CM ಸಿದ್ದರಾಮಯ್ಯ ಪದತ್ಯಾಗಕ್ಕೂ ಸಿದ್ಧರಾಗಿದ್ದಾರೆ: ಮಾಜಿ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ; Video
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಗೊಂದಲ ಬಗೆಹರಿಸಬೇಕು ಎಂದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯಲು ಮತ್ತು ಪದತ್ಯಾಗ ಎರಡಕ್ಕೂ ಸಿದ್ಧರಾಗಿದ್ದಾರೆ ಎಂದು ಸಿಎಂ ಆಪ್ತ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಮಂಗಳವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಗೊಂದಲ ಬಗೆಹರಿಸಬೇಕು. ಗೊಂದಲ ಬಗೆಹರಿಸಿದಷ್ಟು ರಾಜ್ಯಕ್ಕೆ ಒಳ್ಳೆಯದು. ಗೊಂದಲ ಮುಂದುವರಿಯಲು ಹೈಕಮಾಂಡ್ ಅವಕಾಶ ನೀಡಬಾರದು ಎಂದರು.
ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯಲೂ ಸಿದ್ದರಾಗಿದ್ದಾರೆ ಮತ್ತು ಪದತ್ಯಾಗಕ್ಕೂ ಸಿದ್ದರಾಗಿದ್ದಾರೆ ಎಂದರು.
ಇದರಲ್ಲಿ ಪಕ್ಷದ ಭವಿಷ್ಯ ಅಡಗಿರುತ್ತದೆ. ಹೀಗಾಗಿ ಹೈಕಮಾಂಡ್ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಸಿಎಂ ಜೊತೆಗೆ ಸಭೆ ಮಾಡಿದಾಗಲೂ ಅವರು ಓಪನ್ ಮೈಂಡ್ನಲ್ಲಿ ಇದ್ದಾರೆ. ರಾಹುಲ್ ಗಾಂಧಿ ಸೂಚನೆ ಪಾಲನೆ ಮಾಡುತ್ತೇನೆ. ಆಗ ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಸಿಎಂ ಅಭಿಮತ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ತೆಗೆದುಕೊಳ್ಳುವ ತೀರ್ಮಾನದಂತೆ ನಡೆಯೋಣ ಎಂದಿದ್ದಾರೆ ಎಂದು ತಿಳಿಸಿದರು.
ಅಧಿಕಾರ ಶಾಶ್ವತವಲ್ಲ. ಅಧಿಕಾರ ಕಳೆದುಕೊಂಡವರು ಗಳಿಸ್ತಾರೆ. ರಾಹುಲ್ ಗಾಂಧಿ ನಿರ್ದೇಶನದಂತೆ ಹೋಗಬೇಕು ಎಂಬುದು ಸಿಎಂ ಮನಸ್ಥಿತಿ. ಸಿದ್ದರಾಮಯ್ಯ ಮುಂದುವರಿಯಬೇಕು ಎಂಬ ಬಗ್ಗೆ ನಾವೆಲ್ಲ ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ಗೆ ಹೇಳಿದ್ದೇವೆ ಎಂದರು.
ದಲಿತ ಸಿಎಂ ಆಗಬೇಕು ಎಂಬುದಕ್ಕೆ ನಾನು ಈಗಲೂ ಬದ್ಧ. ಅಹಿಂದ ವರ್ಗ ನಿಜವಾಗಿ ಸಮಾಧಾನವಾಗಿಲ್ಲ. 2013-18 ರ ಸಿದ್ದರಾಮಯ್ಯಗೂ ಈಗಿನ 2023-28 ಸಿದ್ದರಾಮಯ್ಯಗೂ ಬಹಳ ವ್ಯತ್ಯಾಸ ಇದೆ. ಮುಂದಿನ ಚುನಾವಣೆ ಎರಡು ವರ್ಷ ಇದೆ. ಮುಂದಿನ ರಾಜಕೀಯ ಹೀಗೇ ಆಗಬಹುದು ಎಂಬುದನ್ನು ಹೇಳಲು ಈಗಲೇ ಸಾಧ್ಯವಿಲ್ಲ. ರಾಜಕಾರಣದಲ್ಲಿ ಬಹಳಷ್ಟು ನೀರು ಹರಿಬೇಕಾದ ಸಮಯವೂ ಇದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


