ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಉತ್ತರ–ದಕ್ಷಿಣ ವಿಭಜನೆ ಸೃಷ್ಟಿಸಲು ಯತ್ನಿಸುತ್ತಿದೆ: ಶೋಭಾ ಕರಂದ್ಲಾಜೆ
ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತದೆ ಎಂಬ ಭಯವನ್ನು ಉಂಟುಮಾಡಿ ಜನರನ್ನು ತಪ್ಪು ದಾರಿಗೆಳೆದು, ವಿಧೇಯಕದ ವಿರುದ್ಧ ವಾತಾವರಣ ಸೃಷ್ಟಿಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಉತ್ತರ–ದಕ್ಷಿಣ ವಿಭಜನೆ ಸೃಷ್ಟಿಸಲು ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಆರೋಪಿಸಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಧೇಯಕದ ವಿಚಾರವನ್ನು ಉಲ್ಲೇಖಿಸಿ ಈ ಮಹತ್ವದ ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸಲು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆಂದು ಕಿಡಿಕಾರಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ತಡೆಯಲು ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ಡಿಲಿಮಿಟೇಶನ್ (ಕ್ಷೇತ್ರ ಪುನರ್ವಿಂಗಡಣೆ) ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿವೆ ಎಂದು ಆರೋಪಿಸಿದರು.
ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತದೆ ಎಂಬ ಭಯವನ್ನು ಉಂಟುಮಾಡಿ ಜನರನ್ನು ತಪ್ಪು ದಾರಿಗೆಳೆದು, ವಿಧೇಯಕದ ವಿರುದ್ಧ ವಾತಾವರಣ ಸೃಷ್ಟಿಸಿದ್ದಾರೆಂದು ಹೇಳಿದರು.
ಇದೇ ವೇಳೆ ಡಿಲಿಮಿಟೇಶನ್ ಪ್ರಕ್ರಿಯೆಯ ಕುರಿತು ವಿವರಿಸಿದ ಅವರು, ಇದು ದಕ್ಷಿಣ ರಾಜ್ಯಗಳಿಗೆ ಹಾನಿಕಾರಕವಲ್ಲ, ಬದಲಾಗಿ ಲಾಭದಾಯಕವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಈಗಿರುವ 28 ಲೋಕಸಭಾ ಕ್ಷೇತ್ರಗಳ ಜೊತೆಗೆ 14 ಸ್ಥಾನ ಹೆಚ್ಚಾಗಿ 42 ಆಗುವ ಸಾಧ್ಯತೆ ಇದೆ. ಕೇರಳದಲ್ಲಿ 20ರಿಂದ 30ಕ್ಕೆ, ತಮಿಳುನಾಡಿನಲ್ಲಿ 39ರಿಂದ 78ಕ್ಕೆ ಏರಿಕೆಯಾಗುವ ಅಂದಾಜು ಇದೆ. ಹೀಗಾಗಿ ದಕ್ಷಿಣ ಭಾರತದ ಪ್ರತಿನಿಧಿತ್ವ ಕಡಿಮೆಯಾಗುತ್ತದೆ ಎಂಬ ವಾದ ಅಸತ್ಯ ಎಂದು ಹೇಳಿದರು.
ಇನ್ನು ಮಹಿಳಾ ಮೀಸಲಾತಿ ವಿಧೇಯಕವು ಮಹಿಳೆಯರಿಗೆ ರಾಜಕೀಯದಲ್ಲಿ 33 ಶೇಕಡಾ ಪ್ರತಿನಿಧಿತ್ವ ನೀಡುವ ಉದ್ದೇಶ ಹೊಂದಿದ್ದು, ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದರು.
2023ರಲ್ಲಿ ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕರಿಸಲ್ಪಟ್ಟಿದ್ದರೂ, ಅದರ ಜಾರಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಇನ್ನೂ ಮುಂದುವರಿದಿವೆ. ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಮೀಸಲಾತಿಯ ನ್ಯಾಯಯುತ ವಿತರಣೆಯ ಉದ್ದೇಶವನ್ನು ಹೊಂದಿದೆ. “ನ್ಯಾಯಸಮ್ಮತ ಪ್ರತಿನಿಧಿತ್ವಕ್ಕಾಗಿ ಈ ಕ್ರಮ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಜನರನ್ನು ತಪ್ಪು ಮಾಹಿತಿಯಿಂದ ಗೊಂದಲಕ್ಕೆ ದೂಡುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಉತ್ತರ ಮತ್ತು ದಕ್ಷಿಣ ನಡುವಿನ ಭಿನ್ನತೆ ಹೆಚ್ಚಿಸುವುದು ದೇಶದ ಏಕತೆಗೆ ಹಾನಿಕಾರಕ” ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪದ್ಮಶ್ರೀ ಪುರಸ್ಕೃತ ಸುಶಾಲಿಮ್ಮ ಅವರು ಮಹಿಳೆಯರಿಗೆ ಸಂಘಟಿತ ಹೋರಾಟಕ್ಕೆ ಕರೆ ನೀಡಿದರು.
33 ಶೇಕಡಾ ಮೀಸಲಾತಿ ಸಂಪೂರ್ಣ ಜಾರಿಗೆ ಬರಲು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮಹಿಳಾ ಸಬಲೀಕರಣಕ್ಕೆ ಈ ವಿಧೇಯಕ ಮಹತ್ವದ ಸಾಧನವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



