ಸಚಿವ ಸಂಪುಟ ವಿಸ್ತರಣೆಯಲ್ಲಿ ಭಾರೀ ಹೈಡ್ರಾಮಾ: ಕೊನೆಯ ಕ್ಷಣದಲ್ಲಿ ಪಟ್ಟಿ ಬದಲಿಸಿದ ಹೈಕಮಾಂಡ್, ಜಮೀರ್, ಎಸ್.ಎಸ್ ಮಲ್ಲಿಕಾರ್ಜುನಗೆ ಒಲಿದ ಅದೃಷ್ಟ..!
ಐದು ಬಾರಿ ಚಾಮರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿರುವ ಜಮೀರ್ ಅಹ್ಮದ್ ಖಾನ್ ಅವರು, ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಹೆಚ್ಚು ಚರ್ಚೆಯಲ್ಲಿದ್ದ ನಾಯಕರಾಗಿದ್ದರು.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಕೊನೆಯ ಕ್ಷಣದವರೆಗೂ ತೀವ್ರ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಯಿತು.
ಅಂತಿಮ ಹಂತದಲ್ಲಿ ಹೈಕಮಾಂಡ್ ಸಚಿವರ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿ, ವಿವಾದಗಳ ನಡುವೆಯೂ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಮರು ಅವಕಾಶ ನೀಡಿದರೆ, ಕೊನೆ ಕ್ಷಣದ ರಾಜಕೀಯ ಬೆಳವಣಿಗೆಗಳ ನಡುವೆ ಎಸ್.ಎಸ್. ಮಲ್ಲಿಕಾರ್ಜುನಗೂ ಸಚಿವ ಸ್ಥಾನ ಒಲಿಯಿತು. ಮತ್ತೊಂದೆಡೆ, ಆರಂಭಿಕ ಪಟ್ಟಿಯಲ್ಲಿ ಹೆಸರು ಇದ್ದರೂ ಮಂಕಾಳು ವೈದ್ಯ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾದರು.
ಐದು ಬಾರಿ ಚಾಮರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿರುವ ಜಮೀರ್ ಅಹ್ಮದ್ ಖಾನ್ ಅವರು, ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಹೆಚ್ಚು ಚರ್ಚೆಯಲ್ಲಿದ್ದ ನಾಯಕರಾಗಿದ್ದರು.
ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ವಿರುದ್ಧ ಕೆಲಸ ಮಾಡಿರುವುದಾಗಿ ಹೇಳಲಾದ ಆಡಿಯೋ ವೈರಲ್ ಆದ ಬಳಿಕ ಹೈಕಮಾಂಡ್ ಜಮೀರ್ ಅವರ ಮೇಲೆ ಕೆಂಡಾಮಂಡಲಗೊಂಡಿತ್ತು. ಈ ಬೆಳವಣಿಗೆಯನ್ನು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಗಂಭೀರವಾಗಿ ಪರಿಗಣಿಸಿತ್ತು.
ಈ ವಿವಾದದ ಬಳಿಕ ಜಮೀರ್ ಅವರು ರಾಜ್ಯ ನಾಯಕತ್ವ ಹಾಗೂ ಎಐಸಿಸಿ ನಾಯಕರ ಮುಂದೆ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರು ಜಮೀರ್ ಅವರನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸಿದ್ದರು.
ಬಳಿಕ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಜಮೀರ್ ಅವರನ್ನು "ಸಮರ್ಥ ನಾಯಕ" ಎಂದು ಬಣ್ಣಿಸಿ, ಅಲ್ಪಸಂಖ್ಯಾತ ಸಮುದಾಯದ ಪ್ರಾತಿನಿಧ್ಯ ಬಲಪಡಿಸಲು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜಮೀರ್‌ಗೆ ಮತ್ತೆ ಸಚಿವ ಸ್ಥಾನ ದೊರೆತಿದೆ.
ಇನ್ನೊಂದೆಡೆ, ಕರಾವಳಿಯ ಮೊಗವೀರ ಸಮುದಾಯದ ಪ್ರಮುಖ ನಾಯಕ ಹಾಗೂ ಭಟ್ಕಳ-ಹೊನ್ನಾವರ ಶಾಸಕ ಮಂಕಾಳು ವೈದ್ಯ ಅವರ ಹೆಸರು ಆರಂಭಿಕ ಸಚಿವರ ಪಟ್ಟಿಯಲ್ಲಿ ಇದ್ದರೂ, ಕೊನೆ ಕ್ಷಣದಲ್ಲಿ ಕೈಬಿಡಲಾಯಿತು. ಬಳಿಕ ಕಾಂಗ್ರೆಸ್ ಇದನ್ನು 'ಮುದ್ರಣ ದೋಷ' ಎಂದು ಸಮರ್ಥಿಸಿಕೊಂಡಿದ್ದು, ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಮಂಕಾಳು ವೈದ್ಯ ಅವರ ಬದಲಿಗೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ನೀಡಲಾಯಿತು. ಸಚಿವ ಸ್ಥಾನ ಸಿಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ಮಲ್ಲಿಕಾರ್ಜುನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಎಸ್.ಎಸ್. ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಪುತ್ರ. ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿದ್ದು, ಪುತ್ರ ಸಮರ್ಥ ಶಾಮನೂರು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾರೆ.
ಹಲವು ದಶಕಗಳಿಂದ ದಾವಣಗೆರೆಯಲ್ಲಿ ಪ್ರಭಾವಿ ರಾಜಕೀಯ ಕುಟುಂಬವಾಗಿರುವ ಶಾಮನೂರು ಕುಟುಂಬವು ವೀರಶೈವ-ಲಿಂಗಾಯತ ಮಹಾಸಭೆಯ ನೇತೃತ್ವ ವಹಿಸಿಕೊಂಡಿದ್ದು, ಲಿಂಗಾಯತ ಸಮುದಾಯದಲ್ಲೂ ಗಮನಾರ್ಹ ಪ್ರಭಾವ ಹೊಂದಿದೆ.
ಪಕ್ಷದ ಮೂಲಗಳ ಪ್ರಕಾರ, ಪಟ್ಟಿಯಲ್ಲಿ ಬದಲಾವಣೆ ಆದ ಬಳಿಕ ಮಂಕಾಳು ವೈದ್ಯ ಅವರಿಗೆ ಮುಖ್ಯಮಂತ್ರಿ ಅಥವಾ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಅವಕಾಶವೂ ದೊರೆಯಲಿಲ್ಲ ಎಂದು ತಿಳಿದುಬಂದಿದೆ.
ಜಮೀರ್ ಅಹ್ಮದ್ ಖಾನ್ ಅವರಿಗೆ ಮತ್ತೆ ಅವಕಾಶ ನೀಡಿರುವುದು ಹಾಗೂ ಮಂಕಾಳು ವೈದ್ಯ ಅವರನ್ನು ಕೊನೆ ಕ್ಷಣದಲ್ಲಿ ಕೈಬಿಟ್ಟಿರುವುದು ಕಾಂಗ್ರೆಸ್‌ನಲ್ಲಿ ಪಕ್ಷದ ಶಿಸ್ತು ಮತ್ತು ರಾಜಕೀಯ ಅನಿವಾರ್ಯತೆಗಳ ನಡುವಿನ ಸಮತೋಲನದ ಪ್ರಯತ್ನ ಎಂಬುದಾಗಿ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




