ಸಚಿವ ಬಾಲಕೃಷ್ಣ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅಸಮಾಧಾನಿತರು ಸಚಿವ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪಿಲ್ಲ ಎಂದೂ ಹೇಳಿದ್ದಾರೆ.
ಅಸಮಾಧಾನಿತರ ಬಗ್ಗೆ ಮಾತನಾಡಿದ ಬಾಲಕೃಷ್ಣ ಅವರು, ‘ಕೆಲವರನ್ನು ಸಮಾಧಾನಪಡಿಸಲಾಗಿದೆ. ಇನ್ನೂ ಕೆಲವರೊಂದಿಗೆ ಸಂಧಾನ ನಡೆಯುತ್ತಿದೆ. ಕೃಷ್ಣಪ್ಪ ಅವರು ಒಕ್ಕಲಿಗರು. ಅವರನ್ನು ಸಂಪುಟದೊಳಗೆ ಸೇರಿಸಲು ನಾನು ರಾಜೀನಾಮೆಗೂ ಸಿದ್ಧ’ ಎಂದು ಹೇಳಿದ್ದಾರೆ. ಪಕ್ಷ ಹೇಳಿದರೆ ತ್ಯಾಗಕ್ಕೆ ಸಿದ್ಧವಿದ್ದೇನೆ, ನನ್ನ ಸ್ಥಾನ ಅವರಿಗೆ ಕೊಡ್ತಾರೆ ಎಂದರೆ ನನಗೆ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



