ರಾಜಕೀಯ

ನಮಗೆ ಸಚಿವ ಸ್ಥಾನ ಸಿಗದಂತೆ ಎಂ.ಬಿ ಪಾಟೀಲ್ ಸಂಚು ರೂಪಿಸಿದ್ದಾರೆ: ಇಬ್ಬರು ಶಾಸಕರ ಆರೋಪ

ತಮ್ಮಗೆ ಆಗಿರುವ ಅನ್ಯಾಯಕ್ಕೆ ಎಂ.ಬಿ. ಪಾಟೀಲ ಅವರೇ ನೇರ ಹೊಣೆ ಎಂದು ಆರೋಪಿಸಿದರು. ವಿಜಯಪುರ ಜಿಲ್ಲೆಯಲ್ಲಿ ಇತರ ಕಾಂಗ್ರೆಸ್ ನಾಯಕರ ರಾಜಕೀಯ ಬೆಳವಣಿಗೆಯನ್ನು ತಡೆಯುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ದೂರಿದರು.

ನಮಗೆ ಸಚಿವ ಸ್ಥಾನ ಸಿಗದಂತೆ ಎಂ.ಬಿ ಪಾಟೀಲ್ ಸಂಚು ರೂಪಿಸಿದ್ದಾರೆ: ಇಬ್ಬರು ಶಾಸಕರ ಆರೋಪ
ಎಂ ಬಿ ಪಾಟೀಲ್
Published On :

ವಿಜಯಪುರ: ಸಚಿವ ಎಂ.ಬಿ. ಪಾಟೀಲ ಹಾಗೂ ಕಾಂಗ್ರೆಸ್ ಶಾಸಕರಾದ ಸಿ.ಎಸ್. ನಾಡಗೌಡ ಮತ್ತು ಯಶವಂತರಾಯಗೌಡ ಪಾಟೀಲ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗ ರಾಜಕೀಯ ಸಂಘರ್ಷಕ್ಕೆ ತಿರುಗಿವೆ. ಸಚಿವ ಸ್ಥಾನ ಸಿಗದಂತೆ ಮಾಡಲು ಎಂ.ಬಿ. ಪಾಟೀಲ ಸಂಚು ರೂಪಿಸಿದ್ದಾರೆ ಎಂದು ಇಬ್ಬರು ಶಾಸಕರು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಾಡಗೌಡ, ತಮ್ಮಗೆ ಆಗಿರುವ ಅನ್ಯಾಯಕ್ಕೆ ಎಂ.ಬಿ. ಪಾಟೀಲ ಅವರೇ ನೇರ ಹೊಣೆ ಎಂದು ಆರೋಪಿಸಿದರು. ವಿಜಯಪುರ ಜಿಲ್ಲೆಯಲ್ಲಿ ಇತರ ಕಾಂಗ್ರೆಸ್ ನಾಯಕರ ರಾಜಕೀಯ ಬೆಳವಣಿಗೆಯನ್ನು ತಡೆಯುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ದೂರಿದರು.

ನನ್ನ, ಯಶವಂತರಾಯಗೌಡ ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರಂತಹ ನಾಯಕರು ವಿಜಯಪುರ ಜಿಲ್ಲೆಯಲ್ಲಿ ರಾಜಕೀಯವಾಗಿ ಬೆಳೆಯದಂತೆ ನೋಡಿಕೊಂಡಿರುವವರು ಎಂ.ಬಿ. ಪಾಟೀಲ. ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ಮತ್ತು ಏಕಪಕ್ಷೀಯ ಹಿಡಿತವನ್ನು ಉಳಿಸಿಕೊಳ್ಳಲು ಅವರು ಬಯಸುತ್ತಾರೆ. ಇತರ ಸಮುದಾಯಗಳ ನಾಯಕರು ಬೆಳೆಯುವುದನ್ನು ಅವರು ಸಹಿಸುವುದಿಲ್ಲ ಎಂದು ನಾಡಗೌಡ ಹೇಳಿದರು.

ಯಶವಂತರಾಯಗೌಡ ಪಾಟೀಲ, ಎಂ.ಬಿ. ಪಾಟೀಲ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರನ್ನೇ ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿಜಯಪುರದಲ್ಲಿ ನಮಗೆ ಅಡ್ಡಿಯಾಗುತ್ತಿರುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಕಳೆದ ಹಲವು ದಶಕಗಳಿಂದ ಅವರೊಂದಿಗೆ ನನ್ನ ಸಂಬಂಧ ಉತ್ತಮವಾಗಿಲ್ಲ ಎಂಬುದು ಬಹಿರಂಗ ರಹಸ್ಯ ಎಂದು ಯಶವಂತರಾಯಗೌಡ ಪಾಟೀಲ ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ತಾವು ಶಾಸಕ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿದರು. ಆದರೆ ಆ ರಾಜೀನಾಮೆಯನ್ನು ಅಂಗೀಕರಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದರು.

ಇನ್ನೊಂದೆಡೆ, ಸಿ ಎಸ್ ನಾಡಗೌಡ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಶಾಸಕ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ತಮ್ಮ ರಾಜಕೀಯ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ ಯಶವಂತರಾಯಗೌಡ ಪಾಟೀಲ, ಎಂ.ಬಿ. ಪಾಟೀಲ ವಿರುದ್ಧ ಬಹಿರಂಗ ರಾಜಕೀಯ ಸಮರ ಘೋಷಿಸಿದರು. 2028ರ ವಿಧಾನಸಭೆ ಚುನಾವಣೆ ತಮ್ಮ ಮತ್ತು ಎಂ.ಬಿ. ಪಾಟೀಲ ನಡುವಿನ ನೇರ ರಾಜಕೀಯ ಹೋರಾಟವಾಗಲಿದೆ ಎಂದು ಹೇಳಿದರು.

ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಲ್ಲಿ ಪಕ್ಷದ ಹೈಕಮಾಂಡ್ ವಿಫಲವಾಗಿದೆ. ಇದೇ ಕಾರಣದಿಂದ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಆರೋಪಿಸಿದರು.

ಯಶವಂತರಾಯಗೌಡ ಪಾಟೀಲ ಹಾಗೂ ನಾಡಗೌಡ ಇಬ್ಬರೂ ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂದಿನ ರಾಜಕೀಯ ನಡೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ, ಇಬ್ಬರು ಶಾಸಕರಿಗೂ ಸಚಿವ ಸ್ಥಾನ ಸಿಗದಿರುವುದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಆರೋಪಗಳು ಆಧಾರರಹಿತ. ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬ ನಿರ್ಧಾರ ಸಂಪೂರ್ಣವಾಗಿ ಪಕ್ಷದ ನಾಯಕತ್ವದ ವ್ಯಾಪ್ತಿಗೆ ಸೇರಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.